ಶಿವಮೊಗ್ಗ

ಆಮೆ ಗತಿಯಲ್ಲಿ ಕಾಮಗಾರಿ; ನಾಗರಿಕರಿಗೆ ಕಿರಿಕಿರಿ

Published On :

ಆನಂದರಾಮನ್ ಎಲ್.
ಭದ್ರಾವತಿ: ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಸುಮಾರು ನಾಲ್ಕು ತಿಂಗಳಿಂದ ಕೇವಲ 200 ಮೀಟರ್ ಚರಂಡಿ ಕಾಮಗಾರಿ ನಡೆದಿದ್ದು, ಕಾಮಗಾರಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿರುವ ಗುತ್ತಿಗೆದಾರರು, ನಗರಸಭೆ ಮತ್ತು ನೀರಾವರಿ ಇಲಾಖೆ ಜನರಿಂದ ನಿತ್ಯ ಶಾಪ ಹಾಕಿಸಿಕೊಳ್ಳುವಂತಾಗಿದೆ.
 ನಾಲ್ಕು ತಿಂಗಳಿಂದ ಆಗಿರುವ ಪ್ರಗತಿ ಹಾಲಪ್ಪ ವೃತ್ತದಿಂದ ಕಾರ್ಪೋರೇಶನ್‌ಬ್ಯಾಂಕ್ ವೆರೆಗೆ ಮಾತ್ರ. ಆದರೆ ನೆಲವನ್ನು ಅಗೆದು ಅದನ್ನು ಮುಚ್ಚದೆ ಶನಿವಾರ ಬಂದ ಭಾರೀ ಮಳೆಯಿಂದಾಗಿ ಕೊಚ್ಚೆ ಗುಂಡಿಯಂತಾಗಿದ್ದ ರಸ್ತೆ ಬದಿ ಜನರು ನಡೆಯಲು ಹರಸಾಹಸ ಪಡುತ್ತ ಕಾಮಗಾರಿ ಮಾಡುವವರ ಮೇಲೆ ಹಿಡಿಶಾಪ ಹಾಕುತ್ತಿದ್ದರು.
ಅನುಮತಿ ನೀಡಿದೆಯೇ: ನಗರಸಭೆಗೆ ಈಬಗ್ಗೆ ವಿಚಾರಿಸಿದರೆ ಅದು ಜಲಸಂಪನ್ಮೂಲ ಇಲಾಖೆ ಕಾಮಗಾರಿಯಾಗಿದ್ದು ತಮಗೆ ಸಂಬಂಧವಿಲ್ಲವೆನ್ನುತ್ತಾರೆ. ಆದರೆ ಅಗೆದ ನೆಲದ ಮಣ್ಣನ್ನು ವಾರಗಟ್ಟಲೆ ರಸ್ತೆಯ ಬದಿಯಲ್ಲಿ ಹಾಕಿ ರಸ್ತೆಯನ್ನು ಕಿಷ್ಕಿಂದವಾಗಿಸಲು ನಗರಸಭೆ ಇವರಿಗೆ ಅನುಮತಿ ನೀಡಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ರಸ್ತೆಯಲ್ಲಿ ಜಲ್ಲಿ ರಾಶಿ ಹಾಕಿ ರಸ್ತೆ ಮತ್ತಷ್ಟು ಕಿರಿದಾಗಿಸುವಲ್ಲಿ ಗುತ್ತಿಗೆದಾರರು ಯಶಸ್ವಿಯಾಗಿದ್ದಾರೆ. ರಾತ್ರಿ ವಾಹನ ದಟ್ಟಣೆ ಕಡಮೆ ಇರುವಾಗ ಇಂತಹ ಕೆಲಸ ಮಾಡದೆ ಹಗಲು ವಾಹನ ಸಂಚಾರ ಹೆಚ್ಚಾಗಿರುವಾಗ ಕಾಮಗಾರಿ ಪ್ರಾರಂಭಿಸಿ ವಾಹನ ಸಂಚಾರ ಮತ್ತು ಜನಸಂಚಾರಕ್ಕೆ ಅಡ್ಡಿಮಾಡುತ್ತಾ ಅಪಘಾತಕ್ಕೆ ಆಹ್ವಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.
ಭೇಟಿ ನೀಡಿಯೆ ಇಲ್ಲ: ಇದನ್ನು ಪ್ರಶ್ನಿಸಿದರೆ ಮೇಸ್ತ್ರಿ ಇಲ್ಲ ಬಂದ ನಂತರ ಕೇಳಿ ಎಂದು ಕೆಲಸಗಾರರು ಹಾರಿಕೆಯ ಉತ್ತರ ನೀಡುತ್ತಾರೆ. ಜಲಸಂಪನ್ಮೂಲ ಇಲಾಖೆ ಎಂಜಿನಿಯರ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿಯೆ ಇಲ್ಲವೆಂಬುದು ಸಾರ್ವಜನಿಕರ ದೂರು. ಗುತ್ತಿಗೆದಾರರು ದಾವಣಗೆರೆ ಅಥವಾ ಬಳ್ಳಾರಿಯಲ್ಲಿರುತ್ತಾರೆ. ದೂರವಾಣಿ ಮೂಲಕವಷ್ಟೇ ಅವರನ್ನು ಸಂಪರ್ಕಿಸಲು ಸಾಧ್ಯ. ಮಾತನಾಡಿದರೆ ಸಂಜೆಯೊಳಗೆ ಸರಿಪಡಿಸುತ್ತೇವೆಂದು ಸುಳ್ಳು ಆಶ್ವಾಸನೆ ನೀಡುತ್ತಾರೆಂದು ಸಾರ್ವಜನಿಕರು ದೂರಿದ್ದಾರೆ.
 ಚರಂಡಿ ನಿರ್ಮಿಸಲು ತೆಗೆದ ಮಣ್ಣನ್ನು ಇವರೂ ರಸ್ತೆಯ ಮೇಲೆ ವಾರಗಟ್ಟಲೆ ಬಿಟ್ಟಿರುತ್ತಾರೆ. ಕೇಳಿದರೆ ಮೇಸ್ತ್ರಿ ಇಲ್ಲವೆಂಬ ಹಾರಿಕೆಯ ಉತ್ತರ. ಉಳಿದ ರಸ್ತೆಯ ಮೇಲೂ ಚರಂಡಿ ಕಾಮಗಾರಿಗೆ ತಂದಿರುವ ಮರಳು ಮತ್ತು ಕಲ್ಲನ್ನು ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ ವಾಹನ ಮತ್ತು ಜನಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದನ್ನು ಯಾರೂ ಗಮನಿಸುವವರಿಲ್ಲವೇ ಎಂಬುದು ಬಿ.ಎಚ್. ರಸ್ತೆಯ 5,6, 7, 8 ಮತ್ತು 9ನೇ ತಿರುವಿನ ವಾಸಿಗಳ ಕೂಗು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.