ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ
ಶಿಕಾರಿಪುರ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವ ಗುರಿಯನ್ನು ಪಕ್ಷ ಹೊಂದಿದ್ದು, ಈ ದಿಸೆಯಲ್ಲಿ ತಿಂಗಳ ಕಾಲ ಮೌನವಾಗಿದ್ದು ಎಲ್ಲವನ್ನೂ ಅವಲೋಕಿಸಿ ನಂತರ ಸೂಕ್ತ ತೀರ್ಮಾನವನ್ನು ಪ್ರಕಟಿಸುವುದಾಗಿ ಕರ್ನಾಟಕ ಜನತಾಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ಪಟ್ಟಣದ ಮಂಗಳ ಭವನದ ಹಿಂಭಾಗದಲ್ಲಿ ತಾಲೂಕಿನ ಮತದಾರರಿಗೆ ಪಕ್ಷದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಂಗಿನರಮನೆ: ಯಡಿಯೂರಪ್ಪನವರಿಂದ ಅಧಿಕಾರ ಪಡೆಯಲು ಅಸಾದ್ಯ ಎಂದು ಮನಗಂಡ ಸ್ವಪಕ್ಷೀಯರು ಸುತ್ತಮುತ್ತ ಭಯದ ವಾತಾವರಣ ಸೃಷ್ಟಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕುರ್ಚಿ ಹಿಡಿಯುವ ಪ್ರಯತ್ನದಲ್ಲಿ ಸಫಲರಾದರು. ಇದರಿಂದಾಗಿ ಹಂಗಿನರಮನೆಯನ್ನು ಅನಿವಾರ್ಯವಾಗಿ ತ್ಯಜಿಸಬೇಕಾಯಿತು ಎಂದರು.
ಯಡಿಯೂರಪ್ಪ ಇಲ್ಲದ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 110 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದು, 40 ಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು. ಇದೀಗ ಪಿರಿಯಾಪಟ್ಟಣದ ಮರು ಚುನಾವಣೆಯಲ್ಲಿ ಪುನಃ ಠೇವಣಿ ಕಳೆದುಕೊಳ್ಳಲಿದೆ. ಯಡಿಯೂರಪ್ಪನಿಲ್ಲದ ಪಕ್ಷದ ಗತಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾದು ನೋಡುವಂತೆ ಅವರು ತಿಳಿಸಿದರು.
ಪಕ್ಷ ಸಂಘಟನೆ: ರಾಜ್ಯದಲ್ಲಿ ಕೆಜೆಪಿಯನ್ನು ಬಲವಾಗಿ ಸಂಘಟಿಸಲು ತೀರ್ಮಾನಿಸಿದ್ದು ರಾಜಕೀಯ ಲೆಕ್ಕಾಚಾರ ತಪ್ಪದಂತೆ,ದೃಡ ಹೆಜ್ಜೆ ಇಡಲು ರಾಜ್ಯ ರಾಜಕೀಯವನ್ನು ಮೌನವಾಗಿ ಅವಲೋಕಿಸುತ್ತಿರುವುದಾಗಿ ತಿಳಿಸಿ ಮೌನವನ್ನು ಬಲಹೀನತೆ ಎಂದು ಬಾವಿಸದಂತೆ ವಿರೋಧಿಗಳಿಗೆ ಕಿವಿಮಾತು ಹೇಳಿದರು.
ರಾಜ್ಯ ವಿಧಾನಮಂಡಲ ಅದಿವೇಶನದ ನಂತರದಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ ಅವರು ಮತ್ತೆ ಹಳೆಯ ಪಕ್ಷಕ್ಕೆ ವಾಪಾಸಾಗುವ ಪ್ರಶ್ನೆ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನವನ್ನು ಗಳಿಸುವ ದೃಡ ಸಂಕಲ್ಪವನ್ನು ಕೈಗೊಂಡಿದ್ದು ಇದಕ್ಕೆ ಪೂರಕವಾಗಿ ಪ್ರತಿ ಜಿಲ್ಲೆಯ ಆಯ್ದ 100 ಯುವ ಉತ್ಸಾಹಿ ಸಂಘಟಕರನ್ನು ಗುರುತಿಸಲಾಗುವುದು ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲವು ಸಹಜವಾಗಿದ್ದು ತಾಲೂಕಿನ ಮತದಾರರು ಯಡಿಯೂರಪ್ಪನವರನ್ನು ಗೆಲ್ಲಿಸುವ ಮೂಲಕ ರೈತರ, ಬಡ, ದಲಿತರ ಪರವಾದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.
ಸಾಮರ್ಥ್ಯ ಸಾಬೀತು: ಕಾಡಾ ಮಾಜಿ ಅದ್ಯಕ್ಷ ಶೇಖರಪ್ಪ ಮಾತನಾಡಿ, ಕೇವಲ 3 ತಿಂಗಳ ಅವಧಿಯಲ್ಲಿ ಶೇ.10 ಮತ ಪಡೆದು ಯಡಿಯೂರಪ್ಪನವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದರು.
ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೌಲಾನಾ ಅಮ್ಜದ್ ಹುಸೇನ್ ಹಫೀಜ್ ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲನುಭವಿಸಿದ್ದು ಕಾಂಗ್ರೆಸ್ಗೆ ವರವಾಗಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ನವರ ಫೋಟೋವನ್ನು ಹಾಕಿಕೊಳ್ಳಬೇಕಾಗಿದೆ ಎಂದರು.
ಮತದಾರ ಬಲಿ: ಪ್ರಾಸ್ತಾವಿಕವಾಗಿ ಗುರುಮೂರ್ತಿ ಮಾತನಾಡಿ, ಹಣ, ಹೆಂಡದ ಆಮಿಷಕ್ಕೆ ಮತದಾರರು ಬಲಿಯಾಗಿದ್ದಾರೆ ಎಂದು ವಿರೋಧ ಪಕ್ಷದವರು ಮತದಾರರನ್ನು ಅವಮಾನಿಸಿದ್ದು ಅಕ್ಷ್ಯಮ್ಯ ಎಂದರು.
ಸಂಸದ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಘರಾಜ್, ಮಾಜಿ ಶಾಸಕ ಮಹಾಲಿಂಗಪ್ಪ, ಭೂಕಾಂತ್, ಹಾಲಪ್ಪ, ಮೋಹನ್, ಬಂಗಾರಿನಾಯ್ಕ, ಗಾಯತ್ರಿದೇವಿ,ಶುಭಾ, ಶಾಂತಮ್ಮ, ನಿವೇದಿತಾ, ಡಾ.ರಿಯಾಜ್ ಭಾಷಾ, ಪ್ರವೀಣಶೆಟ್ಟಿ, ತಡಗುಣಿ ಮಂಜುನಾಥ್,ಸಕಲೇಶ್ ಹುಲ್ಮಾರ್, ನ್ಯಾಯವಾಧಿ ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

