ಜೂ.1ರಿಂದ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 26
ಜಾನಪದ ವಿದ್ವಾಂಸ ಸಾಗರದ ಎನ್. ಹುಚ್ಚಪ್ಪ ಮಾಸ್ತರ್ ಅವರ ಸರ್ವಾಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.1ರಿಂದ ಎರಡು ದಿನ ನಗರದಲ್ಲಿ ನಡೆಯಲಿದೆ.
ರಾಜ್ಯ ಸಮ್ಮೇಳನದ ಮಾದರಿಯಂತೆ ಇಲ್ಲಿಯೂ ಮೊದಲ ದಿನ ಮಧ್ಯಾಹ್ನ 3.30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಸಮ್ಮೇಳನ ನಡೆಯಲಿರುವ ಕುವೆಂಪು ರಂಗಮಂದಿರದ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಂತರ ಉದ್ಘಾಟನಾ ಸಮಾರಂಭ ನಡೆಯುವುದು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹಾಗೂ ಜಾನಪದ ತಜ್ಞ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಉದ್ಘಾಟಿಸುವರು.
ರಸಸಂಜೆ ಕಾರ್ಯಕ್ರಮ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಿ.ವಿ. ಜಯಾರಾಜಶೇಖರ್ ಇರುವರು. ವೇದಿಕೆ ಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಯುವುದು.
ಐದು ಸಾವಿರ ಸಾಹಿತ್ಯಾಸಕ್ತರು: ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಕಾರ್ಯಕ್ರಮದ ವಿವರ ನೀಡಿ, ಇಡೀ ಸಮ್ಮೇಳನದಲ್ಲಿ ಜಾನಪದ ಮಾದರಿಗೆ ಒತ್ತು ನೀಡಲಾಗಿದೆ ಎಂದರು. ಸಮ್ಮೇಳನಕ್ಕೆ ಜಿಲ್ಲೆಯಾದ್ಯಂತ ಸುಮಾರು ಐದು ಸಾವಿರ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಪ್ರತಿನಿಧಿಗಳನ್ನು ನೋಂದಾಯಿಸುವ ಕಾರ್ಯ ನಡೆಯುತ್ತಿದೆ. ಪ್ರತಿನಿಧಿಗಳಿಗೆ ಮತ್ತು ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ನೋಂದಾಯಿತ ಪ್ರತಿನಿಧಿಗಳಿಗೆ ಊಟದ ಚೀಟಿ ನೀಡಲಾಗುವುದು ಎಂದರು.
ಪ್ರಾತ್ಯೆಕ್ಷತೆ: ಮೊದಲ ದಿನದಿಂದಲೇ ಶಿವಮೊಗ್ಗ ಜಿಲ್ಲಾ ಚಿತ್ರಕಲಾವಿದರಿಂದ ರಂಗಮಂದಿರ ಆವರಣದಲ್ಲಿ ಚಿತ್ರ ಬರೆಯುವ ಪ್ರಾತ್ಯೆಕ್ಷತೆ ಮತ್ತು ಛಾಯಾಚಿತ್ರ ಪ್ರದರ್ಶನ ಚಿತ್ರ ಕಲಾವಿದೆ ಕಾತ್ಯಾಯಿನಿ ಅವರ ನೇತೃತ್ವದಲ್ಲಿ ನಡೆಯಲಿದೆ. ಎರಡನೇ ದಿನವಾದ ಜೂ. 2ರಂದು ಕುವೆಂಪು ರಂಗಮಂದಿರ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುವುದು. ಇಡೀ ಸಮ್ಮೇಳನದಲ್ಲಿ ಎಲ್ಲಾ ಗೋಷ್ಠಿಗಳಿಗೂ ಜಾನಪದ ಶೀರ್ಷಿಕೆ ನೀಡಲಾಗಿದೆ.
ಗೋಷ್ಠಿಗಳು: ಈ ಬಾರಿ ಗೋಷ್ಠಿಯಲ್ಲಿ ಡಾ.ನಾ. ಡಿಸೋಜ, ಡಾ.ಎಚ್.ಎಸ್. ಅನುಪಮ, ಪ್ರೊ.ಜಿ.ಕೆ. ಗೋವಿಂದರಾವ್, ಡಾ.ಕುಂ. ವೀರಭದ್ರಪ್ಪ, ಡಾ. ರಂಗರಾಜ ವನದುರ್ಗ, ಡಾ. ಮೋಹನ್ ಚಂದ್ರಗುತ್ತಿ, ಡಾ. ಸಣ್ಣರಾಮ, ಮಾರ್ಪಳ್ಳಿ ಆರ್. ಮಂಜುನಾಥ್, ಡಾ.ಕೆ.ಎಲ್. ಶ್ರೀಪತಿ, ಡಾ. ಸಾಮಕ್, ಡಾ.ಕೆ. ಪ್ರಭಾಕರ ರಾವ್, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಕೆ. ದಿನೇಶ್ ಸಿದ್ದಾಪುರ, ಡಾ. ಹಾ. ಉಮೇಶ್ ಸೊರಬ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸುವರು. ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಪಾಲ್ಗೊಳ್ಳುವರು.
ಹಿರಿಯ ಕವಯಿತ್ರಿ ಪ್ರೊ.ಚ. ಸರ್ವಮಂಗಳ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಪ್ರೊ.ಸ. ಉಷಾ, ಪ್ರೊ. ಸತ್ಯನಾರಾಯಣ ರಾವ್ ಅಣತಿ, ಶೇಷಾದ್ರಿ ಕಿನಾರ, ಡಾ. ಕುಮಾರಚಲ್ಯ, ಅಸಾದುಲ್ಲಾ ಬೇಗ್, ಪ್ರೊ.ಎಸ್.ಪಿ. ಪದ್ಮಪ್ರಸಾದ್, ಪ್ರೊ. ಕೆ. ಓಂಕಾರಪ್ಪ, ಊರ್ಮಿಳಾರಾವ್, ರವೀಂದ್ರಭಟ್ಟ ಕುಳಿಬೀಡು, ತಾಜುಮಾ ಭಾಗವಹಿಸುವರು.
ಎರಡನೇ ದಿನ ಸಮಾನಾಂತರ ಗೋಷ್ಠಿ ನಡೆಯಲಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಸಭಾಂಗಣದಲ್ಲಿ ಕಾವ್ಯ ಸುಧೆ ಹರಿಯಲಿದ್ದು, ನಾಲ್ಕು ಕವಿಗೋಷ್ಠಿ ನಡೆಯಲಿವೆ. ಇದರಲ್ಲಿ ಮಕ್ಕಳ ಕವಿಗೋಷ್ಠಿಯೂ ಒಂದು. ಒಟ್ಟು 107 ಕವಿಗಳು ಕವನ ವಾಚಿಸುವರು.
ಎರಡನೇ ದಿನ ಬೆಳಿಗ್ಗೆ ಆಂಜನೇಯ ಜೋಗಿ ಮತ್ತು ತಂಡದಿಂದ ಜನಪದ ಗೀತೆ ಗಾಯನ ನಡೆಯಲಿದ್ದು, ಸಂಜೆ ಕಾಂತೇಶ್ ಕದರಮಂಡಲಗಿ ಹಾಗೂ ಪ್ರೊ. ಇಟಗಿ ಈರಣ್ಣ ಅವರ ನಿರ್ದೇಶನದಲ್ಲಿ ಗೀತ-ಸಂಗೀತ-ನೃತ್ಯ ಕಾರ್ಯಕ್ರಮ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

