ಸ್ವಚ್ಛ ಆಡಳಿತ ನೀಡಲು ಸಹಕಾರಿ ನೀಡಿ
ಸಾಗರ: ಹೋರಾಟದ ಇಚ್ಚಾಸಕ್ತಿಯನ್ನು ಪೂರೈಸುವವರೆಗೆ ವಿರಮಿಸುವುದಿಲ್ಲ ಎಂದು ಶಾಸಕ ಕಾಗೋಡು ತಿಮ್ಮಪ್ಪ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ, ಮತನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ಈ ಬಾರಿಯ ಚುನಾವಣೆ ಹಲವಾರು ಸವಾಲುಗಳನ್ನು ತಂದಿತ್ತು. ಅವೆಲ್ಲದಕ್ಕೂ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಬಹುಮತ ನೀಡಿ ಇತಿಹಾಸ ನಿರ್ಮಿಸಿದ ಮತದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕಿದೆ. ಕ್ಷೇತ್ರಕ್ಕೆ ಅಮರಿಕೊಂಡಿದ್ದ ಶನಿಯನ್ನು ತೊಲಗಿಸಿಯಾಗಿದ್ದು ಈಗ ಶುದ್ಧೀಕರಣ ಮಾಡಬೇಕಾಗಿದೆ ಎಂದರು.
ಧ್ವನಿಯೇ ಶಕ್ತಿ: ಕೆಲಸ ಮಾಡಲು ಯಾವುದೇ ಸ್ಥಾನ-ಮಾನ ಬೇಡ. ಬಾಯಿ ಬಿದ್ದುಹೋದ ಶಾಸಕ ನಾನಲ್ಲ. ಧ್ವನಿಯೇ ಶಕ್ತಿಯಾಗಿದ್ದು ಇದರಿಂದಲೇ ನ್ಯಾಯ ಪಡೆದಿದ್ದೇನೆ. ಮುಂದೆಯೂ ನ್ಯಾಯ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಜನಪ್ರತಿನಿಧಿಯಾದವನು ಜನರ ಕಷ್ಟದ ಕಾಲದಲ್ಲಿ ಅವರ ಜೊತೆಗಿರಬೇಕು. ಜನರಿಂದ ಆಯ್ಕೆಯಾದವರು ಜನರಿಗಾಗಿ ಹಗಲು ರಾತ್ರಿ ಕೆಲಸ ಮಾಡಬೇಕು. ಅಧಿಕಾರಿಗಳು ಅಥವಾ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಜವಾಬ್ದಾತಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಯಾವ ಮುಲಾಜು ಇಲ್ಲದೆ ಚಾಟಿ ಬೀಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯಹಕ್ಕು ಕಾಯ್ದೆ: ಮುಂದಿನ ಮೂರು ತಿಂಗಳಲ್ಲಿ ನಿವೇಶನರಹಿತರಿಗೆ ನೀವೇಶನ ನೀಡಲಾಗುವುದು ಎಂದ ಕಾಗೋಡು ಇಂಡೀಕರಣವೆಂಬ ರಾಕ್ಷಸನನ್ನು ಹೊಡೆದೋಡಿಸುವುದು, ಬಗರ್ ಹುಕುಂ ಸಮಸ್ಯೆ ನಿವಾರಣೆ, ಅರಣ್ಯಹಕ್ಕು ಕಾಯ್ದೆ ಅನುಷ್ಠಾನ ಸೇರಿದಂತೆ ಎಲ್ಲವನ್ನೂ ಬಗೆಹರಿಸಲಾಗುವುದು. ಸ್ವಚ್ಛತೆಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎನ್ನುವುದು ನನ್ನ ಇಚ್ಚೆಯಾಗಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ಹೇಳಿದರು.
ಭರವಸೆ: ಮತ್ತೋರ್ವ ಅಭಿನಂದಿತರಾದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಗುಣಾತ್ಮಕ ಶಿಕ್ಷಣ ಕೊಡುವ ವ್ಯವಸ್ಥೆ ಮಾಡದಿದ್ದರೆ ಉಳಿದ ಯಾವ ಯೋಜನೆಗಳಿಂದಲೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದೊಳಗಾಗಿ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ನೈತಿಕ ಬೆಂಬಲ: ಕಳೆದ ಎರಡು ಅವಧಿಯಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಿ ಈ ಕ್ಷೇತ್ರದ ಜನ ತಪ್ಪು ಮಾಡಿದ್ದರು. ಆದರೆ ಈ ಬಾರಿ ಭಾರಿ ಬಹುಮತ ನೀಡಿ ಗೆಲ್ಲಿಸಿರುವುದು ಸಂತೋಷದ ಸಂಗತಿ. ಕಾಗೋಡು ತಿಮ್ಮಪ್ಪನವರು ಇಡೀ ರಾಜ್ಯದ ಆಸ್ತಿಯಾಗಿದ್ದು ಅವರಿಗೆ ನೈತಿಕ ಬೆಂಬಲ ನೀಡುವುದು ಎಲ್ಲರ ಕರ್ತವ್ಯ. ಕಾಗೋಡರ ಎದುರಿಗೆ ನಾನು ಮಂತ್ರಿ ಅಲ್ಲ ಎಂದರು.
ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹಾಗೂ ನ್ಯಾಯವಾದಿ ಕೆ. ದಿವಾಕರ್ ಅಭಿನಂದನಾ ಭಾಷಣ ಮಾಡಿದರು. ಪ್ರಸನ್ನ ಕುಮಾರ್, ಕೆ. ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಈಳಿ ನಾರಾಯಣಪ್ಪ, ಅಹ್ಮದಾಲಿಖಾನ್, ಎನ್.ಜಿ.ಪೈ, ಐ.ಎನ್. ಸುರೇಶಬಾಬು, ತೀ.ನ. ಶ್ರೀನಿವಾಸ್, ಕಲಗೋಡು ರತ್ನಾಕರ್, ಮಹಾಬಲೇಶ್ವರ ಕುಗ್ವೆ, ತಾರಾಮೂರ್ತಿ, ನಂದಾ ಗೊಜನೂರು, ಎನ್. ಲಲಿತಮ್ಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

