'ಯುವಪೀಳಿಗೆಗೆ ಹಳೆಗನ್ನಡ ಕಾವ್ಯ ಪರಿಚಯಿಸಬೇಕು'
ಕ.ಪ್ರ. ವಾರ್ತೆ ಸಾಗರ ಮೇ 28
ಮಾತೃ ಭಾಷೆ ಮತ್ತು ಸಮಾಜದ ನಡುವಿನ ಸಂಬಂಧ ಅನ್ಯೂನ್ಯವಾಗಿರಬೇಕು. ಮಾತೃಭಾಷೆಯನ್ನು ನಾವು ಕೈಬಿಟ್ಟರೆ ಭಾಷೆಯೂ ನಮ್ಮಿಂದ ದೂರವಾಗಿ ನಾವು ಅನಾಥರಾಗುತ್ತೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಂ.ವೀರಭದ್ರಪ್ಪ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮೂರನೆ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಇಂದಿನ ಮಕ್ಕಳು ಕನ್ನಡವನ್ನು ಮಾತನಾಡದೇ ಇರುವ ನಿರ್ವಾತ
ಸ್ಥಿತಿ ಸೃಷ್ಟಿಯಾಗಿದೆ. ಭಾಷೆಯಿಂದ ದೂರವಾಗುವ ಮಗು ಸಮಾಜಕ್ಕೆ ಶತೃ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಸಾಹತುಶಾಹಿಯ ಕುರುಹು: ಆಧುನಿಕ ಶಿಕ್ಷಣ ಶುರುವಾದ ಕ್ಷಣದಿಂದಲೇ ಮಾತೃಭಾಷೆಯ ಅವನತಿ ಪ್ರಾರಂಭವಾಯಿತು. ಆಧುನಿಕ ಶಿಕ್ಷಣದ ಮೂಲಕ ಮಾತೃಭಾಷೆಯನ್ನು ಬದುಕಿನ ನೇಪಥ್ಯಕ್ಕೆ ಸರಿಸುವ ಹುನ್ನಾರ ನಡೆಯುತ್ತಿದೆ. ಇಂಗ್ಲಿಷ್ ವಸಾಹತುಶಾಹಿಯ ಕುರುಹಾಗಿದ್ದು ಈ ಭಾಷೆಗೆ ತನ್ನದೆ ಆದ ನುಡಿಗಟ್ಟಾಗಲೀ, ವರ್ಣಮಾಲೆಯಾಗಲಿ ಇಲ್ಲ. ನಮ್ಮ ನಾಡಿನಲ್ಲಿ ಆಗಿಹೋಗಿರುವ ಖ್ಯಾತನಾಮರೆಲ್ಲ ಕನ್ನಡಮಾಧ್ಯಮದಲ್ಲಿಯೇ ಓದಿದ್ದು ಎನ್ನುವುದನ್ನು ಯುವಪೀಳಿಗೆ ಮರೆಯಬಾರದು ಎಂದರು.
ಹಿಂದೆ ಹಳಗನ್ನಡವನ್ನು ಬಾಯಿಪಾಠ ಮಾಡಲಾಗುತ್ತಿತ್ತು. ಆದರೆ ಈಗ ಶಾಲೆಯಲ್ಲಾಗಲೀ, ಮನೆಯಲ್ಲಾಗಲಿ ಬಾಯಿಪಾಠ ಸಂಸ್ಕೃತಿ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನ ನಡೆಸುವುದಷ್ಟಕ್ಕೆ ಸೀಮಿತವಾಗದೇ ಯುವಪೀಳಿಗೆಗೆ ಹಳಗನ್ನಡ ಕಾವ್ಯವನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕಾಗೋಡು ತಿಮ್ಮಪ್ಪ, ಬರೆಯುವವರು, ಚಿಂತಕರು, ಸಾಹಿತಿಗಳು, ಕಲಾವಿದರು ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಕೇವಲ ಬರವಣಿಗೆ, ಹೋರಾಟ ಮಾತ್ರ ಸಾಲದು. ಜೊತೆಜೊತೆಗೆ ನಿರ್ಧಿಷ್ಟವಾದ ಕಾರ್ಯಯೋಜನೆ ಅಗತ್ಯ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಎನ್.ಹುಚ್ಚಪ್ಪ ಮಾಸ್ತರ, ಇತಿಹಾಸ ಸಂಶೋಧಕ ಡಾ.ಗುಂಡಾ ಜೋಯಿಸ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ತಾ. ಪಂ.ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಜಿ.ಪಂ.ಸದಸ್ಯರಾದ ಲಲಿತಾ ನಾರಾಯಣ, ಸುಮಂಗಲ ರಾಮಕೃಷ್ಣ, ಪದ್ಮಾವತಿ ಚಂದ್ರಕುಮಾರ್, ನಗರಸಭೆ ಸದಸ್ಯ ಐ.ಎನ್.ಸುರೇಶಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಉದಯಕುಮಾರ ಶೆಟ್ಟಿ, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಕೃಷ್ಣಮೂರ್ತಿ ವಾಮನಾಚಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

