ಶಿವಮೊಗ್ಗ

ಸಾಗರ ತಾಪಂ ಅಧ್ಯಕ್ಷರಾಗಿ ಗಂಟೆ ಹರೀಶ್ ಆಯ್ಕೆ

Published On :

ಸಾಗರ: ಇಲ್ಲಿನ ತಾಪಂ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗಂಟೆ ಹರೀಶ್ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಅಂತಿಮವಾಗಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲು ಉಂಟಾಗಿ ಮತ್ತೊಬ್ಬ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಇದರಿಂದ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇದೆ ಎನ್ನುವುದು ಜಗಜ್ಜಾಹೀರಾದಂತಾಗಿದೆ.
ಒಟ್ಟು 14 ಸದಸ್ಯ ಬಲವಿರುವ ಸಾಗರ ತಾಲೂಕು ಪಂಚಾಯ್ತಿಯಲ್ಲಿ ಎಲ್ಲ ಸದಸ್ಯರೂ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತುಮರಿ ಕ್ಷೇತ್ರದ ಗಂಟೆ ಹರೀಶ್ 10 ಮತಗಳನ್ನು ಪಡೆದು ಜಯಗಳಿಸಿದರೆ, ಎದುರಾಳಿಯಾಗಿ ಸ್ಪರ್ಧಿಸಿದ್ದ ಹೊಸೂರು ಕ್ಷೇತ್ರದ ಜ್ಯೋತಿ ಮುರಳಿಧರ್ 4 ಮತವನ್ನು ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ.
ಹರೀಶ್ ಗಂಡೆ ಆಯ್ಕೆ: ಸ್ಥಳೀಯ ಕಾಂಗ್ರೆಸ್ ವರಿಷ್ಠರು ಪಕ್ಷದಿಂದ ಜ್ಯೋತಿ ಮುರಳಿಧರ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ ಗಂಟೆ ಹರೀಶ್ ಕೂಡ ನಾಮಪತ್ರ ಸಲ್ಲಿಸಿದ್ದರು. ಇದಕ್ಕಾಗಿ ಪಕ್ಷದ ವರಿಷ್ಠರು ಅಧಿಕೃತ ಅಭ್ಯರ್ಥಿಗೆ ಮತ ಹಾಕುವಂತೆ ವಿಪ್ ಜಾರಿಗೊಳಿಸಿದ್ದರು. ಆದರೆ ನಾಲ್ವರು ಸದಸ್ಯರು ಮಾತ್ರ ವಿಪ್ ಪಡೆದಿದ್ದರು ಎನ್ನಲಾಗಿದೆ. ಅಂತಿಮ ಕ್ಷಣದವರೆಗೂ ಹರೀಶ್ ಗಂಟೆ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದ ಪ್ರಯತ್ನ ವಿಫಲವಾಯಿತು.
ಹತ್ತಕ್ಕೂ ಹೆಚ್ಚು ಸದಸ್ಯರು ಹರೀಶ್ ಗಂಟೆ ಅವರೆ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಾಗ ಜ್ಯೋತಿ ಮುರಳಿಧರ್ ತಮ್ಮ ಅಭ್ಯರ್ಥಿತನವನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಣೆ ಮಾಡಿದರು. ಅಷ್ಟರಲ್ಲಿ ನಾಮಪತ್ರ ಹಿಂದಕ್ಕೆ ಪಡೆಯುವ ಸಮಯ ಮೀರಿ ಹೋಗಿದ್ದರಿಂದ ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಚುನಾವಣೆ ಘೋಷಣೆ ಮಾಡಿದರು.
ನಂತರ ನಡೆದ ಚುನಾವಣೆಯಲ್ಲಿ ಹರೀಶ್ ಗಂಟೆ 10 ಮತ ಪಡೆಯುವ ಮೂಲಕ ವಿಜಯದ ನಗೆ ಬೀರಿದರು. ವರಿಷ್ಠರ ಮಾತನ್ನು ಕಡೆಗಣಿಸಿ ಪಕ್ಷದ ಇಬ್ಬರು ಚುನಾವಣೆಗೆ ನಿಂತಿರುವುದು ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲುಂಡಿರುವುದು ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಣ ಸದಸ್ಯರ ಮೇಲೆ ಇಲ್ಲದಿರುವುದು ಹಾಗೂ ಭಿನ್ನಮತ ಇದೆ ಎನ್ನುವುದು ಸಾಬೀತಾಗಿದೆ.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಗಂಟೆ ಹರೀಶ್ ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆ ನಡೆದಾಗ ಕಾಗೋಡು ತಿಮ್ಮಪ್ಪ ಅವರನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಿದರು. ತಾಪಂ ಅಧ್ಯಕ್ಷ ಸ್ಥಾನ ಮೊದಲ ಅವಧಿಗೆ ನನಗೆ ಸಿಗಬೇಕಾಗಿತ್ತು. ಆದರೆ ಹಿರಿತನದ ಆಧಾರದ ಮೇಲೆ ಪ್ರಕಾಶ್ ಲ್ಯಾವಿಗೆರೆ, ಷಣ್ಮುಖಪ್ಪ ಹಾಗೂ ಮಹಾಬಲೇಶ್ವರ ಕುಗ್ವೆ ಅವರನ್ನು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಮುಂದಿನ ಅವಧಿಯಲ್ಲಿ ನನಗೆ ಅಧ್ಯಕ್ಷಸ್ಥಾನ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು ಎಂದರು.
ತಾಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಮಹಾಬಲೇಶ್ವರ ಕುಗ್ವೆ, ಪ್ರಕಾಶ್ ಲ್ಯಾವಿಗೆರೆ, ಷಣ್ಮುಖಪ್ಪ, ಶ್ಯಾಮಲ ದೇವರಾಜ್, ಸೈಯದ್ ಇಬ್ರಾಹಿಂ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.