ಶಿವಮೊಗ್ಗ

ಬೆಳಕಿನ ಹಬ್ಬ ಆಚರಣೆಗೆ ಸಿದ್ಧತೆ

Published On :

ಕ.ಪ್ರ. ವಾರ್ತೆ, ಸೊರಬ, ನ.3
ಈ ವರ್ಷ ಅತಿವೃಷ್ಟಿಯಿಂದಾಗಿ ತಾಲೂಕಿನ ಜನತೆ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ವರ್ಷದ ದೊಡ್ಡ ಹಬ್ಬ ದೀಪಾವಳಿ ಆಚರಣೆಗೆ ಮಾತ್ರ ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಗೋವಿನ ಕಾಲುಪೂಜೆ ಸಾಮಗ್ರಿ, ಅಲಂಕಾರದ ಬಣ್ಣ, ಮನೆ, ಎತ್ತಿನ ಗಾಡಿ ಅಲಂಕಾರಕ್ಕಾಗಿ ಬೇಕಾಗುವ ಸಲಕರಣೆ, ಹೂವು, ಹಣ್ಣು, ಬಟ್ಟೆ, ಬಂಗಾರ ಇತ್ಯಾದಿ ಖರೀದಿಯೊಂದಿಗೆ ಹಬ್ಬದ ತಯಾರಿ ನಡೆದಿದೆ. ಭಾನುವಾರ ಗ್ರಾಮಾಂತರ ಪ್ರದೇಶದಲ್ಲಿ ಬೂರೆ ನೀರು ತರುವ ಸಂಭ್ರಮದಲ್ಲಿ ಹೆಂಗಳೆಯರು ತೊಡಗಿದ್ದರೆ, ಇತ್ತ ಪುರುಷ, ಬಾಲಕರು, ಜಾನುವಾರು ಮೆರವಣಿಗೆಯ ಹಗ್ಗ, ಬಣ್ಣದ ಕೋಲು, ಗಾಡಿಗೆ ಬಣ್ಣ ಬಳಿಯುವುದು, ಬಲೀಂದ್ರನ ಪೂಜೆಗೆ ಅಗತ್ಯವಿರುವ ಸಾಮಗ್ರಿ ಹೆಕ್ಕುವುದು, ಜಾನುವಾರು ಮೈ ತೊಳೆಯುವುದು ಮುಂತಾದ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಕಾಯಿ ಕುಟ್ಟುವ ಆಟಕ್ಕೆ ಬೇಕಾದ ಸಣ್ಣ ತೆಂಗಿನ ಕಾಯಿ ಹುಡುಕಾಟ, ಹುಲಿ, ಕರಡಿ ವೇಷಕ್ಕೆ ಬೇಕಾದ ಸಲಕರಣೆ ಸಿದ್ಧಗೊಂಡಿದೆ. ಇಷ್ಟೆಲ್ಲ ಸಡಗರದ ನಡುವೆಯೂ ಬೂರೆ ಅಮವಾಸ್ಯೆಯಂದು ಹಿರಿಯರ ಹಬ್ಬವೂ ನಡೆಯಬೇಕಿದ್ದು, ವಿವಿಧ ಖಾದ್ಯಗಳ ಎಡೆ, ನೆಂಟರಿಷ್ಟರ ಊಟೋಪಚಾರವು ನಡೆದಿದೆ. ಹೂವು ಹಣ್ಣಿನ ವ್ಯಾಪಾರ ಕ್ಷೀಣಿಸಿದ್ದು, ಪಟಾಕಿ ಖರೀದಿ ತೀರಾ ಸಪ್ಪೆಯಾಗಿದೆ. ವ್ಯಾಪಾರ ವಹಿವಾಟು ಗಣನೀಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ನಡೆದ ಲಕ್ಷ್ಮೀ ಪೂಜೆಯ ಉತ್ಸಾಹ ಕೂಡ ಸಪ್ಪೆಯಾಗಿತ್ತು.
ಶಾಸಕ ಮಧು ಬಂಗಾರಪ್ಪ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಎಚ್. ಹಾಲಪ್ಪ ಅವರು ಕ್ಷೇತ್ರದ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.