ಶಿವಮೊಗ್ಗ

ಕಾಯಕಲ್ಪಕ್ಕೆ ಕಾದಿದೆ ಅಂಬೇಡ್ಕರ್ ಭವನ

Published On :

ಶಿವಮೊಗ್ಗ: ಕಿತ್ತು ಹೋಗುತ್ತಿರುವ ವೆಲ್‌ವೆಟ್... ತುಕ್ಕು ಹಿಡಿದ ಕುರ್ಚಿಗಳು... ಸೋರುತ್ತಿರುವ ಚಾವಣಿ... ಆಗಿಂದಾಗ್ಗೆ ಕೈಕೊಡುವ ವಿದ್ಯುತ್ ಸಂಪರ್ಕ...
- ಇದು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸ್ಥೂಲ ಚಿತ್ರಣ.
ಕಲೆ, ಸಾಹಿತ್ಯ, ಸಂಸ್ಕೃತಿಗೆ ಜಿಲ್ಲೆಯು ಹೆಸರುವಾಸಿ. ಜಿಲ್ಲಾ ಕೇಂದ್ರದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ವಿಚಾರ ಸಂಕಿರಣ ಹೀಗೆ ಹತ್ತಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವ ದೆಸೆಯಲ್ಲಿ ಜಿಲ್ಲಾಡಳಿತ ಕುವೆಂಪು ರಂಗಮಂದಿರ, ಅಂಬೇಡ್ಕರ್ ಭವನ ಹಾಗೂ ಸುವರ್ಣ ಸಂಸ್ಕೃತಿ ಭವನ ಎಂಬ ಮೂರು ಭವನ ನಿರ್ಮಾಣ ಮಾಡಿದೆ. ಆದರೆ, ಅಂಬೇಡ್ಕರ್ ಭವನ ಮಾತ್ರ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಕೋಟಿ ಖರ್ಚು: ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ 2005ರ ಏ.14 ರಂದು ನೂತನವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಅಂಜನಮೂರ್ತಿ ಭವನದೊಂದಿಗೆ, ಗ್ರಂಥಾಲಯ ಮತ್ತು ಪ್ರೊಜೆಕ್ಟರ್‌ಗಳನ್ನು ಉದ್ಘಾಟಿಸಿದ್ದರು. ಸುಮಾರು 1.05 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಗೊಂಡಿದ್ದು, 400ಕ್ಕೂ ಹೆಚ್ಚು ಆಸನಗಳನ್ನು ಭವನ ಹೊಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಭವನದ ಸ್ಥಿತಿ ಹೇಳತೀರದಾಗಿದೆ. ಇಲ್ಲಿರುವ ಕಬ್ಬಿಣದ ಕುರ್ಚಿಗಳು ತುಕ್ಕು ಹಿಡಿದಿವೆ. ಇಲ್ಲಿ ಕುಳಿತುಕೊಂಡರೆ ಬಟ್ಟೆ ಹರಿಯುತ್ತದೆ ಅಥವಾ ಬಟ್ಟೆಗೆ ತುಕ್ಕಿನ ಬಣ್ಣ ಅಂಟಿಕೊಳ್ಳುತ್ತದೆ. ಅದರೊಂದಿಗೆ ವಿದ್ಯುತ್ ಸಂಪರ್ಕದಲ್ಲೂ ಅವ್ಯವಸ್ಥೆ ಇದೆ. ಭವನದ ವೈರಿಂಗ್ ಹಾಳಾಗಿರುವುದರಿಂದ ಕಾರ್ಯಕ್ರಮದ ಮಧ್ಯೆ ಶಾರ್ಟ್ ಸರ್ಕ್ಯೂಟ್ (ವೇದಿಕೆ ಪಕ್ಕದ ಧ್ವನಿವರ್ಧಕ ಭಾಗದಲ್ಲಿ) ಕಾಣಿಸಿಕೊಂಡ ಉದಾಹರಣೆಗಳು ಕೂಡ ಇವೆ.
ಭವನದ ಒಳಭಾಗ ಸೌಂದರ್ಯದಿಂದ ಕಾಣಲು ಕೆಂಪು ಬಣ್ಣದ ವೆಲ್‌ವೆಟ್ ಹಾಕಲಾಗಿದೆ. ಆದರೆ, ಇಂದು ಅವುಗಳ ಹರಿದು ಹೋಗುತ್ತಿವೆ. ವೇದಿಕೆ ಮೇಲ್ಭಾಗ ಹಾಗೂ ಬಲ ಮತ್ತು ಎಡ ಭಾಗದಲ್ಲಿ ವೆಲ್‌ವೆಟ್‌ಗಳು ಬಹುತೇಕ ಹರಿದು ಹೋಗಿವೆ. ಹೆಚ್ಚಾಗಿ ಮಳೆ ಬಂತೆಂದರೆ ಭವನದ ಮೇಲ್ಭಾಗದಿಂದ ನೀರು ಸೋರುವುದು ಸಾಮಾನ್ಯವಾಗಿದೆ.
ಇನ್ನು ಭವನದ ಹೊರಭಾಗದಲ್ಲಿ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಕೊಡಿವೆ. ಇದನ್ನು ಕೂಡ ಸ್ವಚ್ಛ ಮಾಡುವ ಗೋಜಿಗೆ ಹೋಗಿಲ್ಲ ಆಡಳಿತ ಮಂಡಳಿ. ಪಕ್ಕದಲ್ಲೆ ಚರಂಡಿ ಹಾದು ಹೋಗಿರುವುದರಿಂದ ಸೊಳ್ಳೆಗಳ ತಾಣವಾಗಿದೆ.
ಬೇಡಿಕೆ ಕಡಿಮೆ: ಕುವೆಂಪು ರಂಗಮಂದಿರ, ಸುವರ್ಣ ಸಂಸ್ಕೃತಿ ಭವನಗಳಿಗೆ ಸಿಗುವ ಬೇಡಿಕೆ ಅಂಬೇಡ್ಕರ್ ಭವನಕ್ಕಿಲ್ಲ. ಕಾರಣವಿಷ್ಟೇ, ಕುವೆಂಪು ರಂಗಮಂದಿರ ಮತ್ತು ಸುವರ್ಣ ಸಂಸ್ಕೃತಿ ಭವನ ಎಲ್ಲಾ ರೀತಿಯಲ್ಲೂ ಕಲಾವಿದರಿಗೆ ವರದಾನವಾಗಿದೆ. ಆದರೆ, ಅಂಬೇಡ್ಕರ್ ಭವನದಲ್ಲಿ ಸರಿಯಾದ ವೇದಿಕೆಯಾಗಲಿ, ಕುಳಿತುಕೊಳ್ಳುವ ಆಸನಗಳಾಗಲಿ, ಭವನದ ಸುತ್ತಮುತ್ತ ಸ್ವಚ್ಛತೆಯೆಂಬುದಿಲ್ಲ ಎಂಬುದು ಕಾರ್ಯಕ್ರಮ ಆಯೋಜಕರೊಬ್ಬರ ವಾದ.
ಭವನವದ ನಿರ್ವಹಣೆಯಲ್ಲಿ ಲೋಪದೋಷಗಳಿವೆ ಎಂದು ದಲಿತ ಸಂಘರ್ಷ ಸಮಿತಿ ಹಲವಾರು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ತೀವ್ರವಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರಿಂದ 40 ಲಕ್ಷ ವೆಚ್ಚದ ಕಾಮಗಾರಿ ಯೋಜನೆ ಸಿದ್ಧಗೊಂಡಿತ್ತು.
ಈ ಕಾಮಗಾರಿ ಮುಗಿಯುವವರೆಗೂ ಭವನವನ್ನು ಬಾಡಿಗೆಗೆ ನೀಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಇದುವರೆಗೂ ಆಗಿಲ್ಲ ಎಂಬುಂದು ಸಮಿತಿ ಆರೋಪ.
ಸಮರ್ಪಕ ನಿರ್ವಹಣೆ ಇಲ್ಲ: ಭವನ ಜಿಲ್ಲಾಡಳಿತದ ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯಾಪ್ತಿಗೊಳಪಟ್ಟಿದ್ದು, ಸಾರ್ವಜನಿಕ ಸಂಘ, ಸಂಸ್ಥೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ನಿಗದಿತ ಬಾಡಿಗೆ ಆಧಾರದ ಮೇಲೆ ಭವನ ನೀಡಲಾಗುತ್ತಿದೆಯಾದರೂ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭವನದ ಸುತ್ತಮುತ್ತ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಎಲ್ಲೆಂದರಲ್ಲಿ ಮದ್ಯ ಬಾಟಲಿಗಳು ಬಿದ್ದಿವೆ. ಭವನ ನಿರ್ಮಾಣಗೊಂಡ 8 ವರ್ಷದಲ್ಲಿ ಭವನದ ಸ್ಥಿತಿ ಸಂಪೂರ್ಣ ಹದಗೆಡಲು ಸೂಕ್ತ ನಿರ್ವಹಣೆ ಇಲ್ಲದಿರುವುದೇ ಕಾರಣ ಎಂದು ದಲಿತ ಸಂಘಟನೆಗಳು ಆರೋಪ ಮಾಡಿವೆ.

ಆಗಬೇಕಾಗಿರುವುದೇನು?
ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಕಡ್ಡಾಯವಾಗಿ ಅಂಬೇಡ್ಕರ್ ಭವನದಲ್ಲಿಯೇ ನಡೆಯುವಂತೆ ಮಾಡಿ ಕುವೆಂಪು ರಂಗಮಂದಿರದ ಮೇಲಿನ ಒತ್ತಡ ಕಡಿಮೆ ಮಾಡಬೇಕು.
ಅಂಬೇಡ್ಕರ್ ಭವನವನ್ನು ಕುವೆಂಪು ರಂಗಮಂದಿರಕ್ಕೆ ಸಮಾನಾಂತರವಾಗಿ ಅಭಿವೃದ್ಧಿಪಡಿಸಬೇಕು.
ಧ್ವನಿ ಹಾಗೂ ಬೆಳಕು ವ್ಯವಸ್ಥೆ ಉನ್ನತೀಕರಿಸಬೇಕು.
ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆ ಮಾಡಬೇಕು.
ಪಾರ್ಕಿಂಗ್ ಸ್ಥಳಕ್ಕೆ ಹೋಗುವ ಮಾರ್ಗದ ಡಾಂಬರೀಕರಣ ಮಾಡಬೇಕು.
ಸುವ್ಯವಸ್ಥಿತ ಗ್ರೀನ್‌ರೂಮ್ ರೂಪಿಸಬೇಕು.
ಅಂಬೇಡ್ಕರ್ ಭವನದಲ್ಲಿ ನಿಯಮಿತವಾಗಿ ಸಂಗೀತ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಬೇಕು.
ಹಾಲಿ ಅಂಬೇಡ್ಕರ್ ಭವನ ಬಾಡಿಗೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿತಗೊಳಿಸಬೇಕು.
ಶಾಲೆ- ಕಾಲೇಜು ಆಡಳಿತ ಮಂಡಳಿಗಳ ಮನವೊಲಿಸಿ ವಾರ್ಷಿಕೋತ್ಸವ ಕಾರ್ಯಕ್ರಮಗಳು ಅಂಬೇಡ್ಕರ್ ಭವನದಲ್ಲಿ ನಡೆಯುವಂತೆ ನೋಡಬೇಕು.
ಅಂಬೇಡ್ಕರ್ ಭವನದ ಒಳ ಆವರಣದಲ್ಲಿ ಕ್ಯಾಂಟೀನ್‌ಗಾಗಿ ಕೂಡಲೇ ಟೆಂಡರ್ ಕರೆಯಬೇಕು.
ಭವನ ನಿರ್ವಹಣೆಗಾಗಿ ಇನ್ನಷ್ಟು ಸಿಬ್ಬಂದಿ ನೇಮಿಸಬೇಕು.
-ಮೋಹನ್‌ಕುಮಾರ್ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.