ಶಿವಮೊಗ್ಗ

ಬಳಕೆಯಾಗುವ ತನಕ ಭಾಷೆ ಮೃತ: ನಾ.ಡಿಸೋಜ

Published On :

ಕ.ಪ್ರ.ವಾರ್ತೆ   ಶಿವಮೊಗ್ಗ   ನ.4
ಒಂದು ಭಾಷೆಯನ್ನು ಎಲ್ಲಿವರೆಗೆ ಬಳಸುವುದಿಲ್ಲವೊ ಅಲ್ಲಿಯವರೆಗೆ ಆ ಭಾಷೆ ಮೃತ ಭಾಷೆಯಾಗುತ್ತದೆ. ಹಾಗಾಗಲು ಬಿಡದೆ ಸದಾ ಬಳಸುವ ಮನಸ್ಸು ಮಾಡಬೇಕು. ಒಂದು ಭಾಷೆಯ ದನಿ ಯಾರಿಗೆ ಗೊತ್ತಿದೆಯೋ, ಆತ ಆ ಭಾಷೆಯನ್ನು ಬಳಸುತ್ತಾನೆ. ಕನ್ನಡ ಭಾಷೆಗೆ ಶ್ರೀಮಂತವಾದ ಶಬ್ಧ ಸಂಪತ್ತಿದೆ ಅದನ್ನ ಬಳಸುವ ಮನಸ್ಸು ಮಾಡಬೇಕೆಂದು ಎಂದು ಹಿರಿಯ ಸಾಹಿತಿ ಡಾ. ನಾ. ಡಿಸೋಜ ನುಡಿದರು.
ಜಿಲ್ಲಾ ಕಸಾಪ ಮತ್ತು ಜಿಲ್ಲಾ ಆಡಳಿತ ಸಂಯುಕ್ತವಾಗಿ ಗೋಪಿಶೆಟ್ಟಿಕೊಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾಹಿತ್ಯ ಗ್ರಾಮದ ನೂತನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಖಾಸಗಿ ಕ್ಷೇತ್ರದಲ್ಲಿ ಕನ್ನಡ ಬಳಕೆ ಒಂದು ಅವಲೋಕನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ರಾಜ ಮಹಾರಾಜರು ತಮ್ಮ ಆಡಳಿತದ ಎಲ್ಲಾ ಸಂದರ್ಭದಲ್ಲೂ ಕನ್ನಡ ಬಳಸುತ್ತಿದ್ದರು. ಆದರೆ ಇಂದಿನವರಿಗೆ ಭಾಷಾಭಿಮಾನ ಬೆಳೆಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದದ ಸಂಗತಿ ಎಂದರು.
ಕನ್ನಡಿಗರೇ ಶತ್ರು: ಖಾಸಗಿ ಕ್ಷೇತ್ರದಲ್ಲಿ ಕನ್ನಡ ಬಳಕೆ ಕುರಿತಾದ ಅವಲೋಕನದ ಈ ಕಾರ್ಯಕ್ರಮದ ಆಶಯವನ್ನು ಕುರಿತು ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಕನ್ನಡಕ್ಕೆ ಕನ್ನಡಿಗರೇ ಶತೃಗಳಾಗಿರುವ ಈ ಕಾಲದಲ್ಲಿ ನಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಪಾಠಮಾಡುತ್ತಿಲ್ಲ. ಕನ್ನಡ ಭಾಷಾ ಕಲಿಕಾ ಸಾಮರ್ಥ್ಯ ಹೆಚ್ಚಾಗಬೇಕು. ಕನ್ನಡದ ಪೌಂಡೇಷನ್ ಸರಿಯಿಲ್ಲ, ಕಾಗುಣಿತ ಹೇಳಿಕೊಡುತ್ತಿಲ್ಲ, ಸಂಧಿ, ಸಮಾಸ ಕಲಿಸುತ್ತಿಲ್ಲ. ಈ ಕೊರತೆಯಿಂದ ಕನ್ನಡ ಬಳಕೆಗೆ ಕಂಟಕವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕನ್ನಡ ಭಾಷೆಗೆ ಅನ್ನ ಕೊಡುವ ಶಕ್ತಿ ಇದೆ. ಅದನ್ನು ಇನ್ನಷ್ಟು ಸಶಕ್ತವಾಗಿ ಬೆಳೆಸಲು ಸರ್ಕಾರ ಬದ್ಧ ಎಂದರು.
ವ್ಯಾಕರಣ ಮುಖ್ಯವಲ್ಲ: ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್‌ಗೌಡ, ನಮ್ಮ ಮಕ್ಕಳ ಭವಿಷ್ಯ ಕನ್ನಡದಿಂದ ರೂಪಿಸಲು ಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗಬೇಕು ಎನ್ನುವ ಪ್ರತಿಪಾದನೆಗೆ, ಲೇಖಕ ಬಿದರಗೋಡು ನಾಗೇಶ್ ಭಾಷೆ ಎಂದರೆ ಕೇವಲ ಅಕ್ಷರ ಅಲ್ಲ. ಅದಕ್ಕೆ ಜ್ಞಾನವಿದೆ. ಭಾಷೆಯ ಉಳುವಿಗೆ ವ್ಯಾಕರಣ ಮುಖ್ಯವಲ್ಲ, ಕಾಲೇಜು ಮಕ್ಕಳಿಗೆ ಇಂಗ್ಲಿಷ್ ಮುಖ್ಯ ಕಾರಣ ಪಿ.ಯು. ನಂತರ ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ತಾತ್ಸಾರವಾಗಿರುವುದರಿಂದ ಕಲಿಕೆಯಲ್ಲೂ ತಾತ್ಸಾರ ಮಾಡುತ್ತಾರೆ ಎಂದು ವಾಸ್ತವಿಕತೆಯ ಮಾಹಿತಿ ನೀಡಿದರು.
ಮಹಿಳಾ ಉದ್ಯಮಿ ಲಕ್ಷ್ಮೀದೇವಿ ಗೋಪಿನಾಥ, ಮಂಡಿ ವರ್ತಕರ ಸಂಘದ ಅಧ್ಯಕ್ಷ ಕಡಿದಾಳು ಗೋಪಾಲ, ಜನಪರ ವೇದಿಕೆಯ ರಾಜ್ಯ ಅಧ್ಯಕ್ಷ ಎಂ. ಡಿ. ಶರೀಫ್, ನಗರ ಸಾರಿಗೆ ಸಂಸ್ಥೆಗಳ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಪಿ. ರುದ್ರೇಶ್, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಎಸ್. ಕೋಟ್ಯಾನ್, ಜಯ ಕರ್ನಾಟಕ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ್ ಶೆಟ್ಟಿ, ಹಿರಿಯ ನ್ಯಾಯವಾದಿ ಕೃಷ್ಣಮೂರ್ತಿ ಸಿರ್ಸಿ, ಆಟೋಮೊಬೈಲ್ ಉದ್ಯಮದಲ್ಲಿ ತೊಡಗಿರುವ ಪ್ರಶಾಂತ ಶಾಸ್ತ್ರಿ, ವಾಣಿಜ್ಯ ಇಲಾಖೆಯ ಅಧಿಕಾರಿ ದಾನೇಶಪ್ಪ ತಮ್ಮ ಅಭಿಪ್ರಾಯ ಮಂಡಿಸಿದರು.
ಕಾವ್ಯ ಸಂಭ್ರಮ: ಹಿರಿಯ ಕವಿ ಮೇಗರವಳ್ಳಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಸಲಾಯಿತು. ತಾಲೂಕು ಕಾರ್ಯದರ್ಶಿ ಇ. ಜಯಣ್ಣ ಸ್ವಾಗತಿಸಿದರು, ಜಿ.ಪಿ. ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಕೆ. ಸಿದ್ದಪ್ಪ ವಂದಿಸಿದರು. ಗಾಯಕರಾದ ಜಯಶ್ರೀ ಶ್ರೀಧರ, ಶಾಂತಾ ಆನಂದ, ಲಕ್ಷ್ಮೀ ಮಹೇಶ್, ನಾಗಮಣಿ ಅನಂತರಾಮ್, ದಾಕ್ಷಾಯಿಣಿ ರಾಜಕುಮಾರ್ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.