ನಾಳೆಯಿಂದ ವೈದ್ಯಕೀಯ ವಸ್ತು ಪ್ರದರ್ಶನ
ಶಿವಮೊಗ್ಗ: ವೈದ್ಯಕೀಯ ಲೋಕದ ವಿಸ್ಮಯಗಳನ್ನು ಸರಳೀಕರಣಗೊಳಿಸಿ, ವಿದ್ಯಾರ್ಥಿಗಳಿಗೂ, ಸಾಮಾನ್ಯ ಜನತೆಗೂ ಪರಿಚಯಿಸುವ ಮತ್ತು ಸಾಮಾನ್ಯ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಮಾಹಿತಿಗಳನ್ನು ನೀಡುವ ಅಪರೂಪ ಎನ್ನಬಹುದಾದ ವಸ್ತುಪ್ರದರ್ಶನ ನಗರದಲ್ಲಿ ಆಯೋಜನೆಗೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಕೆ.ಎಸ್. ಗಂಗಾಧರ್, ನವೆಂಬರ್ 7ರಿಂದ 9ರ ವರೆಗೆ ನಡೆಯುವ ಪ್ರದರ್ಶನ ವಿಶೇಷವಾಗಿದ್ದು, ಸಾಮಾಜಿಕ ಕಳಕಳಿ, ಜಾಗೃತಿ ಉದ್ದೇಶ ಹೊಂದಲಾಗಿದೆ ಎಂದರು.
ಸಿಮ್ಸ್ ಆವರಣದಲ್ಲೇ ನಡೆಯುವ ವಸ್ತುಪ್ರದರ್ಶನದಲ್ಲಿ ವೈದ್ಯಕೀಯ ಕ್ಷೇತ್ರದ ಅಂಗರಚನಾ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಶಸ್ತ್ರ ಚಿಕಿತ್ಸಾ ಶಾಸ್ತ್ರ, ಅರವಳಿಕೆ ಶಾಸ್ತ್ರ, ಮನೋವಿಜ್ಞಾನ ಸೇರಿದಂತೆ ಸುಮಾರು 21 ವಿಭಾಗಗಳ ವಿಷಯಗಳ ಪ್ರದರ್ಶನಕ್ಕಿಡಲಾಗುವುದು. ವೈದ್ಯಕೀಯ ಹಾಗೂ ಸ್ವಾಸ್ಥ್ಯ ಸಂಬಂಧಿ ವಿಷಯಗಳನ್ನು ಥರ್ಮಾಕೋಲ್ ಮಾದರಿ, ಮಣ್ಣಿನ ಮಾದರಿ, ಭಿತ್ತಿ ಚಿತ್ರಗಳು, ವೀಡಿಯೋ ತುಣುಕುಗಳು, ಡ್ರಾಯಿಂಗ್ಸ್, ಕೃತಕ ಮಾನವ ಆಕೃತಿ ಇತ್ಯಾದಿಗಳ ಮೂಲಕ ಪ್ರದರ್ಶಿಸಿ ಜನರಿಗೆ ವೈದ್ಯಕೀಯ ಲೋಕದ ಚಿತ್ರಣಗಳನ್ನು ನೀಡುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ವಸ್ತು ಪ್ರದರ್ಶನದ ಮೊದಲ 2 ದಿನಗಳನ್ನು ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ 3ನೇ ದಿನವನ್ನು ಸಾರ್ವಜನಿಕ ವೀಕ್ಷಣೆಗೆ ಮೀಸಲಿರಿಸಲಾಗಿದೆ. ಈಗಾಗಲೇ ಜಿಲ್ಲೆಯ 25ಕ್ಕೂ ಹೆಚ್ಚು ಶಾಲೆಯ 10ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನದ ವೀಕ್ಷಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಪ್ರದರ್ಶನ ಸಮಯ: ವೀಕ್ಷಣೆ ಆರಂಭದ ದಿನ ಬೆಳಗ್ಗೆ 9 ರಿಂದ ಹಾಗೂ ಪ್ರದರ್ಶನದ ಉಳಿದ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4 ಗಂಟೆಯ ನಂತರ ಪ್ರವೇಶ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ವಿಶೇಷತೆ: ಮಹಿಳಾ ದೌರ್ಜನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆಯಾಗಿ ಕ್ರಮಗಳು, ಡ್ರಗ್ ಇತ್ಯಾದಿ ಮಾದಕ ವಸ್ತು ಸೇವೆಯನ್ನು ತಡೆತಟ್ಟುವ ಕುರಿತು ವಿಶೇಷವಾಗಿ ಪ್ರದರ್ಶನ ವಿರುತ್ತದೆ. ಅಣಕು ಪ್ರದರ್ಶನ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಾ. ವೃಂದಾ ಭಟ್ ತಿಳಿಸಿದರು.
ಉದ್ಘಾಟನೆ: ಎಕ್ಸ್ಪೋ ಸಿಮ್ಸ್ ವೈದ್ಯಕೀಯ ವಸ್ತು ಪ್ರದರ್ಶನಕ್ಕೆ ನ.7ರಂದು ಬೆಳಗ್ಗೆ 9 ಗಂಟೆಗೆ ಸಿಮ್ಸ್ ಆವರಣದಲ್ಲಿ ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಚಾಲನೆ ನೀಡಲಿದ್ದಾರೆ.
ವಸ್ತು ಪ್ರದರ್ಶನ ಕುರಿತ ಕಿರು ಮಾಹಿತಿ ಪುಸ್ತಕವನ್ನು ಐಎಂಎ ಅಧ್ಯಕ್ಷೆ ಡಾ. ವೀಣಾ ಕೋರಿ ಬಿಡುಗಡೆ ಮಾಡಲಿದ್ದಾರೆ. ಪಿಸಿಪಿಎನ್ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಮಲ್ಲೇಶ್ ಹುಲಮನಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್, ಎಸ್ಪಿ ಕೌಶಲೇಂದ್ರ ಕುಮಾರ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಸರ್ಕಾರಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಲೇಪಾಕ್ಷಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಪ್ರದರ್ಶನದ ಬಗ್ಗೆ ಮಾಹಿತಿಗೆ ಮೊ- 8867172150, 9591543931 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

