ಶಿವಮೊಗ್ಗ

ಸಿಮ್ಸ್‌ನಲ್ಲಿ ವೈದ್ಯಕೀಯ ಸಂಶೋಧನೆ ಕೇಂದ್ರ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ನ.5
ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಒತ್ತು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿದ ವಿಶೇಷ ಯೋಜನೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ನಲ್ಲಿ ಶೀಘ್ರವೇ ಅನುಷ್ಠಾನಕ್ಕೆ ಬರುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಅಧ್ಯಯನ ಮುಗಿಸುವ ವಿದ್ಯಾರ್ಥಿಗಳು ಪ್ರಾಕ್ಟಿಸ್ ಕಡೆಗೆ ಹೆಚ್ಚಿನ ಒಲವು ತೋರುತ್ತಾರೆಯೇ ವಿನಃ ಸಂಶೋಧನೆಯಡೆಗೆ ಮುಖ ಮಾಡುವುದೇ ಇಲ್ಲ.
ಹೀಗಾಗಿ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಆಕರ್ಷಿಸುವ ಉದ್ದೇಶದಿಂದ ಐಸಿಎಂಆರ್ ಎಂಬ ಸಂಶೋಧನಾ ಕೇಂದ್ರವನ್ನು ದೇಶದ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಒಟ್ಟಾರೆ ದೇಶದಲ್ಲಿ ಈ ಚಟುವಟಿಕೆಗೆ ರು. 600 ಕೋಟಿ ವ್ಯಯಿಸುತ್ತಿದೆ.
18 ಕಾಲೇಜು: ಮೊದಲ ಹಂತದಲ್ಲಿ 18 ಕಾಲೇಜುಗಳಲ್ಲಿ ಈ ಕೇಂದ್ರ ಆರಂಭಿಸಲಾಗುತ್ತಿದ್ದು, ಕರ್ನಾಟಕದ ಎರಡು ಕಾಲೇಜು ಸೇರಿದೆ. ಮೈಸೂರು ಹಾಗೂ ಶಿವಮೊಗ್ಗದ ಮೆಡಿಕಲ್ ಕಾಲೇಜು ಈ ಪಟ್ಟಿಯಲ್ಲಿ ಸೇರಿದ್ದು, ಹಣ ಕೂಡ ಬಂದಿದೆ. ಮಾರ್ಗದರ್ಶನಕ್ಕೆ(ಗೈಡ್‌ಲೈನ್) ಕಾಯಲಾಗುತ್ತಿದೆ.
ಒಟ್ಟಾರೆ ಐದು ವರ್ಷದ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ಪ್ರತಿ ಕಾಲೇಜಿಗೆ ರು. 7-8 ಕೋಟಿ ನೀಡುತ್ತದೆ. ಕೇಂದ್ರದ ಒಂದು ನಿಯಮವೆಂದರೆ, ಐದು ವರ್ಷದ ತರುವಾಯ ಆ ಕೇಂದ್ರಗಳು ಮುಂದುವರಿಯಬೇಕು. ಕೇಂದ್ರದಿಂದ ಯಾವುದೇ ಹಣಕಾಸು ನೆರವು ದೊರೆಯುವುದಿಲ್ಲ.
ಈ ಕೇಂದ್ರ ಆರಂಭದ ಮೂಲಕ ಸಂಶೋಧನೆಯೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಜೊತೆ ಜೊತೆಗೆ ಮೆಡಿಕಲ್ ಕಾಲೇಜು ವ್ಯಾಪ್ತಿಗೊಳಪಡುವ ಪ್ರದೇಶದ ಸ್ಥಳೀಯ ವೈದ್ಯಕೀಯ ಸಮಸ್ಯೆಯ ಬಗ್ಗೆ ಸಂಶೋಧನೆ ನಡೆಸಬೇಕು. ಸದ್ಯ ಶಿವಮೊಗ್ಗದಿಂದ 10 ವೈದ್ಯಕೀಯ ಸಮಸ್ಯೆ ಕುರಿತು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.
ಇದರಲ್ಲಿ ಹಂದಿಗೋಡು ಖಾಯಿಲೆ, ಡೆಂಘೀ, ಪರಿಸರ ಮಾಲಿನ್ಯದಿಂದಾಗುತ್ತಿರುವ (ಭದ್ರಾವತಿ) ರೋಗಗಳ ಕುರಿತು ವಿಷಯಗಳಿವೆ.
ರು. 1.25 ಲಕ್ಷ ಬಿಡುಗಡೆ: ಕೇಂದ್ರ ನೀಡುವ ಅನುದಾನದಲ್ಲಿ ಸಂಶೋಧನೆಗೆ ಬೇಕಾಗುವ ಸೂಕ್ತ ಉಪಕರಣಗಳು, ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತದೆ.
ಹಾಗೆಯೇ ಸಿಮ್ಸ್‌ನಲ್ಲಿ ಕೇಂದ್ರಕ್ಕೆ ಅಗತ್ಯ ಜಾಗ ನೀಡಲಾಗುತ್ತಿದೆ. ರು. 1.25 ಲಕ್ಷ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ಮೂಲ ಸೌಕರ್ಯಕ್ಕೆ ಬಳಸಲಾಗುತ್ತಿದೆ.
ಈ ಕೇಂದ್ರದಿಂದ ಹಾಲಿ ಇರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ ಎಂದು ಸಿಮ್ಸ್ ನಿರ್ದೇಶಕ ಡಾ. ಗಂಗಾಧರ್ ಅವರ ವಿವರಣೆ.
ಸಂಶೋಧನಾ ಕೇಂದ್ರದ ಆರಂಭಕ್ಕೆ ಮೂರು ಸಾವಿರ ಚದರ ಅಡಿ ಜಾಗವನ್ನು ನಿಗದಿಪಡಿಸಲಾಗಿದ್ದು, ಸದ್ಯವೇ ಪ್ರಕ್ರಿಯೆ ಆರಂಭವಾಗುತ್ತಿದೆ. ಸೂಕ್ತ ಗೈಡ್‌ಲೈನ್‌ಗೆ ಕಾಯುತ್ತಿದ್ದೇವೆ. ಈ ಕೇಂದ್ರದಿಂದಾಗಿ ಸ್ಥಳೀಯವಾಗಿ ಕಾಣಿಸಿಕೊಳ್ಳುವ ಖಾಯಿಲೆಗಳ ಮೇಲೆ ಸಂಶೋಧನೆಯಾಗುವ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಶೋಧನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸುತ್ತಾರೆ.
ಸಿಮ್ಸ್‌ನಲ್ಲಿ ಕಳೆದ 3 ವರ್ಷದಿಂದ ಉತ್ತಮ ಫಲಿತಾಂಶ ಬಂದಿದೆ. ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಇದಾಗಿದೆ.
 ಕಾಲೇಜು ಆರಂಭವಾಗಿ ಆರು ವರ್ಷ ಕಳೆದಿದ್ದು, ಕೇಂದ್ರದ ಈ ಸಂಶೋಧನಾ ಕೇಂದ್ರ ಇಲ್ಲಿ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಸದುಪಯೋಗವಾಗುತ್ತದೆಂಬ ವಿಶ್ವಾಸವಿದೆ ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.