'ಪ್ರಧಾನಿ ಸ್ಥಾನಕ್ಕೆ ಮೋದಿ ಅರ್ಹ ವ್ಯಕ್ತಿ'
ಕ.ಪ್ರ.ವಾರ್ತೆ , ಭದ್ರಾವತಿ , ನ. 6
ಈ ದೇಶದ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅರ್ಹ ವ್ಯಕ್ತಿ ಎಂಬುದು ದೇಶದ ಪ್ರತಿಯೊಬ್ಬ ನಾಗರೀಕರ ಮನದಾಳದ ಮಾತಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲೆಬೆಲೆ ಹೇಳಿದರು.
ಹಳೇನಗರದ ಬಸವೇಶ್ವರ ವೃತ್ತದ ಬಳಿಯಿರುವ ಕನಕ ವಿದ್ಯಾಸಂಸ್ಥೆ ಅವರಣದಲ್ಲಿ ನಮೋ ಬ್ರಿಗೇಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ಈವರೆಗಿನ ಆಡಳಿತದಿಂದ ದೇಶ ದಿವಾಳಿ ಅಂಚಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಏರಿಸಬಲ್ಲ ಹಾಗೂ ದೇಶದ ಜನಸಾಮಾನ್ಯರ ಅಭಿವೃದ್ಧಿ ಕನಸನ್ನು ನನಸಾಗಿಸಬಲ್ಲ ಏಕೈಕ ವ್ಯಕ್ತಿ ನರೇಂದ್ರ ಮೋದಿ ಎಂದರು.
ಮೋದಿ ಪ್ರಧಾನಿಯಾಗಲಿ: ನರೇಂದ್ರಮೋದಿ ಈ ದೇಶದ ಪ್ರಧಾನಿಯಾದರೆ ದೇಶದ ಸಂಕಷ್ಟ ಪರಿಹಾರವಾಗುತ್ತದೆ ಎಂಬ ಆಶಾಭಾವನೆಯಿಂದ ನಮೋ ಬ್ರಿಗೇಡ್ ಎಂಬ ಯುವ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಈ ಸಂಘಟನೆಯ ಏಕಮೇವ ಉದ್ದೇಶ ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡುವುದು. ಆ ಕೆಲಸ ಈಡೇರಿದ ಮರುಕ್ಷಣದಲ್ಲೇ ಈ ಸಂಘಟನೆ ವಿಸರ್ಜಿತವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕುಂತಲಾ ಅಯ್ಯರ್, ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡುವ ಮೂಲಕ ರಾಷ್ಟ್ರವನ್ನು ಸುಭದ್ರಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ಕಾರಣಕ್ಕೆ ನಮೋ ಬ್ರಿಗೇಡ್ ಜೊತೆ ಕೈಜೋಡಿಸಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದರು.
ಸಿಡಿ ಬಿಡುಗಡೆ: ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರ ಬಾಲ್ಯ ಹಾಗೂ ಅವರ ರಾಜಕೀಯ ಪಯಣದ ಹಾದಿಯನ್ನು ಮತ್ತು ದೇಶಕ್ಕೆ ಅವರ ನಾಯಕತ್ವ ಎಷ್ಟು ಅಗತ್ಯ ಎಂಬುದರ ಕುರಿತ ಸಿ.ಡಿ. ಯನ್ನು ಚಕ್ರವರ್ತಿ ಸೂಲೆಬೆಲೆ ಬಿಡುಗಡೆ ಮಾಡಿದರು. ಸಿಡಿಯನ್ನು ವಿಶಾಲ ಪರದೆಯ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.
ಬೈಕ್ ರ್ಯಾಲಿ: ನರೇಂದ್ರಮೋದಿ ಅಭಿಮಾನಿ ಬಳಗದಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಸಂಜೆ ಹೊಸಮನೆಯ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದ ಮಹಾದ್ವಾರದಿಂದ ಭಾರತಮಾತೆಯ ಭಾವಚಿತ್ರದೊಂದಿಗೆ ಆರಂಭಗೊಂಡ ಬೈಕ್ ರ್ಯಾಲಿಯಲ್ಲಿ ನೂರಾರು ಯುವಕರು ಕೇಸರಿ ಧ್ವಜವನ್ನು ಹಿಡಿದು ಮೋದಿ ಭಾವಚಿತ್ರವಿರುವ ಜರ್ಸಿಯನ್ನು ಧರಿಸಿ ಮೋದಿಗೆ ಜಯಕಾರ ಹಾಕುತ್ತಾ ಸಾಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

