ಶಿವಮೊಗ್ಗ

ಆರು ಅಂಚೆ ಸಿಬ್ಬಂದಿ ಅಮಾನತು: ಇಂದು ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ನ.7
ಅಂಚೆ ಅಧೀಕ್ಷಕರು ಹಾಗೂ ಅಂಚೆ ಸಿಬ್ಬಂದಿ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರು ಸಿಬ್ಬಂದಿಯನ್ನು ಗುರುವಾರ ಸಂಜೆ ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ಆಕ್ರೋಶಗೊಂಡಿರುವ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ನಗರದ ಕೋಟೆ ರಸ್ತೆಯಲ್ಲಿರುವ ವಿಭಾಗೀಯ ಆಡಳಿತ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗ ಡಿವಿಜನ್ ನ ಎಲ್ಲಾ ಅಂಚೆ ಕಚೇರಿಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಅಧೀಕ್ಷಕರ ವರ್ತನೆಗೆ ಖಂಡನೆ: ಅಂಚೆ ಅಧೀಕ್ಷಕರ ವರ್ತನೆ ಖಂಡಿಸಿ ಬುಧವಾರ ಸಂಜೆ ಅಲ್ಲಿನ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆ ಗುರುವಾರ ಮುಂಜಾನೆಗೂ ವಿಸ್ತರಣೆಗೊಂಡಿತು. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದರು.
ಒಂದು ಹಂತದಲ್ಲಿ ಪರಿಸ್ಥಿತಿ ಉಲ್ಬಣಗೊಂಡು ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸಿದರು. ಇದರಿಂದ ಕಚೇರಿ ಕೆಲಸಕ್ಕೆ ಬಂದಿದ್ದವರು, ತುರ್ತು ಸೇವೆಗೆ ಬಂದಿದ್ದ ಸಾರ್ವಜನಿಕರು ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಘಟನೆಗೆ ಕಾರಣ: ಇಲ್ಲಿನ ಅಂಚೆ ಅಧೀಕ್ಷಕರು ಸಿಬ್ಬಂದಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂಬುದು ಇಲ್ಲಿನ ನೌಕರರ ಸಂಘಟನೆಗಳ ನೇರ ಆರೋಪ.
ಬುಧವಾರ ಸಂಜೆ ಕಚೇರಿ ಅವಧಿಯ ನಂತರ ಸಿಬ್ಬಂದಿ ಹೊರ ಹೋಗದಂತೆ ಪ್ರಧಾನ ಅಂಚೆ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಿದ ಹಾಗೂ ಗ್ರಾಹಕರ ಎದುರಿನಲ್ಲೇ ಸಿಬ್ಬಂದಿಯನ್ನು ನಿಂಧಿಸಿದ ಅಂಚೆ ಅಧೀಕ್ಷಕರ ವರ್ತನೆ ಅಸಮಾಧಾನ ಹೆಚ್ಚಾಗಲು ಕಾರಣ ಎಂದು ಅಂಚೆ ಇಲಾಖೆ ಪಿ3 ಸಂಘಟನೆಯ ಕಾರ್ಯದರ್ಶಿ ರಾಘವೇಂದ್ರ, ಪಿ.4 ಸಂಘಟನೆಯ ಈಶ್ವರಪ್ಪ ಮತ್ತು ಗ್ರಾಮೀಣ ಅಂಚೆ ನೌಕರರ ಸಂಘದ ರಾಜಕುಮಾರ್ ಅಭಿಪ್ರಾಯ.
ಭಿನ್ನಾಭಿಪ್ರಾಯ: ನೂತನ ಅಂಚೆ ಅಧೀಕ್ಷಕರು 5-6 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು, ಅಂದಿನಿಂದಲೂ ಸಿಬ್ಬಂದಿ ಹಾಗೂ ಅಂಚೆ ನೌಕರರ ಯೂನಿಯನ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.
 ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ನೌಕರರ ಸಂಘಟನೆ ಪ್ರಮುಖರು ತಿಳಿಸಿದರು.
ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಲು ಸ್ವಯಂ ಪ್ರೇರಿತರಾಗಿ ಸಿಬ್ಬಂದಿ ಒಪ್ಪಿಗೆ ನೀಡಿದ್ದರೂ,  ಏಪ್ರಿಲ್‌ನಲ್ಲಿ ಈ ಅಧೀಕ್ಷಕರು ಸಿಬ್ಬಂದಿಯನ್ನು ಕೂಡಿ ಹಾಕಿ ಒಮ್ಮೆ ಕಚೇರಿ ಮುಖ್ಯದ್ವಾರಕ್ಕೆ ಬೀಗ ಜಡಿದಿದ್ದರು. ಕೆಲಸ ಮಾಡದೇ ಇದ್ದರೆ ದೂರದ ಊರುಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದರು.
ಸಂಧಾನ ವಿಫಲ: ಗುರುವಾರ ಬೆಳಗ್ಗೆ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಧಾನ ಅಂಚೆ ಕಚೇರಿಗೆ ಆಗಮಿಸಿ ಸಂಧಾನ ನಡೆಸಲು ಪ್ರಯತ್ನಿಸಿದರು. ಆದರೆ, ಪರಿಸ್ಥಿತಿ ಮಾತ್ರ ನಿಭಾಯಿಸುವಷ್ಟು ಸುಲಭವಾಗಿರಲಿಲ್ಲ. ಸಿಬ್ಬಂದಿ ಅಸಮಾಧಾನ ಮೇರೆ ಮೀರಿತ್ತು. ಸಮಸ್ಯೆಗೆ ಒಂದು ಅಂತ್ಯ ಹಾಡಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿ ಆಕ್ರೋಶದಿಂದಾಗಿ ಒಂದಷ್ಟು ಹೊತ್ತು ವಾತಾವರಣ ವಿಷಮ ಪರಿಸ್ಥಿತಿ ತೆರಳಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮಧ್ಯ ಪ್ರವೇಶ ಮಾಡಬೇಕಾಯಿತು.
ನಂತರ ಸಿಬ್ಬಂದಿ ಪಟ್ಟು ಹಿಡಿದು ಪ್ರಧಾನ ಅಂಚೆ ಕಚೇರಿ ಅಧೀಕ್ಷಕರನ್ನು ತಕ್ಷಣವೇ ವರ್ಗಾಯಿಸುವಂತೆ ಒತ್ತಾಯಿಸಿದರಲ್ಲದೇ ಅವರ ವರ್ಗಾವಣೆ ಆಗುವವರೆಗೂ ತಾವು ಮುಷ್ಕರ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಚಂದ್ರಕಾಂತ ಕಾಮತ್, ನಾನು ಬಾಗಿಲಿಗೆ ಬೀಗ ಹಾಕಿಲ್ಲ, ಬೀಗದ ಕೀ ಸಹ ನನ್ನ ಬಳಿ ಇಲ್ಲ. ನೌಕರರ ಸಂಘಟನೆಗಳ ನಡುವಿನ ಪ್ರತಿಷ್ಠೆ  ಈ ಪರಿಸ್ಥಿತಿಗೆ ತಳ್ಳಿದೆ ಎಂದರು.
ಅಂಚೆ ಇಲಾಖೆ ನೌಕರರ ಸಂಘಟನೆಯ ಪ್ರಮುಖರಾದ ಪ್ರಕಾಶ್ ರಾವ್, ಪಿ.ಕೆ.ಗೋಪಾಲ್, ಮಲ್ಲಿಕಾರ್ಜುನ, ಜಯದೇವಪ್ಪ, ರತ್ನ, ಗಂಗಮ್ಮ, ಸುನಿತಾ, ಮೀರಾ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.