ಮರಳು ಸಾಗಣೆಗೆ ಅವಕಾಶ ನೀಡಲು ಆಗ್ರಹ
ಕ.ಪ್ರ.ವಾರ್ತೆ ಶಿವಮೊಗ್ಗ ನ.7
ಕಾನೂನು ಬದ್ಧವಾಗಿ ಮರಳು ಸಾಗಿಸಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿ ಶಿವಮೊಗ್ಗ ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲೀಕರ ಸಂಘವು ಕರೆ ನೀಡಿರುವ ಅನಿರ್ದಿಷ್ಟ ಅವಧಿಯ ಮರಳು ಸಾಗಾಣೆ ಲಾರಿಗಳ ಮುಷ್ಕರ ಗುರುವಾರ ಆರಂಭವಾಯಿತು.
ಜಿಲ್ಲಾಡಳಿತ ಈ ಕೂಡಲೇ ನ್ಯಾಯಯುತವಾಗಿ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡುವ ಜೊತೆಗೆ ಅಕ್ರಮ ಮರಳು ಗಣಿಗಾರಿಕೆಗೆ ತಡೆಯೊಡ್ಡುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನ ಮೆರವಣಿಗೆ ನಡೆಸಿದ ಲಾರಿ ಮಾಲೀಕರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಸೂಕ್ತಕಾಲ: ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಡಿ. ರಾಜಶೇಖರಪ್ಪ, ಹೊಸ ಮರಳು ನೀತಿಗೆ ಬೆಲೆ ಕೊಟ್ಟು ನಾಲ್ಕೈದು ತಿಂಗಳಿನಿಂದ ಲಾರಿಗಳನ್ನು ಸುಮ್ಮನೆ ನಿಲ್ಲಿಸಿಕೊಂಡಿದ್ದೆವು. ಈಗ ತಿಂಗಳಿಂದೀಚೆಗೆ ಹೊಳೆ ನೀರು ಇಳಿದಿದ್ದು, ಇದು ಮರಳು ತೆಗೆಯಲು ಸೂಕ್ತ ಕಾಲ. ಆದರೆ, ಜಿಲ್ಲಾಡಳಿತ ಮರಳು ಸಾಗಿಸಲು ಪರ್ಮಿಟ್ ನೀಡದೇ ಸತಾಯಿಸುತ್ತಿದೆ ಎಂದು ಟೀಕಿಸಿದರು.
ಬೇರೆ ಜಿಲ್ಲೆಯಲ್ಲಿ ಮರಳು ತುಂಬುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಪರ್ಮಿಟ್ ಕೊಡಲು ಹಿಂದೇಟು ಹಾಕುತ್ತಿರುವುದು ಖಂಡನೀಯ. ಮರಳು ಕೊರತೆಯಿಂದ ಈಗಾಗಲೇ ಮರಳು ಬೆಲೆ ರು. 20-25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದರು.
ದುಪ್ಪಟ್ಟು ಬೆಲೆ: ತುಂಗಾನದಿ ದಡದಲ್ಲಿರುವ ಶಿವಮೊಗ್ಗ ನಗರ ನೆರೆ ಜಿಲ್ಲೆಗಳಿಂದ ದುಪ್ಪಟ್ಟು ಬೆಲೆಗೆ ಮರಳು ಖರೀದಿಸುತ್ತಿರುವುದು ದುರದೃಷ್ಟಕರ ಸಂಗತಿ. ಜಿಲ್ಲಾ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರು ಈ ಕೂಡಲೇ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕೂಡಲೇ ಮರಳು ಸಾಗಾಣಿಕೆ ಪರ್ಮಿಟ್ ನೀಡಲು ಕ್ರಮ ಕೈಗೊಳ್ಳಬೇಕು, ಜಿಲ್ಲೆಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಕೋಟ್ಯಂತರ ರುಪಾಯಿ ಮೌಲ್ಯದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು. ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡುವ ತಪ್ಪಿತಸ್ಥರ ವಿರುದ್ಧ ಹೊಸ ಮರಳು ನೀತಿಯ ಅನ್ವಯ ಗೂಂಡಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಹೊರ ಜಿಲ್ಲೆಗಳಿಂದ ಮರಳಿಗೆ ಪರವಾನಗಿ ಪಡೆದು ಶಿವಮೊಗ್ಗ ಜಿಲ್ಲೆಯಲ್ಲಿರುವ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ಪರವಾನಗಿಗಳನ್ನು ನಿಷೇಧಿಸಲು ಕ್ರಮಕೈಗೊಳ್ಳಬೇಕೆಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಸುಬ್ರಮಣಿ, ಸೋಮಣ್ಣ, ರಘು, ಪ್ರಶಾಂತ್, ಅಲ್ಲಾ ಬಕ್ಷ್ ಮೊದಲಾದವರು ಇದ್ದರು.
ನೆರೆಯ ಜಿಲ್ಲೆಗಳಲ್ಲಿ ಮರಳು ಸಾಗಾಣಿಕೆಗೆ ಪರ್ಮಿಟ್ ನೀಡುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮಾತ್ರ ಏಕೆ ತಡೆ ಎಂದು ಅರ್ಥವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆ ಕರ್ನಾಟಕದಲ್ಲಿದೆಯೋ ಅಥವಾ ಬೇರೆ ರಾಷ್ಟ್ರದಲ್ಲಿಯೋ ಎಂಬುದನ್ನು ಡಿಸಿಯವರು ಸ್ಪಷ್ಟಪಡಿಸಲಿ. ಒಟ್ಟಾರೆ ಮರಳು ಉಸ್ತುವಾರಿ ಸಮಿತಿಯು ನಿದ್ರಾವಸ್ತೆಯಲ್ಲಿದೆ.
- ರಾಜಶೇಖರಪ್ಪ,
ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲಿಕರ ಸಂಘ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

