ಶಿವಮೊಗ್ಗ

ಗೋಮಾಳ ಜಾಗ ಒತ್ತುವರಿ ತೆರವಿಗೆ ಮನವಿ

Published On :

ಸಾಗರ: ತಾಲೂಕಿನ ಜಂಬಗಾರು- ವಡ್ನಾಲ ಗ್ರಾಮದ ಸರ್ವೆ ನಂ.15 ರಲ್ಲಿರುವ ಗೋಮಾಳ ಜಾಗವನ್ನು ಅತಿಕ್ರಮಿಸುತ್ತಿರುವುದನ್ನು ತಡೆಗಟ್ಟಬೇಕು ಹಾಗೂ ಈಗಾಗಲೇ ಅತಿಕ್ರಮಿಸಿರುವುದನ್ನು ತೆರವುಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಡ್ನಾಲ ಗ್ರಾಮಸ್ಥರು ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಂಬಗಾರು- ವಡ್ನಾಲ ಗ್ರಾಮದ ಸ.ನಂ. 15ರಲ್ಲಿರುವ ಗೋಮಾಳ ಜಾಗವನ್ನು ಗ್ರಾಮಸ್ಥರು ಕಳೆದ 60 ವರ್ಷಗಳಿಂದ ಕಾಪಾಡಿಕೊಂಡು ಬಂದಿರುತ್ತಾರೆ. ಸರ್ಕಾರ ಈ ಜಾಗವನ್ನು ಗ್ರಾಮಸ್ಥರಿಗೆ ಗೋಮಾಳಕ್ಕಾಗಿಯೇ ಮೀಸಲಿಟ್ಟಿದೆ. ಆದರೆ ಇತ್ತೀಚೆಗೆ ಸ್ಥಳೀಯ ನಗರಸಭೆ ಸದಸ್ಯ ರವಿ ಜಂಬಗಾರು ಅವರ ಕುಮ್ಮಕ್ಕಿನಿಂದ ಕೆಲವರು ಈ ಜಾಗವನ್ನು ಅತಿಕ್ರಮಿಸಿಕೊಂಡು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸ.ನಂ.15ರಲ್ಲಿ ಸುಮಾರು 173 ಎಕರೆ ಜಾಗವಿದ್ದು, ಈಗಾಗಲೇ ಸಾರ್ವಜನಿಕ ಉದ್ದೇಶಕ್ಕೆ ಸಾಕಷ್ಟು ಜಮೀನು ಉಪಯೋಗಿಸಿಕೊಳ್ಳಲಾಗಿದೆ. ಇದರ ಜೊತೆಗೆ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ವಡ್ನಾಲ ಗ್ರಾಮಸ್ಥರು ಗೋಮಾಳಕ್ಕೆಂದು ಮೀಸಲಿಟ್ಟ 15 ಎಕರೆ ಜಮೀನಿನಲ್ಲಿ 5 ಎಕರೆ ಪ್ರದೇಶವನ್ನು ಹಸಿರೀಕರಣ ಮಾಡಿದ್ದು, ಉಳಿದ 7 ಎಕರೆ ಜಾಗದಲ್ಲಿಯೂ ಗಿಡಗಳನ್ನು ನೆಡಲು ಗುಂಡಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮಸ್ಥರು ಗೋಮಾಳವಾಗಿ ಉಪಯೋಗಿಸಿಕೊಂಡು ಬಂದಿರುವ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಅತಿಕ್ರಮಿಸಿರುವ ಜಾಗಕ್ಕೆ ತಂತಿಬೇಲಿ ನಿರ್ಮಾಣಕ್ಕೆ ಮುಂದಾದಾಗ ಗ್ರಾಮಸ್ಥರು ವಿರೋಧಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಮೇಲೆ ಅತಿಕ್ರಮಣದಾರರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ತಕ್ಷಣ ಗ್ರಾಮಸ್ಥರ ಉಪಯೋಗಕ್ಕೆ ಹಾಗೂ ಗೋಮಾಳಕ್ಕೆ ಮೀಸಲಿಟ್ಟ ಜಾಗವನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  
ರಾಜಶೇಖರ ಗಾಳಿಪುರ, ಬರದವಳ್ಳಿ ರಾಮಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಬಾಳೆಗುಂಡಿ ಮಂಜಪ್ಪ, ಟಿ.ಕೆ.ಶ್ರೀನಿವಾಸ್, ಸುಧಾಕರ ಕುಗ್ವೆ, ಸುರೇಶ್ ಆಲಳ್ಳಿ, ಪರಮೇಶ್ವರ್ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.