ಶಿವಮೊಗ್ಗದಲ್ಲಿ ವಿವೇಕಾನಂದ ಲಹರಿ
ಕ.ಪ್ರ. ವಾರ್ತೆ, ಶಿವಮೊಗ್ಗ, ನ.10
ಮನೆಗೆ ಮನೆಗೆ ವಿವೇಕಾನಂದರ ವ್ಯಕ್ತಿತ್ವ, ವಿಚಾರವನ್ನು ತಲುಪಿಸುವ ಗ್ರಾಮಾಯಣ ಅಭಿಯಾನ ಭಾನುವಾರ ಆರಂಭವಾಯಿತು.
ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆಯ ಪ್ರಯುಕ್ತ ದೇಶಾದ್ಯಂತ ಅನೇಕ ಕಾರ್ಯಕ್ರಮ ನಡೆದಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ವಿವಿಧ ಹಂತದ ಕಾರ್ಯಕ್ರಮಗಳು ನಡೆದಿವೆ. ಈ ಸರಣಿಯ ಕೊನೆಯ ಕಾರ್ಯಕ್ರಮವಾಗಿ ಸ್ವಾಮಿ ವಿವೇಕಾನಂದರ ಸಂದೇಶವನ್ನು ಮನೆಮನೆಗೆ ತಲುಪಿಸುವ ಗ್ರಾಮಾಯಣ ಅಭಿಯಾನ ಇದಾಗಿದೆ.
ನಗರದ 25 ಪ್ರಮುಖ ಸ್ಥಳಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಸ್ವಯಂಸೇವಕರು ತಂಡೋಪತಂಡವಾಗಿ ಮನೆಮನೆಗೆ ಭೇಟಿ ಕೊಟ್ಟು ವಿವೇಕಾನಂದರ ವ್ಯಕ್ತಿತ್ವ, ವಿಚಾರ ತಿಳಿಸಿಕೊಡುವ ಕಾರ್ಯ ಮಾಡಿದರು. ಈ ಗ್ರಾಮಾಯಣ ಅಭಿಯಾನ ನವೆಂಬರ್ 24ವರೆಗೂ ನಡೆಯಲಿದೆ. ವಿವಿಧ ಸಂಘ ಸಂಸ್ಥೆ ಪ್ರಮುಖರು, ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಅಭಿಯಾನದ ವಿಶೇಷ: ಪ್ರತಿ ಮನೆಗೆ ಭೇಟಿಕೊಟ್ಟು ವಿವೇಕಾನಂದರ ವಿಚಾರ, ವ್ಯಕ್ತಿತ್ವದ ಕರಪತ್ರ ನೀಡುವ ಜೊತೆಗೆ ವಿವೇಕಾನಂದರ ಭಾವಚಿತ್ರವನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾಗೆಯೇ ವಿವೇಕಾನಂದರ ಕುರಿತು ಕನ್ನಡ ಭಾಷೆಯಲ್ಲಿರುವ ಐದು ಪುಸ್ತಕಗಳು, ಇಂಗ್ಲಿಷ್ನಲ್ಲಿರುವ ಒಂದು ಪುಸ್ತಕವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಏತಕ್ಕಾಗಿ ಈ ಕಾರ್ಯಕ್ರಮ: 150 ವರ್ಷವಾದರೂ ಇಂದಿಗೂ ವಿವೇಕಾನಂದರು ಜೀವಂತವಾಗಿದ್ದಾರೆ ಎಂದರೆ ಅವರ ವ್ಯಕ್ತಿತ್ವ ಹಾಗೂ ವಿಚಾರಗಳು ಕಾರಣ. ಈ ವಿಚಾರ, ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದ್ದು ನಮ್ಮ ಕರ್ತವ್ಯ ಎಂಬುದು ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಸಮಿತಿಯ ಪ್ರಮುಖರ ಅಭಿಪ್ರಾಯ.
ಇಂದು ಮಕ್ಕಳಿಗೆ ಕ್ರಿಕೆಟರ್, ಸಿನಿಮಾದವರು ರೋಲ್ ಮಾಡೆಲ್ ಆಗುತ್ತಿದ್ದಾರೆ. ಹೀಗಾಗಿ ನಿಜವಾದ ರೋಲ್ ಮಾಡೆಲ್ಗಳನ್ನು ತಿಳಿಸಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನ.24ರ ವರೆಗೆ ಶಿವಮೊಗ್ಗ ನಗರದಲ್ಲಿ 40-45 ಸಾವಿರ ಮನೆ ತಲುಪುವ ಗುರಿ ಹಾಕಿಕೊಳ್ಳಲಾಗಿದೆ. ಸಮಾಜದ ಎಲ್ಲ ವರ್ಗದ ಜನರು, ಸಂಘಸಂಸ್ಥೆಯ ಸದಸ್ಯರು ಕೈಜೋಡಿಸಿ ಅಭಿಯಾನ ನಡೆಸುತ್ತಿದ್ದೇವೆ ಎಂದು ವಿವರಿಸಿದರು. ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಸಕ್ತರು ತೊಡಗಿಕೊಳ್ಳಬಹುದಾಗಿದ್ದು, ಆಸಕ್ತರು ಮೊ- 9886653824ನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

