ಪ್ರವಾಸಿ ಮಂದಿರದಲ್ಲೊಂದು ಹೈಡ್ರಾಮಾ
ಶಿವಮೊಗ್ಗಛ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಗ್ಗೆ ಒಂದು ಗಂಟೆಕಾಲ ಹೈಡ್ರಾಮಾವೊಂದು ನಡೆಯಿತು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಜೆಡಿಎಸ್ನ ಶಾರದಾ ಪೂರ್ಯಾನಾಯ್ಕ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾರ್ಮಿಕ ಸಚಿವರಿಗೆ ಘೇರಾವ್ ಹಾಕಿ ಅಚ್ಚರಿ ಮೂಡಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಂಸಿಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಬಗರ್ಹುಕುಂ ಸಾಗುವಳಿದಾರರ ಮತ್ತು ಕೃಷಿ ಕಾರ್ಮಿಕರ ಸಮಾವೇಶ ಹಮ್ಮಿಕೊಂಡಿತ್ತು. ಇದಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಶಾಸಕರ ಆಕ್ಷೇಪವಾಗಿತ್ತು.
ಎರಡು ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಶಾಸಕರು, ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಗುಡುಗಿದ್ದರು. ನಂತರ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್, ಇದು ಸಂಪೂರ್ಣ ಕಾರ್ಯಕ್ರಮವಾಗಿದ್ದು ಶಿಷ್ಟಾಚಾರದ ಬಗ್ಗೆ ನಮಗೂ ಅರಿವಿದೆ ಎಂದು ಶಾಸಕರಿಗೆ ಖಡಕ್ ಉತ್ತರ ನೀಡಿತ್ತು. ಇಷ್ಟಾದರೂ ಸಹ ಪ್ರಕರಣವನ್ನು ಕೈಬಿಡದ ಶಾಸಕರು ಸೋಮವಾರಕ್ಕೂ ಮುಂದುವರಿಸಿದರು. ಕುಂಸಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿಮಿತ್ತ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಹಾಗೂ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಶಿವಮೊಗ್ಗಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಸೋಮವಾರ ಬೆಳಿಗ್ಗೆ 9 ಗಂಟೆಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಶಾಸಕಿ ಶಾರದಾ ಪೂರ್ಯಾನಾಯ್ಕ, ಸಚಿವರ ನಿರೀಕ್ಷೆಯಲ್ಲಿ ಕಾದಿದ್ದರು.
ಘೋಷಣೆ: ಒಂದು ಗಂಟೆಕಾದರೂ ಸಹ ಸಚಿವದ್ವಯರು ಹೊರಗೆ ಬರಲೇ ಇಲ್ಲ. ನಂತರ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಪ್ರವಾಸಿ ಮಂದಿರದ ಹೊರಗೆ ಬಂದರೂ ಶಾಸಕರನ್ನು ಮಾತನಾಡಿಸದೇ ಪಕ್ಷದ ಕಚೇರಿಯ ಕಾರ್ಯಕ್ರಮಕ್ಕೆಂದು ಹೊರಟರು. ಇದರಿಂದ ಕೆರಳಿದ ಜೆಡಿಎಸ್ ಶಾಸಕರು ಸಚಿವರನ್ನು ತಡೆದು ಘೋಷಣೆ ಕೂಗಲಾರಂಭಿಸಿದರು.
ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಸಚಿವರು, ಶಾಸಕರು ಇಲ್ಲಿ ನನಗಾಗಿ ಕಾದಿರುವ ಸಂಗತಿ ತಿಳಿದಿಲ್ಲ. ಯಾರೂ ಗಮನಕ್ಕೆ ತಂದಿಲ್ಲ. ಶಾಸಕರಿಗೆ ಅಗೌರವ ತೋರಿಸುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಶಾಸಕರು, ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ನಂತರ ಕಂದಾಯ ಸಚಿವರ ಸರದಿ. ಶಾಸಕಿ ಶಾರದಾ ಪೂರ್ಯಾನಾಯ್ಕರನ್ನು ಭೇಟಿ ಮಾಡಿದ ಸಚಿವ ಶ್ರೀನಿವಾಸ ಪ್ರಸಾದ್, ಕುಂಸಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸರ್ಕಾರದ ಕಡೆಯಿಂದ ನಡೆಯುತ್ತಿಲ್ಲ. ಇದು ಪಕ್ಷ ಹಮ್ಮಿಕೊಂಡ ಸಮಾವೇಶ. ಹಾಗೆಯೇ ತಾವು ಬಗರ್ಹುಕುಂ ಸಮಿತಿಯ ಅಧ್ಯಕ್ಷರಾಗಿರುತ್ತೀರ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳುವುದು ನಿಮಗೆ ಮುಜುಗರ ತರಬಹುದು ಎಂಬ ಕಾರಣಕ್ಕೆ ನಿಮ್ಮನ್ನು ಆಹ್ವಾನಿಸಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕಿ, ಈ ಸಮಾವೇಶ ರಾಜಕೀಯ ಲಾಭಕ್ಕೆ ಬಳಸುತ್ತಿದ್ದೀರ. ಪಕ್ಷಾತೀತವಾಗಿ ನಡೆಸುತ್ತೇವೆ ಎಂದು ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೂ ಭಾಗವಹಿಸುವಂತೆ ಮನವಿ ಮಾಡಿದ್ದೀರ, ಜೊತೆಗೆ ನಾಲ್ಕು ಪ್ರಮುಖ ಮಂತ್ರಿಗಳಿಗೆ ಆಹ್ವಾನ ನೀಡಿ ನನಗೆ ಕಡೆಗಣಿಸಲಾಗಿದೆ. ಇದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

