ನಗರಸಭೆ ಅಧಿಕಾರಿಗಳ ಮೇಲೆ ಹರಿಹಾಯ್ದ ಸದಸ್ಯರು
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.13
ನಗರಸಭೆ ಆಡಳಿತದ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ತರಾಟೆಗೆ ತೆಗೆದಕೊಂಡಿದ್ದು, ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ವಿಶೇಷವಾಗಿತ್ತು.
ಸುಮಾರು 5 ತಿಂಗಳ ನಂತರ ಆಯೋಜನೆಯಾಗಿದ್ದ ಈ ಸಭೆ ಆರಂಭವಾಗುತ್ತಿದ್ದಂತೆ ಆಡಳಿತಾಧಿಕಾರಿ ಅವಧಿಯಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಸದಸ್ಯರು ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಇತ್ಯಾದಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಪೌರಾಯುಕ್ತರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಬಿಜೆಪಿ ಸದಸ್ಯ ರಾಜಶೇಖರ್ ಅವರು, ಆಡಳಿತಾಧಿಕಾರಿ ಅವಧಿಯಲ್ಲಿ ಯಾರನ್ನೂ ವಿಶ್ವಾಸಕ್ಕೆ ಪಡೆಯದೇ ಬಜೆಟ್ ರೂಪಿಸಲಾಗಿದೆ. ಈ ಬಗ್ಗೆ ಚರ್ಚೆ ಅಗತ್ಯ. ಮೊದಲು ಬಜೆಟ್ ಪ್ರತಿಯನ್ನು ಎಲ್ಲಾ ಸದಸ್ಯರಿಗೂ ಕೊಡಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ನ ಮರಿಯಪ್ಪ, ಸದಸ್ಯ ಮಾಲತೇಶ್, ಐಡಿಯಲ್ ಗೋಪಿ ಸೇರಿದಂತೆ ಹಲವರು ಇದಕ್ಕೆ ದನಿಗೂಡಿಸಿದರು.
ಮರುಪರಿಶೀಲನೆ: ಬಜೆಟ್ ರೂಪಿಸುವ ಮುನ್ನ ಸಾರ್ವಜನಿಕರ ಸಲಹೆ ಪಡೆದಿಲ್ಲ. ಆದ್ದರಿಂದ ಮರುಪರಿಶೀಲನೆ ಆಗಬೇಕು ಎಂದು ಒತ್ತಾಯಿಸಿದರು. ಕೊನೆಗೆ ಪೌರಾಯುಕ್ತ ಮೂಕಪ್ಪ ಕರೇಭೀಮಣ್ಣನವರ್ ಪ್ರತಿಯನ್ನು ಎಲ್ಲ ಸದಸ್ಯರಿಗೂ ತಲುಪಿಸುವಾಗಿ ನುಡಿದರು. ಸದಸ್ಯರಾದ ಮೋಹನ್ ರೆಡ್ಡಿ ಸೇರಿದಂತೆ ಹಲವು ಸದಸ್ಯರು ನಗರದ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಹಾಲಿನ ಬೂತ್ ಬಾಡಿಗೆ: ನಗರದ ಗೋಪಿ ವೃತ್ತದಲ್ಲಿರುವ ಕೆಎಂಎಫ್ ಹಾಲಿನ ಬೂತ್ ಗೆ ನಗರಸಭೆ ಕೇವಲ ರು. 250 ನೆಲಬಾಡಿಗೆ ಪಡೆಯುತ್ತಿದೆ. ಆದರೆ ಶಿವಮೊಗ್ಗ ಹಾಲು ಒಕ್ಕೂಟವು ಇಲ್ಲಿಂದ ಮಾಸಿಕ ರು. 26,000 ಬಾಡಿಗೆ ಪಡೆಯುತ್ತಿದೆ ಎಂದು ಐಡಿಯಲ್ ಗೋಪಿ ವಿಷಯ ಪ್ರಸ್ತಾಪಿಸಿದರು.
ನಗರಸಭೆಯೇ ಈ ಜಾಗವನ್ನು ಹರಾಜು ಹಾಕಬೇಕು. ಬಾಡಿಗೆ ಹಣ ನಗರಸಭೆಗೆ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿ ಗಮನ ಸೆಳೆದರು.
ಸದಸ್ಯ ಎಸ್.ಕೆ. ಮರಿಯಪ್ಪ, ಗಾಡಿಕೊಪ್ಪದಲ್ಲಿ ಪಾರ್ಕ್ಗೆಂದು ಮೀಸಲಿಟ್ಟ ಜಾಗದಲ್ಲಿ ಮನೆ ಕಟ್ಟಲಾಗುತ್ತಿದೆ. ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೌರಾಯುಕ್ತರು ಸಮಜಾಯಿಷಿ ನೀಡಿದರು.
ನಾರಾಯಣ ಹೃದಯಾಲಯಕ್ಕೆ ಪ್ರತಿದಿನ 10 ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈ ನಡುವೆ ನಾಗರಿಕ ಹಿತರಕ್ಷಣಾ ವೇದಿಕೆ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಸಭೆಯಲ್ಲಿದ್ದ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಮನವಿ ಸ್ವೀಕರಿಸಲು ಹೊರ ನಡೆದಾಗ ಅವರೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷರೂ ಹೊರಬಂದರು. ಆಗ ಸಭೆ 10 ನಿಮಿಷ ಸ್ಥಗಿತವಾಗಿದ್ದು, ವಾಪಸು ಬಂದಾಗ ವಿಪಕ್ಷ ಸದಸ್ಯರು, ಸಭೆಗೆ ತಿಳಿಸದೇ ಹೊರನಡೆದ ಬಗ್ಗೆ ಆಕ್ಷೇಪಿಸಿದರು. ಅಧ್ಯಕ್ಷೆ ಖುರ್ಷಿದಾ ಬಾನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

