ಅಡಕೆ ತೋಟ ಕಡಿದ ಅಧಿಕಾರಿಗಳು
ಕ.ಪ್ರ.ವಾರ್ತೆ ಟಿ ತೀರ್ಥಹಳ್ಳಿ ಟಿ ನ.15
ಫಸಲು ಕೊಡುತ್ತಿದ್ದ ಅಡಕೆ ತೋಟವನ್ನು ಅಧಿಕಾರಿಗಳು, ಪೊಲೀಸರ ಕುಮ್ಮಕ್ಕಿನಲ್ಲಿ ಅರಣ್ಯ ಇಲಾಖೆ ಕಡಿದು ಹಾಕಿದ್ದು ಅಮಾನವೀಯ ಕೃತ್ಯವಾಗಿದ್ದು, ಮಲೆನಾಡಿನ ರೈತ ಅಸಹಾಯಕನಾಗಿ ಆಕಾಶ ನೋಡುವಂತಾಗಿದೆ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸನಗರದ ತ್ರಿಣಿವೆಯಲ್ಲಿ ಇತ್ತೀಚೆಗೆ ಬೆಳೆದು ನಿಂತಿದ್ದ 4.5 ಎಕರೆ ಅಡಿಕೆ ತೋಟ ಕಡಿದು ಹಾಕಿದ್ದಾರೆ. ಹೈಕೋರ್ಟಿನ ಆದೇಶದಂತೆ ಹೀಗೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆದೇಶ ಅನ್ವಯ: ಆದರೆ ಈ ಪ್ರದೇಶದ ಸುಮಾರು 56 ಕುಟುಂಬಗಳು ರೂಢಿಸಿಕೊಂಡು ಬಂದಿರುವ ಕೃಷಿ ಭೂಮಿಗೂ ಈ ಆದೇಶ ಅನ್ವಯವಾಗಿದ್ದು, ಶಂಕರಪ್ಪ ಗೌಡರ ತೋಟವನ್ನು ಕಡಿದಿರುವುದಕ್ಕೆ ಮಾಜಿ ಶಾಸಕರ ಒತ್ತಡ ಕಾರಣವೆಂದು ಅವರು ಹೇಳಿದರು. ಅರಣ್ಯ ಹಕ್ಕು ಕಾಯಿದೆ 4.1 ರಲ್ಲಿ ನೋಟಿಫಿಕೇಶನ್ ಆಗಿದ್ದರೂ, ಇದನ್ನು ಪರಿಶೀಲಿಸಲು 17.1 ರಂತೆ ಇದಕ್ಕೆ ರೀ ಸರ್ವೆ ಮಾಡಿಸಿ ಹೊರಗೆ ಉಳಿಸಬಹುದು. ಈಗಾಗಲೇ ತೊಂದರೆಗೆ ಒಳಗಾಗಿರುವ ರೈತ ಸುಪ್ರೀಂ ಕೋರ್ಟಿಗೆ ಹೋಗುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು, ಅಷ್ಟರೊಳಗೆ ಅರಣ್ಯ ಇಲಾಖೆ ಈ ಕೃತ್ಯ ನಡೆಸಿದ್ದು, ಈ ಭಾಗದ ರೈತರು ನಿರ್ಗತಿಕರಾಗುವ ಸನ್ನಿವೇಶ ಎದುರಾಗಿದೆ ಎಂದು ಹೇಳಿದರು.
ಜಿಲ್ಲಾ ಮಂತ್ರಿಗಳಾಗಿರುವ ಈ ಕ್ಷೇತ್ರದ ಶಾಸಕರಿಗೂ ವಿಷಯ ಗೊತ್ತು. ಆದರೆ ಇದನ್ನು ತಡೆಯುವ ಪ್ರಯತ್ನ ಮಾಡಬಹುದಿತ್ತು, ಕೃತ್ಯ ನಡೆದು 3 ದಿನಗಳಾದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.
ಚಿಣ್ಣರ ಪ್ರವಾಸ: ಈ ಹಿಂದೆ ಎಲ್ಲ ಮಕ್ಕಳಿಗೂ ಚಿಣ್ಣರ ಪ್ರವಾಸ ಏರ್ಪಡಿಸಲಾಗುತ್ತಿತ್ತು. ಆದರೆ ಈಗ ಸರ್ಕಾರವೇ ಚಿಣ್ಣರ ಶೈಕ್ಷಣಿಕ ಪ್ರವಾಸಕ್ಕೆ ಜಾತಿ ಹೆಸರಿನಲ್ಲಿ ಬಣ್ಣ ಬಳಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಶಿಕ್ಷಣ ಮಂತ್ರಿಗಳು ಇದಕ್ಕೆ ಉತ್ತರಿಸುವ ಅತ್ಯವಿದೆ ಎಂದು ಹೇಳಿದರು.
ನ.17ರಂದು ಬೆಂಗಳೂರಿನಲ್ಲಿ ನೆಡೆಯಲಿರುವ ನಮೋ ರ್ಯಾಲಿಗೆ ತೀರ್ಥಹಳ್ಳಿ ತಾಲೂಕಿನಿಂದ 1000 ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಾಲೇಕೊಪ್ಪ ರಾಮಚಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಚಕ್ಕೋಡಬಾಲು ರಾಘವೇಂದ್ರ, ಡಿ. ಲಕ್ಷ್ಮಣ, ಯಲ್ಲಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

