ಬದುಕಿನ ಸುಸ್ಥಿತಿಗೆ ಸಹಕಾರಿ ಅಗತ್ಯ
ಕ.ಪ್ರ.ವಾರ್ತೆ ಶಿವಮೊಗ್ಗ ನ.19
ಸಹಕಾರಿ ಎಂಬುದು ಚಳುವಳಿ ಇದ್ದಂತೆ. ಪ್ರಸ್ತುತ ಸಹಕಾರಿ ಕ್ಷೇತ್ರ ರಾಜಕೀಯ ರೂಪ ಪಡೆದುಕೊಳ್ಳುತ್ತಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘ, ಶಿವಮೊಗ್ಗ ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ, ಬ್ಯಾಂಕ್ ಗಳು ಹಾಗೂ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಹಕಾರ ಸಂಬಂಧಿ ತೆರಿಗೆ ಮತ್ತು ಕಾಯ್ದೆ ದಿನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಯಾಂತ್ರಿಕವಾಗಬಾರದು: ಸಹಕಾರಿ ಸಂಘಗಳು ಜನರ ಬದುಕಿಗೆ ಆಧಾರವಾಗಿ ಕೆಲಸ ಮಾಡಬೇಕು. ಸಂಘ ಸಪ್ತಾಹಗಳು ಯಾಂತ್ರಿಕ ಕಾರ್ಯಕ್ರಮಗಳಾಗಬಾರದು. ವರ್ಷ ಪೂರ್ತಿಯ ಅವಲೋಕನಾ ಕಾರ್ಯಕ್ರಮವಾಗಬೇಕು ಎಂದ ಅವರು, ಸಹಕಾರಿ ಸಂಘಗಳು ಲಾಭ ಮಾಡುವ ಸಂಸ್ಥೆಗಳಲ್ಲ. ವ್ಯಾಪಾರಿ ಸಂಸ್ಥೆಯೂ ಅಲ್ಲ. ಜನರ ಬದುಕನ್ನು ಸುಸ್ಥಿತಿಯಲ್ಲಿ ಇಡಲು ಸಹಕಾರಿಯಾಗುವ ಒಂದು ಮಾರ್ಗ ಎಂದರು.
ಸಹಕಾರಿ ಸಂಘಗಳು ಇಲ್ಲದಿದ್ದರೆ ಜನರು ಮೀಟರ್ ಬಡ್ಡಿ ಹಾಕುವವರ ಕೈಗೆ ಸಿಲುಕಿ ನಲುಗುತ್ತಿದ್ದರು. ಇದರಿಂದ ಮೀಟರ್ ಬಡ್ಡಿ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಇನ್ನು ಇದ್ದಾರೆ. ಸಹಕಾರಿಯ ಕೆಲ ಸದಸ್ಯರೆ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿರುವುದು ವಿಷಾದನೀಯ. ಸಹಕಾರಿಯ ಸದಸ್ಯತ್ವ ಹೊಂದಿ ಈ ರೀತಿಯ ವ್ಯವಹಾರ ಮಾಡಿದರೆ ಜನ್ಮ ನೀಡಿದ ತಾಯಿಗೆ ದ್ರೋಹ ಬಗೆದ್ದಂತೆ. ಈ ಬಗ್ಗೆ ಸದಸ್ಯರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಗಂಭೀರ ಸಭೆ ನಡೆಯುತ್ತಿಲ್ಲ: ಜಿಲ್ಲೆಯಲ್ಲಿ ಸುಮಾರು 1,070 ಸಹಕಾರಿಗಳಿವೆ. ಈ ಸಹಕಾರಿಯಲ್ಲಿ ನಡೆಯುವ ಸಾಮಾನ್ಯ ಸಭೆಗಳು ಗಂಭೀರವಾಗಿ ನಡೆಯುತ್ತಿಲ್ಲ. ಮೂಲ ವಿಷಯಗಳು ಚರ್ಚೆ ಆಗುತ್ತಿಲ್ಲ. ಇದರಿಂದ ಸಹಕಾರಿಯ ಮೂಲ ತತ್ವಕ್ಕೆ ಹೊಡೆತ ಬೀಳುತ್ತದೆ ಎಂದರು.
ಯಾವುದೇ ಸಹಕಾರಿ ಸಂಸ್ಥೆಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆಯಬೇಕು. ಇಲ್ಲವಾದಲ್ಲಿ ಸಂಸ್ಥೆಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದರು.
ಅಧಿಕ ಹೊರೆ: ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮೋಹನ್ ಉಂಬಳೇಬೈಲು, ಕೇಂದ್ರ ಸರ್ಕಾರ ಸಹಕಾರಿ ಸಂಘಗಳ ಮೇಲೆ ನೇರ ತೆರಿಗೆ ವಿಧಿಸಲು ಮುಂದಾಗಿದೆ. ಇದರಿಂದ ಸಹಕಾರಿಗಳ ಮೇಲೆ ಅಧಿಕ ಹೊರೆಯಾಗುತ್ತದೆ. ಇದರ ವಿರುದ್ಧ ಸಹಕಾರಿ ಸಂಘದ ಎಲ್ಲಾ ಸದಸ್ಯರು ಹಾಗೂ ಜನಪ್ರತಿನಿಧಿಗಳು ಸಂಸತ್ ನಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿದರು. ಚಾರ್ಟೆಡ್ ಅಕೌಂಟೆಟ್ ಬಿ.ಜಿ. ರವೀಶ್ ಸಹಕಾರ ಸಂಬಂಧಿ ತೆರಿಗೆ ಮತ್ತು ಕಾಯ್ದೆ ದಿನ ವಿಷಯ ಕುರಿತು ಉಪನ್ಯಾಸ ನೀಡಿದರು.
ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್, ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಡಿ. ಕಾಂತರಾಜ್, ನಗರಸಭೆ ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್, ಯೂನಿಯನ್ ಉಪಾಧ್ಯಕ್ಷ ಕೆ.ಆರ್. ಗಣಪತಿ ಭಟ್, ಇಪ್ಕೋ ಸಂಸ್ಥೆಯ ಉಮಾಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

