ಅಡಕೆ ಬೆಳೆಗಾರರ ಮೇಲೆ ಐಟಿಸಿ ಲಾಬಿ: ಆರೋಪ
ಶಿವಮೊಗ್ಗ: ಅಡಕೆ ಬೆಳೆಗಾರರನ್ನು ಸಂಪೂರ್ಣವಾಗಿ ನಾಶ ಮಾಡುವ ನಿಟ್ಟಿನಲ್ಲಿ ಐಟಿಸಿ ಕಂಪನಿ ತಯಾರಿ ನಡೆಸಿದೆ ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾನ್ ಗುಟ್ಕಾ ಸೇವಿಸುವುದರಿಂದ ಕಾನ್ಸರ್ ಬರುತ್ತದೆ, ಆದ್ದರಿಂದ ಗುಟ್ಕಾ ಹಾಗೂ ಅಡಕೆ ಪದಾರ್ಥ ನಿಷೇಧಿಸಬೇಕೆಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಇದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರಗಳು ಗುಟ್ಕಾವನ್ನು ನಿಷೇಧ ಮಾಡಿದವು.
ಆದರೆ, 2013ರ ಅಕ್ಟೋಬರ್ 29ರಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಬರೀ ಅಡಕೆ ತಿನ್ನುವುದರಿಂದ ಕಾನ್ಸರ್ ಬರುತ್ತದೆ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಹೊಗೆಸೊಪ್ಪು ಮಿಶ್ರಿತ ಅಡಕೆ ತಿಂದರೆ ಕಾನ್ಸರ್ ಬರುತ್ತೆ ಎಂದು ಹೇಳಿದ ಅಧಿಕಾರಿಗಳು ಈಗ ಬರೀ ಅಡಕೆ ತಿಂದರೂ ಹಾನಿಕರ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದು ಮೇಲ್ನೋಟಕ್ಕೆ ತಂಬಾಕಿನ ಕಂಪನಿಯ ಹಿಡಿತ ಹಾಗೂ ಅಧಿಕಾರಿಗಳಿಗೆ ಭ್ರಷ್ಟಾಚಾರದ ಮುಖಾಂತರ ಇಂತಹ ಅವೈಜ್ಞಾನಿಕ ನಿಲುವುಗಳನ್ನು ಅಡಕೆ ಸೇವನೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿರುವುದು ಕಂಡುಬರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ನಿಷೇಧ ಭೀತಿ: ಒಂದು ವೇಳೆ ಕೋರ್ಟ್ ಇದಕ್ಕೆ ಮನ್ನಣೆ ನೀಡಿದರೆ ಅಡಕೆ ಹಾನಿಕರ ಎಂದು ಕೋರ್ಟ್ ಪರಿಗಣಿಸಿದರೆ ಅಡಕೆ ಬೆಳೆ, ಗಾಂಜಾ ಬೆಳೆ ತರಹದ ನಿಷೇಧಕ್ಕೆ ಒಳಗಾಗುತ್ತದೆ. ಈ ಕೂಡಲೆ ಅಡಕೆ ಬೆಳೆಗಾರರು ರೈತ ಮುಖಂಡರು ಮ್ಯಾಮ್ಕೋಸ್, ತುಮ್ಕೋಸ್, ಕ್ಯಾಂಪ್ಕೋ ವಿವಿಧ ಪಕ್ಷದ ಮುಖಂಡರು ಪಕ್ಷ ಬೇಧ ಮರೆತು ಒಂದಾಗಬೇಕು. ಅಡಕೆ ಬೆಳೆಗಾರರ ಹಿತದೃಷಿ ಕಾಪಾಡುವ ನಿಟ್ಟಿನಲ್ಲಿ ಅಡಕೆ ಸಂಶೋಧನಾ ಕೇಂದ್ರಗಳ ಮುಖಾಂತರ ಅಡಕೆ ಹಾನಿಕರ ಅಲ್ಲವೆಂಬ ವೈಜ್ಞಾನಿಕ ಪ್ರಮಾಣ ಪತ್ರ ಪಡೆದು ಎಲ್ಲರೂ ಶೀಘ್ರವೇ ಸುಪ್ರಿಂಕೋರ್ಟ್‌ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಪ್ಪು ಪ್ರಮಾಣ ಪತ್ರ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಅಡಕೆ ಬೆಳೆಗಾರರು ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಸಚಿನ್ ಮೀಗಾ ತಿಳಿಸಿದ್ದಾರೆ.
ಬೆಳೆಗಾರರು ಕಂಗಾಲು: ಈಗಾಗಲೇ ಈ ಭಾಗದ ಅಡಕೆ ಬೆಳೆಗಾರರು ಸಾಲ ತೀರಿಸಲಾಗದೆ ಕಂಗಾಲಾಗಿದ್ದಾರೆ. ಹಲವಾರು ರೈತರು ಆತ್ಮಹತ್ಯೆಗೆ ಶರಣರಾಗಿದ್ದಾರೆ. ಈ ನೀರಿನಲ್ಲಿ ಅಡಕೆ ಹಾನಿಕರವಲ್ಲ, ತಂಬಾಕು ಹಾನಿಕರ ಎಂದು ಕೋರ್ಟ್‌ಗೆ ಮನವರಿಕೆ ಮಾಡಿ ತಂಬಾಕು ನಿಷೇಧಿಸುವಂತೆ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲವಾದಲ್ಲಿ ತಂಬಾಕು ತಯಾರಕರ ಕಪಿಮುಷ್ಟಿಯಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

