ಶಿವಮೊಗ್ಗ

ಅರೆಬೆಂದ ವಿಚಾರವಾದಿಗಳ ಮಾತು ನಂಬಬೇಡಿ

Published On :

ಕ.ಪ್ರ.ವಾರ್ತೆ ಶಿವಮೊಗ್ಗ ನ. 20
ಉಡುಪಿಯಲ್ಲಿ ಕೃಷ್ಣ ಕನಕನ ಕಡೆ ತಿರುಗಿದ ಎಂಬುದು ನಂಬಿಕೆಯೋ, ಮೂಢನಂಬಿಕೆಯೋ- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಶ್ನೆಗೆ ಮೊದಲು ಉತ್ತರಿಸಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಸವಾಲೆಸೆದಿದ್ದಾರೆ.
ಕನಕ ಜಯಂತಿಯ ದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಪ್ರಶ್ನೆಯನ್ನು ಮುಂದಿಟ್ಟು, ಅವತ್ತು ಕೃಷ್ಣ ಇರಲಿಲ್ಲ ಎನ್ನುತ್ತೀರಾ ಕನಕದಾಸರೇ ಇರಲಿಲ್ಲ ಎನ್ನುತ್ತೀರಾ ಏನು ಹೇಳುತ್ತೀರಿ ಎಂದು ಸ್ಪಷ್ಟೀಕರಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಮೊದಲು ನಂಬಿಕೆ ಎಂದರೇನು, ಮೂಢನಂಬಿಕೆ ಎಂದರೇನು ಎಂದು ಹೇಳಿ. ಆಮೇಲೆ ಮೂಢನಂಬಿಕೆ ನಿರ್ಬಂಧ ಕಾನೂನು ಜಾರಿಗೆ ತನ್ನಿ. ಅರೆಬೆಂದ ವಿಚಾರವಾದಿಗಳ ಮಾತು ನಂಬಬೇಡಿ ಎಂದರು.
ನನಗೆ ನಂಬಿಕೆ ಎನಿಸಿದ್ದು ಇತರರಿಗೆ ಮೂಢನಂಬಿಕೆ ಎನಿಸಬಹುದು. ಇತರರು ಮೂಢನಂಬಿಕೆ ಎಂದು ಜರೆಯುವುದು ನನಗೆ ನಂಬಿಕೆಯಾಗಿ ಕಾಣಬಹುದು. ಆದ್ದರಿಂದ ಈ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದರು.
ಚರ್ಚೆಯಾಗಲಿ: ಕಾಯಿದೆ ಜಾರಿಗೆ ತರುವ ವಿಚಾರ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂಬುದೇನೋ ನಿಜ. ಆದರೆ, ಮೊದಲು ಸಾರ್ವಜನಿಕ ಚರ್ಚೆಗೊಳಗಾಗಬೇಕು. ನಂತರ ತೀರ್ಮಾನವಾಗಬೇಕು ಎಂದು ಆಯನೂರು ಮಂಜುನಾಥ್ ಹೇಳಿದರು.
ಭಯಗೊಂಡಿದ್ದಾರೆ: ಬೆಂಗಳೂರಿನಲ್ಲಿ ನಡೆದ ನರೇಂದ್ರ ಮೋದಿ ರ್ಯಾಲಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಗೊಂಡಿದ್ದಾರೆ. ಆದ್ದರಿಂದಲೇ ಅವರು ಎಲ್ಲಾ ಸಭೆಗಳಲ್ಲೂ ಮೋದಿ ಮಂತ್ರ ಜಪಿಸುತ್ತಿದ್ದಾರೆ ಎಂದ ಅವರು, ಮೋದಿ ನಾವೆಲ್ಲರೂ ಒಪ್ಪಿರುವ ಸಮರ್ಥ ನಾಯಕ ಎಂದರು.
ಬಿ.ಕೆ. ಹರಿಪ್ರಸಾದ್ ಅವರಿಗೆ ಮೋದಿ ಅವರನ್ನು ಟೀಕಿಸುವ ನೈತಿಕ ಹಕ್ಕು ಇಲ್ಲ. 20 ವರ್ಷದ ಹಿಂದೆ ಹರಿಪ್ರಸಾದ್ ಎಲ್ಲಿದ್ದರು ಎಂದು ನೆನಪು ಮಾಡಿಕೊಳ್ಳಲಿ. ರಕ್ತಸಿಕ್ತ ಚರಿತ್ರೆ ಮೋದಿ ಅವರದೋ, ತಮ್ಮದೋ ಪೊಲೀಸರು ಯಾರನ್ನು ಎನ್‌ಕೌಂಟರ್ ಮಾಡಿದರು ಹರಿಪ್ರಸಾದ್ ಹೇಗೆ ಬಚಾವಾದರು ಎಂಬುದನ್ನು ಅವರು ಹೇಳಬಹುದೋ ಎಂದು ಪ್ರಶ್ನಿಸಿದರು.
ಜೋಷಿ ಕಾರಣವಲ್ಲ: ಸಚಿವ ಜಯಚಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಕಚೇರಿಯನ್ನು ಅವರ ಸಹೋದರ ದುರ್ಬಳಕೆ ಆದ ಹಿನ್ನೆಲೆಯಲ್ಲಿ ರಾಜಿನಾಮೆ ಕೊಡಬೇಕು ಎಂದು ಕೇಳಿದ್ದಾರೆ. ಹಾಗಾದರೆ ಅಳಿಯ (ರಾಬರ್ಟ್ ವಾದ್ರಾ) ಮಾಡಿದ ತಪ್ಪಿಗೆ ಅತ್ತೆ (ಸೋನಿಯಾ ಗಾಂಧಿ) ಅವರು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಕೇಳುತ್ತಾರೆಯೇ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ರಾಜಿನಾಮೆ ಕೊಡಿಸಲಿ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರೂ ರಾಜಿನಾಮೆ ಕೊಡುತ್ತಾರೆ ಎಂದರು.
ಮೋದಿ ರ್ಯಾಲಿ ಎಂದು ಸರ್ಕಸ್ ಎಂದು ಹೇಳಿರುವ ಅನಂತಮೂರ್ತಿ ಅವರು ಅವಾಂತರ ಮೂರ್ತಿ ಎಂದು ಟೀಕಿಸಿದ ಅವರು, ಗೋಕಾಕ್ ಚಳವಳಿಯನ್ನು ಸಮೂಹ ಸನ್ನಿ ಎಂದ ಇಂಗ್ಲಿಷ್ ಪ್ರಾಧ್ಯಾಪಕ ಅನಂತಮೂರ್ತಿ ಅವರು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ದತ್ತಾತ್ರಿ, ಎಂ. ಶಂಕರ್, ಎನ್.ಜೆ. ರಾಜಶೇಖರ್, ಮಧುಸೂದನ್, ಅಣ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.