ಶಾಂತಿ ನೆಲೆಸಲು ಗೂಂಡಾ ಕಾಯ್ದೆ ಅಸ್ತ್ರ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.23
ಗೂಂಡಾ ಕಾಯ್ದೆಯನ್ನು ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಂಡರೆ ಪ್ರತಿ ಪೊಲೀಸ್ ಠಾಣೆಗಳಲ್ಲಿ ಸುಮಾರು 20 ಅಪರಾಧ ಪ್ರಕರಣಗಳು ಕಡಿಮೆ ಆಗುತ್ತವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಮುನ್ನ ಆರೋಪಿಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿ ಪರಿಶೀಲಿಸಬೇಕು ಎಂದು ನಿವೃತ್ತ ಆಕ್ಟಿಂಗ್ ಚೀಫ್ ಜಸ್ಟೀಸ್ ಬಿ. ಪದ್ಮರಾಜ್ ಪೊಲೀಸರಿಗೆ ಸಲಹೆ ನೀಡಿದರು.
ದಾವಣಗೆರೆ ಪೊಲೀಸ್ ಅಧಿಕಾರಿಗಳಿಗಾಗಿ ನಗರದ ಜೆಎನ್ಎನ್ಸಿಇ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗೂಂಡಾ ಕಾಯ್ದೆ ಕುರಿತು ಕಾರ್ಯಾಗಾರದಲ್ಲಿ ಅವರು, ಸಂವಿಧಾನಬದ್ಧ ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವ ಸಮಾಜಘಾತುಕ ಶಕ್ತಿ ಹತ್ತಿಕ್ಕುವ ಸಲುವಾಗಿ ಗೂಂಡಾ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಸಂಬಂಧಿಸಿದ ಎಲ್ಲಾ ದಾಖಲೆ ಸಂಗ್ರಹಿಸಿ ಪರಿಶೀಲಿಸುವುದು ಕಡ್ಡಾಯವಾಗಬೇಕು. ಆಗ ಮಾತ್ರ ಈ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳು ಊರ್ಜಿತವಾಗಲಿವೆ ಎಂದು ಸ್ಪಷ್ಟಪಡಿಸಿದರು.
ಉತ್ತಮ ಅಸ್ತ್ರ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದರೆ ಪೊಲೀಸರಿಗೆ ಗೂಂಡಾ ಕಾಯ್ದೆ ಉತ್ತಮ ಅಸ್ತ್ರವಾಗಿದೆ. ಆದರೆ, ಈ ಅಸ್ತ್ರ ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸುವುದು ಸೂಕ್ತ. ಇದು ಆ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯದ ಮೇಲೆ ನಿಂತಿದೆ ಎಂದರು.
ಸಂವಿಧಾನದ 21ನೇ ಪರಿಚ್ಚೇದ ಹೇಳಿರುವಂತೆ ವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಪವಿತ್ರವಾದ ಹಕ್ಕು. ಇದಕ್ಕೆ ಚ್ಯುತಿ ತರುವುದು ಮಹಾಪರಾಧ. ಈ ಹಿನ್ನೆಲೆಯಲ್ಲಿ ಸಮಾಜದ ಕಂಟಕಪ್ರಾಯ ದುಷ್ಟರನ್ನು ದೂರವಿಡುವ ಅಗತ್ಯವಿದೆ. ಅದಕ್ಕಾಗಿಯೇ ಪೊಲೀಸರಿಗೆ ಈ ಕಾಯ್ದೆ ನೆರವಾಗಲಿದೆ ಎಂದರು.
ಸಹಕಾರಿ: ತನಿಖೆ ಸಂದರ್ಭದಲ್ಲಿ ಕರ್ತವ್ಯಪ್ರಜ್ಞೆ ಪ್ರಾಮಾಣಿಕವಾಗಿದ್ದಲ್ಲಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಅಧ್ಯಯನ ಬಹುಮುಖ್ಯ. ಇಂತಹ ಕಾರ್ಯಾಗಾರಗಳು ಪೊಲೀಸ್ ಅಧಿಕಾರಿಗಳಿಗೆ ಸಹಕಾರಿಯಾಗಿವೆ ಎಂದರು.
ಕನ್ನಡ ಕುರಿತು ಮಾತನಾಡಿದ ಅವರು, ಕನ್ನಡ ಇತರೆ ಯಾವುದೇ ಭಾಷೆಯಾಗಲಿ ಉಳಿಯಲು ಜನಾಶ್ರಯ ಹಾಗೂ ರಾಜಾಶ್ರಯ ಎರಡು ಮುಖ್ಯ. ಭಾಷೆ ಎಂಬುದು ಜನಸಾಮಾನ್ಯರ ಆಡು ಭಾಷೆಯಲ್ಲಿ ಬೆರತರೆ ಮಾತ್ರ ಉಳಿಯಲು ಸಾಧ್ಯ ಎಂದರು.
1,485 ರೌಡಿಗಳು: ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಎಸ್. ಪರಶಿವಮೂರ್ತಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪೂರ್ವ ವಲಯದಲ್ಲಿ 1,485 ರೌಡಿಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ತರಲು ಸಾಧ್ಯವಿಲ್ಲ. ಅವರ ಅಪರಾಧ ಪ್ರಕರಣ ಪರಿಗಣಿಸಿ ಅವರನ್ನು ಕಾಯ್ದೆಯಡಿ ತರಲಾಗುವುದು ಎಂದು ತಿಳಿಸಿದರು.
ರೌಡಿಗಳ ಮೇಲೆ ನಿಗಾ: ಈಗಾಗಲೇ ರೌಡಿ ಪಟ್ಟಿ ಪರಿಶೀಲಿಸಿ, ಜಿಲ್ಲೆಗಳ ರೌಡಿಗಳನ್ನು ಒಂದೆಡೆ ಸೇರಿಸಿ ರೌಡಿ ಚಟುವಟಿಕೆ ನಿಲ್ಲಿಸಿರುವವರನ್ನು ಪಟ್ಟಿಯಿಂದ ಮುಕ್ತಗೊಳಿಸುವ ಅಥವಾ ಹೊಸ ರೌಡಿಗಳನ್ನು ಪಟ್ಟಿಗೆ ಸೇರಿಸುವ ಕಾರ್ಯ ಮಾಡಲಾಗಿದೆ. ಹಳೆಯ ರೌಡಿಗಳ ಮೇಲೆ ನಿಗಾ ವಹಿಸಿ, ನಿಯಂತ್ರಿಸುವುದು ಇದರ ಪ್ರಮುಖ ಉದ್ದೇಶ. ಸುಧಾರಣೆಯಾಗದ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ತರಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲಿ ಗೂಂಡಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಈ ಮೂಲಕ ಸಮಾಜಘಾತುಕ ಶಕ್ತಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸುಧಾರಣೆಯಾಗದ ನಿಜವಾದ ಸಮಾಜ ಕಂಟಕರನ್ನು ಮಾತ್ರ ಕಾಯ್ದೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಕಾನೂನು ಅರಿವಿಗಾಗಿ ಪೊಲೀಸ್ ಅಧಿಕಾರಿಗಳಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹೈಕೋರ್ಟ್ನ ಸರ್ಕಾರಿ ವಕೀಲ ಇ.ಎಸ್. ಇಂದ್ರೇಶ್, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ. ಪ್ರಕಾಶ್, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

