ಶಿವಮೊಗ್ಗ

ಕುಳುವ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ನ. 24
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಎಲ್ಲಾ ವರ್ಗದವರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಹಿಂದುಳಿದ ವರ್ಗಕ್ಕೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಕಲ್ಪಿಸುವ ಸದುದ್ದೇಶದಿಂದ ಪ.ಜಾತಿ ಹಾಗೂ ಪಂಗಡದ ಅಭಿವೃದ್ಧಿ ನಿಗಮವನ್ನು ಪ್ರತ್ಯೇಕವಾಗಿಸಿ ಕಾಳಜಿ ಮೆರೆದಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾ.ಕುಳುವ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 12ನೇ ಶತಮಾನದ  ಕಾಯಕಯೋಗಿ ಶಿವಶರಣ ನೂಲಿಯ ಚಂದಯ್ಯನವರ ಉತ್ಸವ ಹಾಗೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆಯಲಿ: ಕುಳುವ ಸಮಾಜದ ಸದಸ್ಯರು ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾದ ಸಮುದಾಯವಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಮಾಜ ಈ ದಿಸೆಯಲ್ಲಿ ಎಲ್ಲಾ ರೀತಿಯಲ್ಲಿ ಬೆಂಬಲಿಸುವ ಮೂಲಕ ಸಂಸದನಾಗಲು ಸಹಕರಿಸಿದೆ ಎಂದ ಅವರು, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿ ಶಿಕ್ಷಣದಿಂದ ವಂಚಿತನಾಗದಂತೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದೆ. ಇದರ ಸದುಪಯೋಗದ ಮೂಲಕ ಸಂಪೂರ್ಣ ಸಮಾಜ ಅಭಿವೃದ್ಧಿ ಸಾಧಿಸಬೇಕಿದೆ ಎಂದರು.
ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದಲ್ಲಿ ನೂಲಿ ಚಂದಯ್ಯ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಗಮನ ಸೆಳೆಯಲು ಯಡಿಯೂರಪ್ಪ ಅವರ ಮೂಲಕ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಮುದಾಯ ಭವನ: ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಾದ ಪುರಸಭೆಯು ನಿವೇಶನ ಸೂಚಿಸಿ ಮನವಿ ಸಲ್ಲಿಸಿದಲ್ಲಿ ಕೂಡಲೇ ವಿರೋಧ ಪಕ್ಷದ ವಿಶ್ವಾಸ ಪಡೆದು ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕಡೂರು ನಂಜಪ್ಪ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕುಳುವ ಸಮಾಜದ ವತಿಯಿಂದ ಶಿಕಾರಿಪುರದಿಂದ ದಿ. ಯಂಕಟಪ್ಪನವರು 1981- 83ರಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಂತರ ಸಮಾಜಕ್ಕೆ ಸೂಕ್ತ ಗುರುವಿನ ಮಾರ್ಗದರ್ಶನವಿಲ್ಲದೆ ಇತ್ತೀಚಿನ ವರ್ಷದಲ್ಲಿ ನೂಲಿ ಚಂದಯ್ಯ ನೆನಪಿನಲ್ಲಿ ಉತ್ಸವ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಯುವ ಕುಳುವ ಮಹಾಸಭಾ ರಾಜ್ಯಾಧ್ಯಕ್ಷ, ಪರ್ತಕರ್ತ ಕೆ.ಎನ್. ಪ್ರಭು ಮಾತನಾಡಿ, ಕುಳುವ ಸಮಾಜಕ್ಕೆ ಸಂಘಟನೆ ಕೊರತೆಯಿದ್ದು, ಗುರು, ಮಠದಿಂದ ವಂಚಿತವಾಗಿರುವ ಸಮಾಜಕ್ಕೆ ಸಮುದಾಯ ಭವನ ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ತಾ.ಕುಳುವ ಸಮಾಜದ ಅಧ್ಯಕ್ಷ ಸುರೇಶ್ ವಹಿಸಿ ಮಾತನಾಡಿದರು. ಪುರಸಭಾ ಸದಸ್ಯ ಯಲ್ಲಪ್ಪ, ಹಿರಿಯ ಆರೋಗ್ಯ ಸಹಾಯಕಿ ಚಂದ್ರಮ್ಮ, ನಗರಸಭಾ ಸದಸ್ಯ ಶಿವರಾಜ್, ಆನಂದ್ ಕುಟ್ಟಿ, ಮಲ್ಲೇಶ ಮತ್ತಿತರರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ದಿ.ವೆಂಕಟಪ್ಪ ಗೌರವಾರ್ಥ ಸಭೆಯಲ್ಲಿ ಮೌನಾಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರಂಭದಲ್ಲಿ ನೂಲಿ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ಹುಚ್ಚೂರಾಯ ಸ್ವಾಮಿ ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಿತು.
ಸಾನ್ನಿದ್ಯವನ್ನು ಬಿಜಾಪುರ ಶಿವಣಗಿ ಕುಳುವ ಪೀಠದ ಜಗದ್ಗುರು ವೃಷಬೇಂದ್ರ ದೇಶೀಕೇಂದ್ರ ಮಹಾಸ್ವಾಮೀಜಿ, ಹುಲ್ಲೂರು ಮುಕ್ತಾಯೋಗಾಶ್ರವುದ ಶ್ರೋತ್ರಿಯ ಶಿವಾರೂಢ ಭಾರತಿ ಮಹಾಸ್ವಾಮೀಜಿ ವಹಿಸಿದ್ದರು. ಪುರಸಬಾ ಸದಸ್ಯ ಮೋಹನ್, ಗುರುರಾಜ ಜಗತಾಪ್, ಎಚ್.ಟಿ. ಬಳಿಗಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.