ಶರಾವತಿ ನದಿ ತಿರುವು ಪ್ರಸ್ತಾಪ ಅವೈಜ್ಞಾನಿಕ
ಶಿವಮೊಗ್ಗ: ಶರಾವತಿ, ಅಘನಾಶಿನಿ ಸೇರಿದಂತೆ ವಿವಿಧ ನದಿಗಳನ್ನು ಬೆಂಗಳೂರಿನತ್ತ ತಿರುಗಿಸುವ ಸರ್ಕಾರದ ಆಲೋಚನೆ ಅವೈಜ್ಞಾನಿಕವಾಗಿದೆ ಎಂದು ಐಐಎಸ್ಸಿ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲಿ ಅರಣ್ಯ ಇಲಾಖೆ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪಶ್ಚಿಮಘಟ್ಟದ ಜೀವವೈವಿಧ್ಯ ಮತ್ತು ಪರಿಸರ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನದಿ ತಿರುವು ಯೋಜನೆಗಳಿಂದ ಆರ್ಥಿಕ ಹೊರೆಯಾಗುವುದಲ್ಲದೆ, ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಕಾಡು ಬೆಳೆಸುವ ಹಾಗೂ ಮಳೆಕೊಯ್ಲು ಯೋಜನೆ ಉತ್ತೇಜಿಸುವ ಮೂಲಕ ಪರಿಸರ ಸಂರಕ್ಷಿಸುವ ಅಗತ್ಯವಿದೆ ಎಂದರು.
ಯುವಜನರ ಜವಾಬ್ದಾರಿ: ಜಾಗತಿಕ ಮಟ್ಟದಲ್ಲಿ ಪಶ್ಚಿಮಘಟ್ಟ ಸ್ವರ್ಗವಿದ್ದಂತೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ಭಾಗದ ಯುವ ಜನರ ಮೇಲಿದೆ. 70ರ ದಶಕದಲ್ಲಿನ ದಾಖಲೆ ಪ್ರಕಾರ ಶೇ. 43 ಅರಣ್ಯ ಪ್ರದೇಶವಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಅರ್ಧಕ್ಕರ್ಧ ನಾಶವಾಗಿದೆ. ಜನರು ಅರಣ್ಯವನ್ನು ಆರ್ಥಿಕ ಮೂಲವಾಗಿ ನೋಡುತ್ತಾರೆಯೇ ವಿನಃ ನಮ್ಮ ಬದುಕಿನ ಒಂದು ಅಂಗ ಎಂದು ಭಾವಿಸುತ್ತಿಲ್ಲ. ಇದೊಂದು ಆತಂಕಕಾರಿ ಅಂಶವಾಗಿದೆ ಎಂದರು.
ಸಂಪತ್ತು ನಾಶ: ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಕುಳಿತವರು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರುವ ಪರಿಣಾಮ ಇಂದು ಪ್ರಾಕೃತಿಕ ಸಂಪತ್ತು ಅವ್ಯಾಹತವಾಗಿ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ದಾಖಲೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಅರಣ್ಯದಿಂದ ವರ್ಷಕ್ಕೆ ರು. 187 ಕೋಟಿ ಆದಾಯವಿದೆ. ಆದರೆ, ನಮ್ಮ ಅಧ್ಯಯನದಿಂದ ಸಾವಿರ ಕೋಟಿವರೆಗೆ ಆದಾಯವಿದೆ. ಅಂದರೆ ಆದಾಯದ ಉಳಿದದ್ದು ಎಲ್ಲಿ ಹೋಯಿತು? ಇದೊಂದು ಹಗರಣವೇ ಎಂದು ಆತಂಕದಿಂದ ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

