ಶಿವಮೊಗ್ಗ

ವೈಶಿಷ್ಟ್ಯಪೂರ್ಣ ಕೆಳದಿ ಉತ್ಸವ

Published On :

ಕ.ಪ್ರ.ವಾರ್ತೆ  ಸಾಗರ  ನ. 26
ಇತಿಹಾಸ ಪುನರ್‌ಮನನ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಳದಿ ಉತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ಹೇಳಿದರು.
ತಾಲೂಕಿನ ಕೆಳದಿಯ ವಸ್ತು ಪ್ರದರ್ಶನ ಹಾಲ್‌ನಲ್ಲಿ ಮಂಗಳವಾರ ಡಿ. 15ರಂದು ನಡೆಯಲಿರುವ ಕೆಳದಿ ಉತ್ಸವದ ಲಾಂಛನ ಅನಾವರಣಗೊಳಿಸಿ, ಕೆಳದಿ ಅರಸರು ನಾಡಿಗೆ ನೀಡಿದ ಕೊಡುಗೆ, ಸಾಂಸ್ಕೃತಿಕ ಹಾಗೂ ಜನಪದಿಯ ಆಚರಣೆಗಳ ಕುರಿತು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಳದಿ ಉತ್ಸವದಂತಹ ಆಚರಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕೆಳದಿ ಅರಸರು ನಾಡಿಗೆ ನೀಡಿರುವ ಕೊಡುಗೆ ಅಮೂಲ್ಯವಾಗಿದ್ದರೂ ಕೆಳದಿ ಇತಿಹಾಸಕ್ಕೆ ಸಿಗಬೇಕಾದ ಸೂಕ್ತ ಮಾನ್ಯತೆ ಈತನಕ ಸಿಕ್ಕಿಲ್ಲ. ರಾಣಿ ಚೆನ್ನಮ್ಮ 25 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯಭಾರ ಮಾಡುವ ಮೂಲಕ ಮಾದರಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಈ ದಿಸೆಯಲ್ಲಿ ಇತರೆ ಉತ್ಸವಗಳಿಗಿಂತ ಭಿನ್ನವಾಗಿ ಕೆಳದಿ ಉತ್ಸವ ನಡೆಸುವುದು ನಮ್ಮ ಉದ್ದೇಶವಾಗಿದೆ. ಆಧುನಿಕ ನೃತ್ಯಗಳನ್ನು ಹೊರತುಪಡಿಸಿ ಜನಪದೀಯ ಕಾರ್ಯಕ್ರಮಗಳ ಮೂಲಕ ಜನರ ಉತ್ಸವವಾಗಿ ರೂಪುಗೊಳ್ಳುವ ಉದ್ದೇಶ ನಮ್ಮದಾಗಿದೆ ಎಂದರು.
ಸಿದ್ಧತೆ: ಉತ್ಸವಕ್ಕೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ವಿವಿಧ ಕಲಾತಂಡಗಳ ಸಹಭಾಗಿತ್ವದೊಂದಿಗೆ ಅಂದು ಮೆರವಣಿಗೆ, ನಂತರ ಉದ್ಘಾಟನಾ ಕಾರ್ಯಕ್ರಮ ಹಾಗೂ ಕೆಳದಿ ಅರಸರು ನೀಡಿದ ಕೊಡುಗೆ ಕುರಿತು ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾತಂಡಗಳಿಂದ ವಿವಿಧ ಜನಪದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಪೂರ್ವತಯಾರಿ ಮಾಡಿಕೊಳ್ಳಲಾಗಿದೆ. ಜೊತೆಗೆ ಡಿ. 15ರಂದು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕೆಳದಿ ರಾಜಗುರು ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇತಿಹಾಸದ ಗತವೈಭವ ಪುನರ್‌ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಕೆಳದಿ ಉತ್ಸವ ಮಹತ್ವದ ಪಾತ್ರ ವಹಿಸುತ್ತದೆ. ಆಡಂಬರ, ತೋರುಗಾಣಿಕೆಗಿಂತ ರಾಜರ ಆದರ್ಶ, ಆಳ್ವಿಕೆ ಕಾಲದಲ್ಲಿ ಆದ ಸುಧಾರಣೆ, ಕಲೆ, ಸಾಹಿತ್ಯ ಹಾಗೂ ಜನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸುವಂತೆ ಆಗಬೇಕು. ಕೆಳದಿ ಅರಸರ ಕಾಲದ ಅನೇಕ ಐತಿಹ್ಯಗಳು ಅಳಿವಿನ ಅಂಚಿನಲ್ಲಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿಯೂ ಇಂತಹ ಉತ್ಸವಗಳು ಬೆಳಕು ಚೆಲ್ಲಬೇಕು ಎಂದು ಹೇಳಿದರು.
ತಹಸೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಜಿಪಂ ಸದಸ್ಯೆ ಸುಮಂಗಲ ರಾಮಕೃಷ್ಣ, ತಾಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಶ್ವೇತಾ ಕಾಗೋಡು, ಕೆಳದಿ ಗ್ರಾಪಂ ಅಧ್ಯಕ್ಷ ಚೌಡಪ್ಪ, ಭೀಮನೇರಿ ಗ್ರಾಪಂ ಅಧ್ಯಕ್ಷ ತುಕಾರಾಮ, ಡಾ.ಗುಂಡಾ ಜೋಯಿಸ್ ಹಾಜರಿದ್ದರು.
ಲಾಂಛನದ ಅರ್ಥ: ಮಂಗಳವಾರ ಕೆಳದಿ ಉತ್ಸವದ ಅಂಗವಾಗಿ ಅನಾವರಣಗೊಂಡಿರುವ ಲಾಂಛನ ಕೆಳದಿ ಅರಸರು ತಮ್ಮ ಲಾಂಛನವಾಗಿ ಇರಿಸಿಕೊಂಡಿದ್ದರು. ನಾಲ್ಕು ಕಾಲುಗಳನ್ನು ಹೊಂದಿರುವ ಗಂಡಭೇರುಂಡ ಪಕ್ಷಿಯು ಎರಡು ಕಾಲಿನಲ್ಲಿ ಎರಡು ಸಿಂಹ ಹಾಗೂ ಮತ್ತೆರಡು ಕಾಲಿನಲ್ಲಿ ಆನೆಗಳನ್ನು ಹಿಡಿದುಕೊಂಡಿದೆ. ಇದು ಚರ್ತುದಿಕ್ಕುಗಳ ರಕ್ಷಣೆಯ ಸೂಚಿಸುವ ಜೊತೆಗೆ ಶೌರ್ಯ, ಧೈರ್ಯ ಪ್ರತಿನಿಧಿಸುವ ಸಂಕೇತವಾಗಿದೆ. ಕೆಳದಿ ಅರಸರು ಈ ಎಲ್ಲಾ ಅಂಶ ಒಳಗೊಂಡಂತೆ ತಮ್ಮ ಲಾಂಛನ ನಿರ್ಮಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.