ಇದು ಆತ್ಮಹತ್ಯೆಯಲ್ಲ ಸರ್ಕಾರ ಮಾಡಿದ ಕೊಲೆ
ಸೊರಬ: ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಇದ್ದರೂ ಸತ್ತಂತೆ, ರೈತರ ಆತ್ಮಹತ್ಯೆಗೆ ಕಾರಣವಾಗುವ ಯಾವುದೇ ಮುಖ್ಯಮಂತ್ರಿಯ ಅಗತ್ಯವಿಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ರೈತ ವಿಠಲ ಭೀಮಪ್ಪ ಅರಬಾವಿ ಆತ್ಮಹತ್ಯೆ ಖಂಡಿಸಿ ರಾಜ್ಯ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರೈತರ ಕಡೆಗಣನೆ: ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ನಂತರದ ದಿನಗಳಲ್ಲಿ ರೈತ ಸಮೂಹವನ್ನು ಕಡೆಗಣಿಸಿ, ನಿರ್ಲಕ್ಷಿಸುತ್ತಿದೆ. ಬೆಳಗಾವಿ ಸುವರ್ಣಸೌಧದ ಎದುರು ಚಳುವಳಿ ನಿರತ ರೈತ ಸಾವು ಕಂಡಿರುವುದು ಆತ್ಮಹತ್ಯೆಯಲ್ಲಿ ಅದು ಸರ್ಕಾರ ಮಾಡಿದ ಕೊಲೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ನೈತಿಕಹೊಣೆ ಹೊತ್ತು ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ನಿರಂತರ ನಡೆಸುವ ಇಂತಹ ಕೊಲೆಗಳು ನಿಲ್ಲಬೇಕು. ಇನ್ನಾದರೂ ಮುಖ್ಯಮಂತ್ರಿಗಳು ಸಮಗ್ರ ರೈತರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಡೆಯುವ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತನ ಸಮಾಧಿ ನಿರ್ಮಿಸಿ: ಸಾರ್ವಜನಿಕ ಹಿತರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಅಹಂನಿಂದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ತನೆ ರೈತ ಆತ್ಮಹತ್ಯೆಗೆ ಕಾರಣವಾಗಿದ್ದು, ಕಲಾಪದ ವೇಳೆ ಸದನದಿಂದ ಹೊರಬಂದು ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ವಿಚಾರಿಸಿದ್ದರೆ ವಿಠಲ ಭೀಮಪ್ಪ ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಬೆಳಗಾವಿ ಸುವರ್ಣಸೌಧದೆದುರು ಹುತಾತ್ಮ ರೈತನ ಸಮಾಧಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ರೈತ ಆತ್ಮಹತ್ಯೆಯನ್ನು ಖಂಡಿಸಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಯಲ್ಲಿ ಮುಖ್ಯಮಂತ್ರಿಗಳ ಶವಯಾತ್ರೆ ನಡೆಸಿ, ಬಸ್ ನಿಲ್ದಾಣ ವೃತ್ತದಲ್ಲಿ ಅಣಕು ಪ್ರತಿಕೃತಿ ದಹಿಸಿದರು.
ನಂತರ ಪುಟ್ಟಣ್ಣಯ್ಯ ಬಣದ ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಶಿವಣ್ಣ ಓಟೂರು ನೇತೃತ್ವದಲ್ಲಿ ರೈತ ಮುಖಂಡರು ತಾಲೂಕು ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ, ಸುಮಾರು 30 ನಿಮಿಷ ರಸ್ತೆತಡೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಬಿ. ವೀರಭದ್ರಪ್ಪಗೌಡ, ಉಮೇಶ್ ಪಾಟೀಲ್, ಈಶ್ವರಪ್ಪ ಕೊಡಕಣಿ, ಬಲೀಂದ್ರಪ್ಪ ಚಿಕ್ಕಾವಲಿ, ಬಿ.ಎಸ್. ಶಿವಪೂಜಪ್ಪಗೌಡ, ಗುತ್ಯಪ್ಪ, ಎಚ್. ಜಯಪ್ಪ, ಹಾಲೇಶಪ್ಪಗೌಡ್ರು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

