ಶಿವಮೊಗ್ಗ

ಕೆಎಸ್ಸಾರ್ಟಿಸಿ ಬಸ್‌ಗೆ ಬೈಕ್ ಡಿಕ್ಕಿ: ಓರ್ವನ ಸಾವು

Published On :

ಭದ್ರಾವತಿ: ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಂಬ್ಲೇಬೈಲ್ ರಸ್ತೆಯ ಚರ್ಚ್ ಸಮೀಪ ಗುರುವಾರ ರಾತ್ರಿ ಸುಮಾರು 9.45ಕ್ಕೆ ನಡೆದಿದೆ. ಕೂಲಿ ಬ್ಲಾಕ್‌ಶೆಡ್ ನಿವಾಸಿ ಯೋಗೇಶ್ (24) ಹಾಗೂ ಆತನ ಸ್ನೇಹಿತ ಕಿರಣ್ ಕುಮಾರ್ ಗುರುವಾರ ರಾತ್ರಿ ರೇಲ್ವೆ ನಿಲ್ದಾಣದಿಂದ ಹೀರೋ ಹೋಂಡಾ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಬಳ್ಳಾರಿಗೆ ಹೋಗುತ್ತಿದ್ದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಕಿರಣ್ ಕುಮಾರ್‌ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಆತನನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ತಿಥಿ ವೇಳೆಗೆ ಮೃತನಾದ: ಮೃತ ಯೋಗೀಶ್ ತಂದೆಯ ವಾರ್ಷಿಕ ತಿಥಿ ಶುಕ್ರವಾರ ನಡೆಯಬೇಕಿತ್ತು. ಇದಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದ ಆತ ತಿಥಿಗೆ ಆಗಮಿಸುವ ಬಂಧುಗಳನ್ನು ಕರೆತರುವ ಸಲುವಾಗಿ ರೇಲ್ವೆ ನಿಲ್ದಾಣಕ್ಕೆ ಹೋಗಿದ್ದ. ನೆಂಟರನ್ನು ಆಟೋದಲ್ಲಿ ಮನೆಗೆ ಕಳುಹಿಸಿ ತಾನು ಬೈಕ್‌ನಲ್ಲಿ ಸ್ನೇಹಿತನೊಂದಿಗೆ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ. ಆತನ ತಂದೆಯ ವಾರ್ಷಿಕ ತಿಥಿಗೆ ಆಗಮಿಸಿದ್ದ ಬಂಧು-ಬಳಗ ಮಗನ ಶವಯಾತ್ರೆಯಲ್ಲಿ ಪಾಲ್ಗೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಅಪಘಾತದ ಕುರಿತಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆ
ಗುರುವಾರ ರಾತ್ರಿ ಸಂಭವಿಸಿದ ಈ ಅಪಘಾತದ ಸ್ಥಳದಲ್ಲಿ ಸಾಮಾನ್ಯವಾಗಿ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಅದಕ್ಕೆ ಕಾರಣ ಈ ರಸ್ತೆಯಲ್ಲಿ ಹಂಪ್‌ಗಳನ್ನು ಹಾಕದಿರುವುದು. ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾರೂ ಕ್ರಮಕೈಗೊಂಡಿಲ್ಲ.
ಇನ್ನಾದರೂ ಈ ಸ್ಥಳದಲ್ಲಿ ಹಂಪ್ಸ್‌ಗಳನ್ನು ಹಾಕುವ ಮೂಲಕ ಅಪಘಾತಕ್ಕೆ ಪೂರ್ಣವಿರಾಮ ಹಾಕಬೇಕು ಎಂದು ಆಗ್ರಹಿಸಿ ಅಲ್ಲಿನ ಯುವಕರು, ನಾಗರಿಕರು ಶುಕ್ರವಾರ ಬೆಳಿಗ್ಗೆ ಕೆಲಕಾಲ ಆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.