ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಅತ್ಯಗತ್ಯ
ಭದ್ರಾವತಿ: ಬಾಲ್ಯವಿವಾಹ ಎಂಬುವುದು ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಯಲು ನಾಗರಿಕರಲ್ಲಿ ಸೂಕ್ತ ಮಾಹಿತಿ ಮೂಲಕ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಿರೀಶ್ ಕೆ. ಭಟ್ ಹೇಳಿದರು.
ಅಧಿಕಾರಿಗಳಿಗಾಗಿ ತಾಪಂ ಸಬಾಂಗಣದಲ್ಲಿ ಶುಕ್ರವಾರ ತಾಪಂ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಗ್ರಾಮೀಣ ಬಾಲ್ಯ ವಿವಾಹ ನಿಷೇಧ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಭದ್ರಾವತಿಯಂತಹ ಸ್ಥಳದಲ್ಲಿ ಸಹ ಬಾಲ್ಯವಿವಾಹ ಅಧಿಕ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಸಹ ನ್ಯಾಯಾಲಯದಲ್ಲಿ ಆ ಕುರಿತಂತೆ ಯಾವುದೇ ಪ್ರಕರಣಗಳು ದಾಖಲಾಗದಿರುವುದು ಇಲ್ಲಿನ ಜನರಲ್ಲಿ ಬಾಲ್ಯ ವಿವಾಹದ ಬಗ್ಗೆ ಇರುವ ಕಾನೂನಿನ ತಿಳುವಳಿಕೆಯ ಕೊರತೆ ಕಾರಣವೆಂದು ಭಾವಿಸಬಹುದಾಗಿದೆ ಎಂದರು.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಇದರ ಕುರಿತಂತೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪೊಲೀಸ್ ಇಲಾಖೆಯ ನೆರವಿನಿಂದ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು.
ಬಾಲ್ಯ ವಿವಾಹ ನಡೆಯುವುದು ಕಂಡುಬಂದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸುವ ಕರ್ತವ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ತಾಲೂಕು ಉಚಿತ ಕಾನೂನು ಸೇವಾ ಪ್ರಾಧಿಕಾರ ನಿಮಗೆ ಅಗತ್ಯವಾದ ನೆರವನ್ನು ನೀಡುತ್ತದೆ ಎಂದರು.
ಬಾಲ್ಯವಿವಾಹ ನಿಷೇಧ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜ್ಯೋತಿಶ್ರೀ, ಉಚಿತ ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ, ಹಿರಿಯ ನಾಗರೀಕರಿಗೆ, ಅಂಗವಿಕಲರಿಗೆ, ನೈಸರ್ಗಿಕ ವಿಕೋಪದಿಂದ ನೊಂದವರಿಗೆ ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವನ್ನು ನೀಡುತ್ತಿದೆ.
ಇದನ್ನು ಗ್ರಾಮೀಣ ಪ್ರದೇಶದ ಅಧಿಕಾರಿಗಳು ಜನರಿಗೆ ತಿಳುಸುವ ಮೂಲಕ ಅವರುಗಳು ಇದರ ಪ್ರಯೋಜನ ಪಡೆಯುವಂತೆ ಮಾಡಬೇಕು.
ವ್ಯಾಜ್ಯಪೂರ್ವದಲ್ಲಿ ಸಹ ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲೇರದಂತೆ ಮುಂಚಿತವಾಗಿಯೇ ಉಭಯ ಪಕ್ಷಗಾರರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ವ್ಯಾಜ್ಯವನ್ನು ಬಗೆಹರಿಸಿಕೊಂಡರೆ ಸಮಯ, ಹಣ ಎಲ್ಲವೂ ಉಳಿಯುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಅಧಿಕಾರಿ ಚಂದ್ರಪ್ಪ ಪ್ರಾಸ್ರಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ತಹಶೀಲ್ದಾರ್ ಸಿದ್ದಮಲ್ಲಪ್ಪ, ಡಿವೈಎಸ್ಪಿ ಸದಾನಂದ ಬಿ.ನಾಯಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಉಪಸ್ಥಿತರಿದ್ದರು. ಸಿಡಿಪಿಒ ಚಂದ್ರಪ್ಪ ಸ್ವಾಗತಿಸಿ, ಗಿರಿಜಾ ಸತ್ಯನಾರಾಯಣ ಪ್ರಾರ್ಥಿಸಿದರು.
ಕಾಳಿಂಗನಹಳ್ಳಿಯಲ್ಲಿ ಬಾಲ್ಯ ವಿವಾಹ ತಡೆ
ಶಿವಮೊಗ್ಗ: ಬಾಲ್ಯ ವಿವಾಹವೊಂದನ್ನು ಅಧಿಕಾರಿಗಳು ತಡೆದ ಪ್ರಸಂಗ ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಗಂಗಾ ಹಾಗೂ ಯೋಗೇಶ್ ನಡುವೆ ವಿವಾಹ ನಿಶ್ಚಯವಾಗಿತ್ತು. ಇಬ್ಬರೂ ಒಂದೇ ಕುಟುಂಬದವರಾಗಿದ್ದು, ಮದುವೆ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನೂ ಹಂಚಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿ ಕೇಂದ್ರದವರು ಗುರುವಾರ ಗ್ರಾಮಕ್ಕೆ ತೆರಳಿ ಮದುವೆ ಮಾಡದಂತೆ ಸೂಚನೆ ನೀಡಿದ್ದರಲ್ಲದೇ, ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದರು. ಆದರೆ, ಶುಕ್ರವಾರ ಪುನ- ಮದುವೆ ಕಾರ್ಯ ನಡೆಯುತ್ತಿದೆಯೆಂದು ಬಂದ ಮಾಹಿತಿ ಅನ್ವಯ ಅಧಿಕಾರಿಗಳು ಕಾಳೇನಹಳ್ಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ದೇವತಾ ಕಾರ್ಯ ನಡೆದಿದ್ದು, ಯಾವುದೇ ಮದುವೆ ನಡೆದಿಲ್ಲ ಎಂದು ಕುಟುಂಬ ವರ್ಗದವರು ಸ್ಪಷ್ಟಪಡಿಸಿ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

