ಶಿವಮೊಗ್ಗ

ಅಚ್ಚರಿ ಅಭ್ಯರ್ಥಿಗಾಗಿ ಕಾದಿದೆ ಜೆಡಿಎಸ್

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.2
ಲೋಕಸಭೆ ಚುನಾವಣೆ ಕೆಲವೇ ತಿಂಗಳು ಉಳಿದಿರುವಂತೆ ಜಾತ್ಯತೀತ ಜನತಾದಳವು ತಾಲೀಮು ಆರಂಭಿಸಿದ್ದು, ಇದಕ್ಕೆ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಪಕ್ಷದ ದಂಡನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶ ಸಾಕ್ಷಿಯಾಗಿತ್ತು.
ಒಳ್ಳೆ ಅಭ್ಯರ್ಥಿ ಕೊಡಿ, ಒಳ್ಳೆ ದುಡ್ಡು ಕೊಡಿ. ಗೆಲ್ಲಿಸುವುದು ಕಷ್ಟವೇ ಅಲ್ಲ ಎಂದು ನೇರವಾಗಿ ಹೇಳಿದ ಶಾಸಕ ಅಪ್ಪಾಜಿಗೌಡ, ಕುಮಾರಸ್ವಾಮಿ ಅವರು ಬಂದಾಗ ಎಲ್ಲರೂ ಬರ್ತಾರೆ. ಆಮೇಲೆ ಪಕ್ಷ ಸಂಘಟನೆ ಮಾಡೋಕೆ ಯಾರೂ ಇರೋಲ್ಲ. ಹೀಗಾದ್ರೆ ಪಕ್ಷ ನೂರು ವರ್ಷ ಆದರೂ ಬೆಳೆಯೋಲ್ಲ. ಗೆದ್ರೆ ನನ್ನಿಂದ ಸೋತ್ರೆ ಜೆಡಿಎಸ್ ಪಕ್ಷದಿಂದ ಅನ್ನೋ ಭಾವನೆ ಮೊದಲು ಇಲ್ಲವಾಗಬೇಕು ಎಂದರು.
ಇರೋ ನಾಲ್ಕು ಜನರಲ್ಲಿ ಇಬ್ಬಿಬ್ಬರು ಒಂದು ಗುಂಪು ಮಾಡಿಕೊಳ್ಳಬಾರದು. ಜತೆಗೆ ಇನ್ನೊಬ್ಬರನ್ನು ಸೇರಿಸಿಕೊಂಡು ಐದು ಜನರಾಗಬೇಕು. ಆಗ ಪಕ್ಷ ಬೆಳೆಯುತ್ತದೆ ಎಂದರು.
ಇನ್ನಷ್ಟು ಜವಾಬ್ದಾರಿ ಹೊರಬೇಕು: ಮಧು ಬಂಗಾರಪ್ಪ, ಚುನಾವಣೆ ಹತ್ತಿರ ಬರುತ್ತಿದ್ದು ಅಪ್ಪಾಜಿ ಗೌಡ ಹಾಗೂ ಶಾರದಾ ಪೂರ್ಯಾನಾಯ್ಕ್ ಅವರು ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ಜವಾಬ್ದಾರಿ ಹೊರಬೇಕು ಎಂದು ಸಲಹೆ ನೀಡಿದರು.
ಶಾರದಾ ಪೂರ್ಯಾನಾಯ್ಕ್, ಅಭ್ಯರ್ಥಿ ಗೆಲ್ಲಿಸುವುದಕ್ಕೆ ನಮ್ಮೆಲ್ಲಾ ಭಿನ್ನಾಭಿಪ್ರಾಯ ಮರೆತು ಶ್ರಮಿಸೋಣ ಎಂದರು. ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಾಗಿದ್ದ ಮದನ್, ಬಳಿಗಾರ್ ಹಾಗೂ ಎಂ. ಶ್ರೀಕಾಂತ್ ಅವರು ಈ ಬಾರಿ ಚುನಾವಣೆಯಲ್ಲಿ ಪಕ್ಷ ಗೆಲ್ಲಲೇಬೇಕೆಂದು ಒತ್ತಿ ಹೇಳಿದರು.
ಕೊನೆಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಅಭ್ಯರ್ಥಿ ಯಾರೇ ಆಗಿದ್ದರೂ ಗೆಲ್ಲಲು ಶ್ರಮಿಸಿ. ಈ ಹಿಂದೆ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ಹೆದರುವುದು ಬೇಡ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಮುಖಂಡರಾದ ಎಂ.ಬಿ. ಶಿವಣ್ಣ, ಕಡಿದಾಳ್ ಗೋಪಾಲ್, ಪವಿತ್ರಾ ರಾಮಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.