ಕೊಳೆ ರೋಗ: ವಿಶೇಷ ಪ್ಯಾಕೇಜ್ಗೆ ಸಿಎಂ ಚಿಂತನೆ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.5
ಅಡಕೆ ಕೊಳೆರೋಗ ಐದು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಶೇ.50ರಷ್ಟು ಬೆಳೆ ನಾಶವಾಗಿದೆ. ಆಗುಂಬೆ ಭಾಗದಲ್ಲಿ ಶೇ.80ರಿಂದ 90ರಷ್ಟು ಬೆಳೆ ಹಾಳಾಗಿದೆ. ಅಡಕೆ ಬೆಳೆಗಾರರಿಗೆ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತೀರ್ಥಹಳ್ಳಿ ತಾಲೂಕಿನ ಕೊಳೆರೋಗಪೀಡಿತ ಅಡಕೆ ತೋಟಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ದಿನ ಸತತ ಮಳೆ ಸುರಿದ ಕಾರಣ ಅಡಕೆ ಬೆಳೆಗೆ ಹಾನಿಯಾಗಿದೆ.
ಮರಗಳೂ ಸಹ ಸಾಯುವ ಹಂತ ತಲುಪಿವೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಒಂದು ಹೆಕ್ಟೇರ್ಗೆ 12 ಸಾವಿರ ನೀಡುತ್ತಿದ್ದು, ಇದು ಸಾಲುತ್ತಿಲ್ಲ. ಅಡಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಸದ್ಯವೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. ಮಲೆನಾಡು ಹಾಗೂ ಕರಾವಳಿಯ ಐದು ಜಿಲ್ಲೆಗಳಲ್ಲಿ ಅಡಕೆ ನಾಶದಿಂದ ಆಗಿರುವ ಹಾನಿ 789 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಸಹ ಮನವಿ ಮಾಡಲಾಗುವುದು ಎಂದರು.
ಅಡಕೆ ಹಾನಿಯ ಬಗ್ಗೆ ವಿವಿಧ ಸಂಸ್ಥೆಗಳು, ಕೃಷಿಕ ಸಮಾಜದವರು ಮನವಿ ಸಲ್ಲಿಸಿದ್ದಾರೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಡಕೆಗೆ ಪರ್ಯಾಯ ಬೆಳೆ ಸಾಧ್ಯತೆ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ಅವರು ಫ್ಲೋರೈಡ್ ಹಾಗೂ ಆರ್ಸೆನಿಕ್ ಸಮಸ್ಯೆ ಇರುವ ರಾಜ್ಯದ ಒಂದು ಸಾವಿರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು. ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, ಇರುವ ನಾಲ್ಕು ಸ್ಥಾನಗಳನ್ನು ತುಂಬಲು ಅವಸರವೇನಿಲ್ಲ ಎಂದರು.
ಪಶುವೈದ್ಯ ಕಾಲೇಜಿಗೆ ಸೌಲಭ್ಯ: ಮುಖ್ಯಮಂತ್ರಿ
ಶಿವಮೊಗ್ಗ: ಪಶುವೈದ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ಎದುರಾಗಿರುವ ಸಮಸ್ಯೆ ಸರ್ಕಾರದ ಗಮನದಲ್ಲಿದ್ದು, ಈ ಕೂಡಲೇ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಲೇಜು ಆರಂಭವಾಗಿ ಏಳು ವರ್ಷವಾದರೂ ಮೂಲ ಸೌಕರ್ಯ ಕಲ್ಪಿಸದೇ ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆ ದೊರೆಯದಂತೆ ಮಾಡಿರುವ ಪಶುವೈದ್ಯ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಶಿವಮೊಗ್ಗ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದ ಬೆನ್ನ ಹಿಂದೆಯೇ ಮುಖ್ಯಮಂತ್ರಿಯವರು ಈ ಹೇಳಿಕೆ ನೀಡಿದ್ದಾರೆ.
ಬುಧವಾರ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶುವೈದ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಸಮಸ್ಯೆ ಕುರಿತು ತಾವು ಕೇಂದ್ರ ಸಚಿವ ಶರತ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ. ಅದೇ ರೀತಿ ಕೃಷಿ ಸಚಿವ ಜಯಚಂದ್ರ ಅವರು ಎರಡು ಬಾರಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು. ರಾಜ್ಯದ ಅನೇಕ ಕಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ, ಕೆಲವು ಕಡೆ ಮಳೆಯಾಗಿಲ್ಲ. ಆದರೂ ಸಂತೋಷದ ವಿಚಾರವೆಂದರೆ ರಾಜ್ಯದ ಬಹುತೇಕ ಎಲ್ಲಾ ಜಲಾಶಯ ತುಂಬಿದೆ. ಜಿಲ್ಲೆಯ ಶರಾವತಿ ನದಿ ಜಲಾಶಯ ತುಂಬಿದ್ದರಿಂದಾಗಿ ಕೊಂಚ ಮಟ್ಟಿನ ವಿದ್ಯುತ್ ಸಮಸ್ಯೆ ತಗ್ಗಲಿದೆ. ಇದು ಸಮಾಧಾನದ ಸಂಗತಿ ಎಂದು ಹೇಳಿದರು. ನಿರೀಕ್ಷೆಗಿಂತ ಹೆಚ್ಚಿನ ಮಳೆ ಬಿದ್ದಿರುವ ಪರಿಣಾಮ ಅವಘಡ ಸಂಭವಿಸಿದೆ. ಮಳೆಯಿಂದ ಹಾಳಾಗಿರುವ ರಸ್ತೆ, ಸೇತುವೆ ದುರಸ್ತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಅಡಕೆ ರೈತರ ಕಷ್ಟ ಕಂಡ ಸಿಎಂ
ತೀರ್ಥಹಳ್ಳಿ: ಗುರುವಾರ ಮಧ್ಯಾಹ್ನ 3 ಗಂಟೆಗೆ ಆಗುಂಬೆ ಸಮೀಪದ ಹೊಸೂರು ತಲಗೇರಿಯ ರೈತ ಗೋಪಾಲಕೃಷ್ಣ ಭಟ್ಟರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದಾಗ ಮಲೆನಾಡಿನ ಸಾಂಪ್ರದಾಯಿಕವಾದ ಆತ್ಮೀಯ ಸ್ವಾಗತ ದೊರೆಯಿತು.
ತಲಗೇರಿಯ ಅಡಕೆ ಕೋಗಿನಲ್ಲಿರುವ ಸುಮಾರು 30 ಎಕರೆ ಅಡಕೆ ತೋಟದಲ್ಲಿ ಶೇ.70ರಷ್ಟು ಅಡಕೆ ಫಸಲು ಅತಿವೃಷ್ಟಿಯಿಂದಾಗಿ ಕೊಳೆರೋಗ ಬಂದು ಉದುರಿ ಹೋಗಿತ್ತು.
ಇದರ ಜೊತೆಗೆ ಮಂಗಗಳ ಕಾಟ ಬೇರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನೆಯ ಮುಂದಿರುವ ಅಡಕೆ ತೋಟದೊಳಗೆ ಹೆಜ್ಜೆಯಿಡುತ್ತಿದ್ದಂತೆ, ಅಧಿಕಾರಿಗಳ ದಂಡು ಅವರನ್ನೇ ಹಿಂಬಾಲಿಸಿ, ಕೊಳೆರೋಗ, ಅಡಕೆ ತೋಟಗಳ ಬಗ್ಗೆ ಮಾಹಿತಿ ನೀಡಿದರು. ಆಗುಂಬೆಯ ಈ ಭಾಗದಲ್ಲಿ ಮಾತ್ರವಲ್ಲದೆ ಇಡೀ ಅಡಕೆ ಬೆಳೆಯುವ ಮಲೆನಾಡಿನ ಎಲ್ಲ ಪ್ರದೇಶಗಳಲ್ಲೂ ಇದೇ ರೀತಿಯ ಅನಾಹುತವಾಗಿರುವುದಾಗಿ ಮನದಟ್ಟು ಮಾಡಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆಯಲ್ಲಿದ್ದು, ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಸಾಂಕೇತಿಕವಾಗಿ ಐದು ಅಡಿಕೆ ಬೆಳೆಗಾರರಿಗೆ ಪರಿಹಾರದ ಚೆಕ್ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿತರಿಸಿದರು. ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ಸೂತ್ರವನ್ನು ಆದಷ್ಟು ಬೇಗ ಪ್ರಕಟಿಸುವುದಾಗಿ ಹೇಳಿದರು.
ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್ ಮಲೆನಾಡಿನ ಪ್ರದೇಶಗಳಿಗೆ ಪ್ಯಾಕೇಜ್ ಪರಿಹಾರ ನೀಡುವ ಸಮಯದಲ್ಲಿ ಹೆಚ್ಚು ಮಳ ೆಬೀಳುವ ಪ್ರದೇಶಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಂತಹ ಪ್ರಾಧಿಕಾರ ರಚನೆಯ ಹೊರತಾಗಿರಬೇಕು ಎಂಬ ಮನವಿ ನೀಡಿದರು. ಆಗುಂಬೆ ಭಾಗದ ಜಿಪಂ, ತಾಪಂ, ಗ್ರಾಪಂಗಳ ಪ್ರತಿನಿಧಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

