ಶಿಕ್ಷಕರ ಪಾದಪೂಜೆ ಮಾಡಿದ ಮಕ್ಕಳು
ಸಾಗರ: ಇಲ್ಲಿನ ವನಶ್ರೀ ವಸತಿ ವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಶಿಕ್ಷಕರ ಪಾದಪೂಜೆ ಮಾಡಿ, ಆರತಿ ಬೆಳಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಾಜಕುಮಾರ್ಜೈನ್ ಮಾತನಾಡಿ, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಗುರುಗಳ ಬಗ್ಗೆ ಭಯ, ಭಕ್ತಿ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಗುರುವಿನ ಸ್ಥಾನ ದೊಡ್ಡದು. ಹಿಂದೆ ಗುರು, ಮುಂದೆ ಗುರಿ ಇದ್ದರೆ ಭವಿಷ್ಯ ಉಜ್ವಲವಾಗುತ್ತದೆ. ಇಂತಹ ಗುರುಗಳನ್ನು ಗೌರವಿಸಲು ಈ ದಿನಾಚರಣೆ ಸಾಂಕೇತಿಕ. ಇದು ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಆದರ್ಶ ವಿದ್ಯಾರ್ಥಿಗಳಾದವರು ತಮ್ಮ ಜೀವಿತದ ಕೊನೆಯವರೆಗೂ ಶಿಕ್ಷಕರನ್ನು ಮರೆಯಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವನಶ್ರೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಪಿ. ಮಂಜಪ್ಪ, ಸಂಸ್ಕಾರವಂತ ಮಗು ಈ ದೇಶದ ಆಸ್ತಿ. ಮಗುವು ಸಂಸ್ಕಾರವಂತವಾಗುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಸರ್ಕಾರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದೆ. ಮಕ್ಕಳು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸತ್ಪ್ರಜೆಗಳಾಗಿ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಚಂದ್ರಕಲಾ ಆರ್. ಜೈನ್, ಮುಖ್ಯ ಶಿಕ್ಷಕ ದುರ್ಗಾನಾಯಕ್, ಶಿಕ್ಷಕರಾದ ಜ್ಯೋತಿ, ಭಾರ್ಗವಿ, ಓಂಕಾರಪ್ಪ ಹಾಜರಿದ್ದರು.
40 ಶಿಕ್ಷಕರಿಗೆ ಸನ್ಮಾನ
ಶಿವಮೊಗ್ಗ: ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳಾದ ಡಾ. ಅಂಬೇಡ್ಕರ್ ಕಾಲೇಜು, ಶ್ರೀ ವಿನಾಯಕ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು, ಶ್ರೀ ವಿನಾಯಕ ಐಟಿಐ ಕಾಲೇಜು ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ 40 ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ವೈ. ಗೋಪಾಲಕೃಷ್ಣ ಗುಪ್ತ, ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಬೇಕು. ಆಗ ವಿದ್ಯೆ ತಂತಾನೆ ಲಭಿಸುತ್ತದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದರಿಂದ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದರು. ಕ್ಲಬ್ನ ಕಾರ್ಯದರ್ಶಿ ವೀರಣ್ಣ ಎ ಹುಗ್ಗಿ, ಎಲ್ಐಸಿ ಡೆವಲಪ್ಮೆಂಟ್ ಆಫೀಸರ್ ನಿಥಿನ್, ಸಂಸ್ಥೆಯ ಅಧ್ಯಕ್ಷರಾದ ಶಾಂತವೀರ ನಾಯ್ಕ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ತೊಗರ್ಸಿಯಲ್ಲಿ ಪೂರ್ಣಕುಂಭೋತ್ಸವ
ಶಿರಾಳಕೊಪ್ಪ: ಐತಿಹಾಸಿಕ ಕ್ಷೇತ್ರ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿಗೆ ಶ್ರಾವಣ ಮಾಸದ ಮಕ್ತಾಯದ ಅಂಗವಾಗಿ ಪೂರ್ಣಕುಂಬೋತ್ಸವ ಹಾಗು ಸ್ವಾಮಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಗುರುವಾರ ಬೆಳಗ್ಗೆ 10 ಗಂಟೆಗೆ ಕವಲಿ ಗ್ರಾಮದಿಂದ ಪ್ರಾರಂಭವಾದ ಕುಂಭೋತ್ಸವವನ್ನು ತೊಗರ್ಸಿ ಮಹಂತ ದೇಶೀಕೇಂದ್ರ ಸ್ವಾಮಿಗಳು ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮಹಂತದೇಶೀ ಕೇಂದ್ರಸ್ವಾಮಿಗಳು, ಚೆನ್ನವೀರ ದೇಶಿ ಕೇಂದ್ರ ಸ್ವಾಮಿಗಳು, ಎಪಿಎಂಸಿ ಅಧ್ಯಕ್ಷ ಸಣ್ಣ ಹನುಮಂತಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ. ರೇವಣಪ್ಪ, ತಾಪಂ ಮಾಜಿ ಸದಸ್ಯ ಕವಲಿ ಸುಬ್ರಮಣ್ಯ, ಪರಮೇಶ್ವರಪ್ಪ ಹಾಗೂ ಇತರರು ಹಾಗು ಸಾವಿರಾರು ಭಕ್ತರು ಭಾಗವಹಿಸಿ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಚಿಂದೋಡಿ ಲೀಲಾ ದಿಟ್ಟ ಹೋರಾಟಗಾರ್ತಿ
ಕಲಾಕ್ಷೇತ್ರದಲ್ಲಿ ಹಿರಿಯ ಕಲಾವಿದೆಯ 4ನೇ ವರ್ಷದ ಸ್ಮರಣೋತ್ಸವದಲ್ಲಿ ಮಲ್ಲೇಶ
ದಾವಣಗೆರೆ: ಅನ್ಯ ಭಾಷಿಕರ ಉಪಟಳ ಹೆಚ್ಚಾಗಿದ್ದ ಬೆಳಗಾವಿಯಲ್ಲಿ ಕನ್ನಡ ನಾಟಕಗಳನ್ನು ನಿರಂತರ ಪ್ರದರ್ಶಿಸಿದ ಪದ್ಮಶ್ರೀ ದಿವಂಗತ ಚಿಂದೋಡಿ ಲೀಲಾ ಕೇವಲ ಕಲಾವಿದೆ ಮಾತ್ರವಲ್ಲ, ದಿಟ್ಟ ಹೋರಾಟಗಾರ್ತಿಯಾಗಿದ್ದಾರೆ ಎಂದು ಹಿರಿಯ ಪತ್ರಕರ್ಕ ಬಿ.ಎನ್. ಮಲ್ಲೇಶ ಹೇಳಿದರು.
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ ದಿವಂಗತ ಚಿಂದೋಡಿ ಲೀಲಾರ 4ನೇ ವರ್ಷದ ಸ್ಮರಣೋತ್ಸವ, ಕೆಬಿಆರ್ ಡ್ರಾಮಾ ಕಂಪನಿಯ 85ನೇ ವಾರ್ಷಿಕೋತ್ಸವ, ಕನ್ನಡ ರಂಗವೈಭವ ಪಾಕ್ಷಿಕತ ವಾರ್ಷಿಕೋತ್ಸವ, ಶ್ರಾವಣ ಮಾಸದ ಬಸವ ಭಾರತ ಪ್ರವಚನ ಸಮಾರೋಪದಲ್ಲಿ ಮಾತನಾಡಿದ ಅವರು, ದಿವಂಗತ ಚಿಂದೋಡಿ ಲೀಲಾ ಕೇವಲ ಕಲಾವಿದೆ ಮಾತ್ರವಲ್ಲ, ಈ ನಾಡಿನ ದಿಟ್ಟಿ ಹೋರಾಟಗಾರ್ತಿಯಾಗಿಯೂ ಸಾಧನೆ ಮಾಡಿದ್ದಾರೆ ಎಂದರು.
ರಂಗಭೂಮಿಗೆ ದಿವಂಗತ ಚಿಂದೋಡಿ ಲೀಲಾರ ಕೊಡುಗೆ ಅನನ್ಯವಾದುದು. ಕನ್ನಡ ಮತ್ತು ರಂಗ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಲೀಲಾರ ಕಳಕಳಿ ಅನುಕರಣೀಯವಾದುದು. ಅನ್ಯ ಭಾಷಿಕರ ನಿರಂತರ ಹಾವಳಿ, ಉಪಟಳದ ಮಧ್ಯೆಯೂ ಕನ್ನಡ ನಾಡಗಳನ್ನು ಬೆಳಗಾವಿಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದ್ದೇ ಅಲ್ಲದೇ, ಬೆಳಗಾವಿ ಪಾಲಿಕೆ ಚುನಾವಣೆಯಲ್ಲೂ ಜಯಶಾಲಿಯಾಗಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ರಂಗ ಚಳವಳಿ ಕಟ್ಟಿದ ಮಹಿಳೆ: ಗಡಿನಾಡಿನಲ್ಲಿ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ ಚಿಂದೋಡಿ ಲೀಲಾರವರು ಮಾಡಿದ ಸಾಧನೆಯನ್ನು ಮರೆಯುವಂತಿಲ್ಲ. ಸದಾ ಸಂಕಷ್ಟದ ಹಾದಿಯಲ್ಲೇ ಸಾಗಿದರೂ ರಂಗ ಚಳವಳಿಯನ್ನು ಯಶಸ್ವಿಯಾಗಿ ಕಟ್ಟಿ ಬೆಳೆಸಿದ ಸಾಧನೆ ಮಾಡಿದ್ದಾರೆ. ರಂಗ ಚಳವಳಿಯನ್ನು ನಿರಂತವರ ಮುಂದುವರಿಸಿಕೊಂಡು ಹೋಗುವುದೇ ನಾವು ಇಂದು ಅಂತಹ ಮಹಾನ್ ಕಲಾವಿದೆಗೆ ಸಲ್ಲಿಸುವ ಸಾರ್ಥಕವಾದ ಗೌರವವಾಗಿರುತ್ತದೆ ಎಂದು ಅವರು ಹೇಳಿದರು.
ನಿರಾಶಾದಾಯಕ ಮನಸ್ಥಿತಿ: ಉತ್ತಮ ನಾಟಕಗಳು ಪ್ರದರ್ಶನಗೊಂಡರೆ ಇಂದಿಗೂ ಪ್ರೋತ್ಸಾಹ ಸಿಗುತ್ತದೆ. ರಂಗಭೂಮಿಯ ಬಗ್ಗೆ ನಿರಾಶಾದಾಯಕ ಮನಸ್ಥಿತಿಯನ್ನು ರಂಗಭೂಮಿಯವರು ಕೈಬಿಡಬೇಕು. ಹಳ್ಳಿ ನಾಟಕದ ಪ್ರತಿಭೆಯನ್ನ ಉತ್ತೇಜಿಸುವ ಮೂಲಕ ನಾಟಕ ಕಲೆಯನ್ನು ಉಳಿಸಿ, ಬೆಳೆಸಬೇಕು. ರಂಗ ಚಳವಳಿಗೆ ಒಳ್ಳೆಯ ಭವಿಷ್ಯವಿದ್ದು, ಈ ಬಗ್ಗೆ ಆತಂಕಗೊಳ್ಳುವ, ನಿರಾಶರಾಗಬೇಕಾಗಿಲ್ಲ ಎಂದು ಮಲ್ಲೇಶ ಅಭಿಪ್ರಾಯಪಟ್ಟರು.
ಪರಿವರ್ತನೆ ತನ್ನಿ: ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಸವಾದಿ ಶರಣರ ವಿಚಾರಗಳಲ್ಲಿ ಕೆಲವನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಹಾದಿಯಲ್ಲಿ ಸಾಗುವ ಮೂಲಕ ಪರಿವರ್ತನೆ ತರಬೇಕು ಎಂದರು.
ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಸಾಧನೆಯನ್ನು ದಿವಂಗತ ಚಿಂದೋಡಿ ಲೀಲಾ ಮಾಡಿದ್ದಾರೆ. ಈ ಹಿರಿಯ ಕಲಾವಿದೆ ಭೌತಿಕವಾಗಿ ಅಗಲಿದ್ದರೂ, ರಂಗಭೂಮಿಗೆ ನೀಡಿದ ಕೊಡುಗೆ ಮಾತ್ರ ಶಾಶ್ವತವಾಗಿರುತ್ತದೆ. ಒಬ್ಬ ಕಲಾವಿದೆಯಷ್ಟೇ ಅಲ್ಲ, ಕನ್ನಡ ಪರ ಹೋರಾಟಗಾರ್ತಿಯಾಗಿದ್ದರು ಎಂದರು.
ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆ.ಬಿ.ಆರ್. ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಎಲ್. ಚಂದ್ರಧರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ, ಚಿಂದೋಡಿ ಬಂಗಾರೇಶ, ಚಿಂದೋಡಿ ರಾಜಶೇಖರ ಇದ್ದರು. ಶಿಕಾರಿಪುರದ ಬಸವಾ ಶ್ರಮದ ಮಾತೆ ಶರಣಾಂಬಿಕೆ, ಬಸವರಾಜ ಐರಣಿ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

