ಶಿಕ್ಷಕರಿಗೂ ಬಿಇಒ ಆಗುವ ಅವಕಾಶ: ಕಿಮ್ಮನೆ
ಕ.ಪ್ರ.ವಾರ್ತೆ ತೀರ್ಥಹಳ್ಳಿ ಸೆ. 11
ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೂ ಬಿ.ಇ.ಒ. ಆಗುವ ಅವಕಾಶ ಕಲ್ಪಿಸಿಕೊಡುವಂತಹ ಹೊಸ ಆಯಾಮವನ್ನು ತರುವ, ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರುವ ಯೋಚನೆ ಇದೆ ಎಂದು ರಾಜ್ಯ ಪ್ರಾಥಮಿಕ ಮತ್ತೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿಕ್ಷಕರ ದಿನಾಚರಣೆ ಸಮಿತಿ ಹಮ್ಮಿಕೊಂಡಿದ್ದ ಡಾ.ಎಸ್.ರಾಧಾಕೃಷ್ಣನ್ ಜನ್ಮದಿನಾಚರಣೆ- ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಬಗೆಹರಿಸುವ ಸಾಧ್ಯತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು. ಅವರ ಸಂಕಷ್ಟಗಳಿಗೆ ಸ್ಪಂದಿಸಿ ಎಷ್ಟು ಒಳ್ಳೆಯದು ಮಾಡುವುದಕ್ಕೆ ಸಾಧ್ಯವೋ ಅಷ್ಟೂ ಮಾಡುತ್ತೇನೆ ಎಂದು ಹೇಳಿದರು.
ಬೋಧಿಸುವುದನ್ನೇ ಮರೆತಿದ್ದಾರೆ: ಅಧ್ಯಯನ ಕೊರತೆ ಎದ್ದು ಕಾಣುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಕರು ಪಾಠ ಮಾಡುವುದನ್ನೇ ಮರೆತಿದ್ದಾರೆ. ಪಾಠ ಮಾಡುವ ಹವ್ಯಾಸವನ್ನು ಶಿಕ್ಷಕರಿಗೆ ಕಲಿಸಬೇಕಾದ ಸ್ಥಿತಿ ಈಗಿದೆ ಎಂದು ಹೇಳಿದರು.
ಶಾಲೆ ಒಂದು ದೇವಾಲಯ, ಪ್ರಾರ್ಥನಾ ಮಂದಿರವಿದ್ದ ಹಾಗೆ. ಒಳ್ಳೆಯದನ್ನೇ ಕೊಡು ಎಂದು ಬೇಡುವ ಪವಿತ್ರ ಸ್ಥಳ. ಶೇ.80ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲೆ ವ್ಯಾಸಂಗಮಾಡುತ್ತಿದ್ದಾರೆ. ಒಂದನೇ ತರಗತಿಯಿಂದ ಪಿ.ಯು.ಸಿ.ವರೆಗಿನ ಶಾಲೆಗಳಲ್ಲಿ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಬರುತ್ತಿದ್ದು, ಕಾಲಿಗೆ ಚಪ್ಪಲಿ ಹಾಕಿಕೊಳ್ಳುವ ಆರ್ಥಿಕ ಸೌಲಭ್ಯದಿಂದ ಕೂಡ ವಂಚಿತರಾದವರಿದ್ದಾರೆ. ಈ ಎಲ್ಲ ನಿಟ್ಟಿನಲ್ಲೂ ವ್ಯವಸ್ಥೆಯನ್ನು ಸರಿಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ಸಚಿವರು ತಿಳಿಸಿದರು.
ಮೊದಲನೇ ಸ್ಥಾನಕ್ಕೆ ಬರಬೇಕು: ಪ್ರಸ್ತುತ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಥಾನ ಉತ್ತಮವಾಗಿಲ್ಲ. ಇನ್ನೂ ಸುಧಾರಿಸಬೇಕು. ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.100ರ ಉತ್ತಮ ಪ್ರಗತಿ ತೋರುವ ಶಾಲೆಗಳ ಪ್ರಗತಿಗಾಗಿ ಪ್ರತಿವರ್ಷ ಒಂದು ಲಕ್ಷ ರು. ನೀಡುವ ನಿರ್ಧಾರ ಮಾಡಿದ್ದೇನೆ ಎಂದು ಸಚಿವರು ಹೇಳಿದರು.
ಎಲ್ಲ ಸರ್ಕಾರಿ ಶಾಲೆಗಳಿಗೂ ಪೂರಕ ವಾತಾವರಣ, ಮೂಲಭೂತ ಸೌಕರ್ಯ ಒದಗಿಸುವ ಅಗತ್ಯವಿದೆ, ಹಣದ ಕೊರತೆಯಿದ್ದು, ಇದಕ್ಕಾಗಿ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದೆ. ಬಡ ಮಕ್ಕಳಿಗೆ ಶಿಕ್ಷಣ ವಂಚಿತವಾಗಬಾರದು. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಶಿಕ್ಷಣದ ಆಂದೋಲನ ಮಾಡುವ ಯೋಚನೆ ಇದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಗರದ ಡಾ. ಸಫ್ರಾಜ್ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ. ಆರ್.ಕೃಷ್ಣಮೂರ್ತಿ ಸ್ವಾಗತಿಸಿದರು. ಕಾರ್ಯನಿರ್ವಣಾಧಿಕಾರಿ ಪುಟ್ಟಸ್ವಾಮಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಜಿಲ್ಲಾ ಶಿಕ್ಷಣಾಧಿಕಾರಿ ಕುಮಾರ್, ತಹಶೀಲ್ದಾರ್ ಗಣೇಶಮೂರ್ತಿ, ಜಿ.ಪಂ. ಹಾಗೂ ತಾ.ಪಂ. ಚುನಾಯಿತ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ರಾಜೇಂದ್ರ ಬುರಡಿಕಟ್ಟಿ, ರಾಜ್ಯ ಮಟ್ಟದ ಪ್ರಾಂಶುಪಾಲ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರಸ್ವಾಮಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಂಜುನಾಥ್, ಮತ್ತಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

