ಸಮುದಾಯ ಭವನ ನಿರ್ಮಿಸಲು ರು. 5 ಲಕ್ಷ ಅನುದಾನ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.14
ವಾಹನ ಚಾಲಕರ ಹಿತರಕ್ಷಣಾ ವೇದಿಕೆಯಿಂದ ಸಮುದಾಯ ಭವನ ನಿರ್ಮಿಸುವುದಾದರೆ 5 ಲಕ್ಷ ರುಪಾಯಿ ಅನುದಾನ ನೀಡುವುದಾಗಿ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಭರವಸೆ ನೀಡಿದರು.
ವಾಹನ ಚಾಲಕರ ಹಿತರಕ್ಷಣಾ ವೇದಿಕೆ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಡಿಗೆ ವಾಹನ ಚಾಲಕರು ಕಡ್ಡಾಯವಾಗಿ 8ನೇ ತರಗತಿ ತೇರ್ಗಡೆಯಾಗಬೇಕು ಎಂಬ ಕಾನೂನನ್ನು ಜಾರಿಗೆ ತರಲಾಗಿದೆ. ಆದರೆ, ಸ್ವಂತ ವಾಹನ ಚಾಲನೆಗೆ ಈ ಕಾನೂನು ಅನ್ವಯವಾಗುವುದಿಲ್ಲ. ಯಾಕೆ ಶ್ರೀಮಂತರ ಮಕ್ಕಳು ಡಿಕ್ಕಿ ಹೊಡೆದರೆ ಜನರು ಸಾಯುವುದಿಲ್ಲವೇ ಎಂದುವ್ಯಂಗವಾಡಿದರು.
ದೇಶ ನಡೆಸಲು ಓದಬೇಕಿಲ್ಲ: ಚಾಲನೆ ಮಾಡುವವರು ಓದಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಶ್ರೀಮಂತರ ಮಕ್ಕಳು ಓದದಿದ್ದರೂ ಚಾಲನಾ ಪರವಾನಿಗೆಯನ್ನು ಸಂಚಾರಿ ಅಧಿಕಾರಿಗಳು ನೀಡುತ್ತಾರೆ ಎಂದು ಆರೋಪಿಸಿದ ಅವರು, ಶಾಸಕರು, ಸಂಸದರು ಓದದಿದ್ದರೂ ಚುನಾಯಿತರಾಗಬಹುದು. ದೇಶ ನಡೆಸಲು ಓದಬೇಕಿಲ್ಲ. ಹೆಬ್ಬೆಟ್ಟು ಮಂದಿ ಕೂಡ ಎಂಎಲ್ಎ, ಎಂ.ಪಿ ಆಗಬಹುದು. ಆದರೆ, ಆಟೋ ಚಾಲನೆ ಪರವಾನಿಗೆ ಪಡೆಯಲು ಮಾತ್ರ 8ನೇ ತರಗತಿ ಪಾಸ್ ಮಾಡಬೇಕು. ಈ ಮೂಲಕ ಆಟೋ ಚಾಲಕರು ಚುನಾಯಿತ ಪ್ರತಿನಿಧಿಗಳಿಗಿಂತ ವಿದ್ಯಾವಂತರು ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ದುಶ್ಚಟಗಳಿಂದ ದೂರ ಉಳಿದು ಶಿಕ್ಷಿತರಾಗುವ ಮೂಲಕ ಜೀವನದಲ್ಲಿ ಪರಿವರ್ತನೆಯಾಗುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕೆಂದು ಆಟೋ ಚಾಲಕರಿಗೆ ಕರೆ ನೀಡಿದರು.
ಪಾಸ್ ಮಾಡಿ: ಕಾನೂನಿನಂತೆ ಆಟೋ ಚಾಲಕರು ಚಾಲನಾ ಪರವಾನಿಗೆ ಪಡೆಯಲು ಕಡ್ಡಾಯವಾಗಿ 8 ಅಥವಾ 10ನೇ ತರಗತಿ ತೇರ್ಗಡೆಯಾಗಬೇಕೆಂಬ ಹಿನ್ನಲೆಯಲ್ಲಿ ನಗರದ ಬಹುತೇಕ ಆಟೋ ಚಾಲಕರು ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಂಡಿರುವುದು ಹೆಮ್ಮೆಯ ವಿಚಾರ. ಕೇವಲ ಪರೀಕ್ಷೆ ತೆಗೆದುಕೊಂಡರೆ ಸಾಲದು. ಅದರಲ್ಲಿ ತೇರ್ಗಡೆಯಾಗುವ ಮೂಲಕ ಚಾಲನಾ ಪರವಾನಿಗೆ ಪಡೆಯುತ್ತೇವೆ. ಆ ಮೂಲಕ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳುತ್ತೇವೆ ಎಂಬ ಆಶ್ವಾಸನೆ ನೀಡಬೇಕು ಎಂದರು.
ಚಾಲಕರುಗಳು ಕಾನೂನು ಬದ್ದವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ಕಾನೂನು ಮೀರಿ ಅಧಿಕಾರಿಗಳು ತೊಂದರೆ ನೀಡಿದರೆ. ಸಂಘಟನೆ ಮೂಲಕ ಹೋರಾಟ ನಡೆಸಬೇಕೆಂದು ಎಂದ ಅವರು, ಸಮುದಾಯ ಭವನ ನಿರ್ಮಾಣಕ್ಕೆ 15 ಸಾವಿರ ರುಪಾಯಿ ಚೆಕ್ ನೀಡುತ್ತೇನೆ ಎಂದರು
ಸಂಘದ ಬೇಡಿಕೆಗಳು: ಸಂಘದ ಅಧ್ಯಕ್ಷ ಡಿ. ರಾಜಶೇಖರ್ ಮಾತನಾಡಿ, ಸಂಘದ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮುಂದಿಟ್ಟರು. ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಕಟ್ಟಿರುವ ವಾಹನ ಚಾಲಕರಿಗೆ ನುರಿತ ಶಿಕ್ಷಕರಿಂದ ಪಾಠ ಪ್ರವಚನವನ್ನು ಸರ್ಕಾರದಿಂದ ನೀಡಲು ವ್ಯವಸ್ಥೆ ಮಾಡಬೇಕು. ನಗರದಲ್ಲಿರುವ ನಿವೇಶನ ರಹಿತ ವಾಹನ ಚಾಲಕರಿಗೆ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ನೀಡಬೇಕು. ನಗರದಲ್ಲಿರುವ ವಾಹನ ಚಾಲಕರಿಗೆ 1 ಲಕ್ಷ ರುಪಾಯಿಗಳವರೆಗೆ ಸರ್ಕಾರದಿಂದ ಜೀವ ವಿಮೆ ಮಾಡಿಸಬೇಕು.
ನಗರಸಭೆಯಿಂದ ಎಲ್ಲಾ ಆಟೋಗಳಿಗೆ ಉಚಿತವಾಗಿ ಡಿಜಿಟಲ್ ಆಟೋ ಮೀಟರ್ ಅಳವಡಿಸಿಕೊಡಬೇಕು. ಎಲ್ಲಾ ತರಹದ ಬಾಡಿಗೆ ಆಟೋಗಳಿಗೆ ಪ್ರತ್ಯೇಕ ವಾಹನ ನಿಲ್ದಾಣವನ್ನು ಗುರುತಿಸಿಕೊಡಬೇಕು. ವಾಹನ ಚಾಲಕರ ಹಿತರಕ್ಷಣಾ ವೇದಿಕೆಗೆ ಒಂದು ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಡಬೇಕು ಎಂದು ಸರ್ಕಾರವನ್ನು ಜನಪ್ರತಿನಿಧಿಗಳ ಮೂಲಕ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಖುರ್ಷೀದಾ ಬಾನು, ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಡಿಡಿಪಿಐ ಕುಮಾರ್ ಹಾಗೂ ನೂರಾರು ಆಟೋ ಚಾಲಕರು ಉಪಸ್ಥಿರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

