ಶಿವಮೊಗ್ಗ

ಹೊಸ ಮತದಾರರ ಕೈಯಲ್ಲಿ ಫಲಿತಾಂಶದ ಕೀಲಿ ಕೈ

Published On :

ಶಿವಮೊಗ್ಗ:  ಶಿವಮೊಗ್ಗ ಕ್ಷೇತ್ರದ ಪರಿಷ್ಕೃತ ಮತದಾರರ ಪಟ್ಟಿ ಹೊರಬಿದ್ದಿದೆ. ಅದನ್ನು ಬೆನ್ನಿಗೆ ಕಟ್ಟಿಕೊಂಡು ಸುತ್ತಾಟ ಆರಂಭಿಸಿರುವ ರಾಜಕೀಯ ಪಕ್ಷಗಳು, ಹೊಸ ಮತದಾರರ ಓಲೈಕೆಗೆ ಇನ್ನಿಲ್ಲದ ಪ್ರಯತ್ನ ಆರಂಭಿಸಿವೆ.
ಹೊಸ ಮತದಾರರ ಓಲೈಕೆ ಎಂಬ ಶಿಕಾರಿಗೆ ಪ್ರಮುಖ ಕಾರಣವೂ ಇದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫಲಿತಾಂಶ ಬದಲಾವಣೆ ಮಾಡುವಷ್ಟು ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಇನ್ನು ನಿಕ್ಕಿಯಾಗಿ ಹೇಳಬೇಕೆಂದರೆ ಹೊಸದಾಗಿ ಸೇರ್ಪಡೆಗೊಂಡ ಮತದಾರರ ಪೈಕಿ ಯುವ ಮತದಾರರೇ ಹೆಚ್ಚು.
2009 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 14,35,099 ಮತದಾರರಿದ್ದರು. ಈ ಬಾರಿ ಈ ಸಂಖ್ಯೆ  1561288 ಮುಟ್ಟಿದೆ. ಅಂದರೆ 1.26 ಲಕ್ಷ ಹೊಸ ಮತದಾರರು ಕಳೆದ ಚುನಾವಣೆಗಿಂತ ಹೆಚ್ಚಾಗಿದ್ದಾರೆ. ಈ ಅಂಕಿ ಅಂಶವನ್ನೇ ವಿಶ್ಲೇಷಿಸುವುದಾದರೆ, 1991ರ ನಂತರ ನಡೆದಿರುವ 7 ಲೋಕಸಭಾ ಚುನಾವಣೆಗಳ ಪೈಕಿ 1998ರ ಚುನಾವಣೆ ಹೊರತುಪಡಿಸಿದರೆ ಮತ್ತೆಲ್ಲಾ ಚುನಾವಣೆಯಲ್ಲಿ ಗೆಲುವಿನ ಅಂತರ 1 ಲಕ್ಷಕ್ಕಿಂತ ಕಡಿಮೆಯೇ. 98ರ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಚುನಾವಣೆಯ ಗೆಲುವಿನ ಅಂತರದ ಸರಾಸರಿ ತೆಗೆದುಕೊಂಡರೆ 50 ಸಾವಿರದಷ್ಟಾಗುತ್ತದೆ.
ಅಂದರೆ, ಈ ಚುನಾವಣೆಯಲ್ಲಿ ಬಹಳ ವ್ಯತ್ಯಾಸದ ಗೆಲುವು ಅಷ್ಟು ಸುಲಭ ಸಾಧ್ಯವಲ್ಲ ಎಂಬ ಮಾತೂ ಇದೆ. ಈ ಮಧ್ಯೆಯೇ ಹೊಸ ಮತದಾರರ ಚಿತ್ತ ಎತ್ತ ಎಂಬುದನ್ನು ದುರ್ಬಿನು ಹಾಕಿ ಹುಡುಕಲು ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಸರ್ಕಸ್ ಆರಂಭಿಸಿವೆ.
ಯಾವ ಪಕ್ಷದ್ದು ಏನು ರಣತಂತ್ರ?:  ಬಿಜೆಪಿ ದೂರದೃಷ್ಟಿಯಿಂದಲೇ ಈ ಪ್ರಯತ್ನ ಆರಂಭಿಸಿದೆ. 2 ತಿಂಗಳ ಮುಂಚಿತವಾಗಿ ಹೊಸ ಮತದಾರರನ್ನು ಹುಡುಕಿ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದರಿಂದಲೇ ತನ್ನ ಕಾರ್ಯಯೋಜನೆ ಆರಂಭಿಸಿತು. ಹಾಗೆಯೇ ಅವರ ಸಂಪರ್ಕ ಮುಂದುವರಿಸಿರುವುದು ಆ ಪಕ್ಷದ ಉತ್ಸಾಹ. ಅಷ್ಟೇ ಅಲ್ಲದೇ ತಾಲೂಕು ಮಟ್ಟದಲ್ಲಿ ಹೊಸ ಮತದಾರರನ್ನು ಸಾಮಾಜಿಕ ತಾಣಗಳ ಮೂಲಕ ಸಂಪರ್ಕಿಸುವ ಕೆಲಸ ಮಾಡಲಾಗಿದೆಯಂತೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಚುನಾವಣೆಯಲ್ಲಿ ಅಭ್ಯರ್ಥಿ ಘೋಷಣೆಯಾದ ನಂತರ ಯಂಗ್ ಬ್ರಿಗೇಡ್ ಎಂಬ ತಂಡ ಕಟ್ಟಿಕೊಂಡು ಯುವ ಮತದಾರರನ್ನೇ ಗುರಿಯಾಗಿಸಿಕೊಂಡು ಪ್ರಚಾರ ಕಾರ್ಯ ನಡೆಸಲಾಗಿದೆ.
ಇವೆರಡೂ ರಾಷ್ಟ್ರೀಯ ಪಕ್ಷಗಳು ಯುವಕರನ್ನೇ ಕೇಂದ್ರೀಕರಿಸಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದು ವಿಶೇಷ. ಅದೇ ರೀತಿ ಜೆಡಿಎಸ್ ವಿಭಿನ್ನ ತಂತ್ರಗಾರಿಕೆಗೆ ಮೊರೆ ಹೋಗಿದೆ. ಜೆಡಿಎಸ್ ಅಭ್ಯರ್ಥಿ ಪರವಾಗಿ ನಟ ಶಿವರಾಜ್‌ಕುಮಾರ್ ಖುದ್ದು ಪ್ರಚಾರ ನಡೆಸುವ ಜೊತೆಗೆ ನಟ ಪ್ರೇಮ್ ಅವರನ್ನು ಕರೆ ತಂದು ಕ್ಷೇತ್ರದಲ್ಲಿ ಸುತ್ತು ಹೊಡೆಸಿದೆ. ಇದೀಗ ಉಪೇಂದ್ರ ಅವರ ಪ್ರಚಾರಕ್ಕೆ ದಿನಾಂಕ ನಿಶ್ಚಯಪಡಿಸಿದೆ. ಕೊನೆ ಹಂತದಲ್ಲಿ ಇನ್ನಷ್ಟು ಚಿತ್ರನಟರನ್ನು ಕ್ಷೇತ್ರಕ್ಕೆ ಕರೆತಂದು ಯುವ ಮತದಾರರನ್ನು ಸೆಳೆಯುವ ತಂತ್ರಕ್ಕೆ ಮೊರೆ ಹೋಗಿದೆ.
ಒಟ್ಟಾರೆ ಚುನಾವಣೆ ಫಲಿತಾಂಶ ಬದಲಾವಣೆ ಮಾಡುವಷ್ಟು ಹೊಸ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಪಡೆದಿರುವುದು ರಾಜಕೀಯ ಪಕ್ಷಗಳಿಗೆ ಖುಷಿಯೂ ಹೌದು, ನುಂಗಲಾರದ ಬಿಸಿ ತುಪ್ಪ ಎಂದರೂ ತಪ್ಪಾಗಲಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.