ಶಿವಮೊಗ್ಗ

ಇಲ್ನೋಡ್ರಿ... ಜಿಲ್ಲೆಯ ಸೋಂಬೇರಿ ಮತಗಟ್ಟೆಗಳು

Published On :

ವಿಶೇಷ ವರದಿ
ಶಿವಮೊಗ್ಗ:
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆಯೇ ರಾಜಕೀಯ ಪಕ್ಷಗಳಿಗೆ ಸೋಂಬೇರಿ ಮತದಾರರ ಬಗ್ಗೆಯೇ ಹೆಚ್ಚು ಕಳವಳ. ಕೆಲವು ಬೂತ್‌ಗಳಲ್ಲಿ ಹೆಚ್ಚು ಮತದಾನವಾಗದೇ ಇರುವುದು ಪಕ್ಷಗಳ ಮುಖಂಡರಿಗೆ ಚಿಂತೆಗೀಡು ಮಾಡಿದೆ.
ಒಂದೆಡೆ ಮತವನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ರಾಜಕೀಯ ಪಕ್ಷಗಳು ಹಣ ಚೆಲ್ಲಲು ಮುಂದಾದರೆ, ಇತ್ತ ಚುನಾವಣಾ ಆಯೋಗವು ಯಾವುದೇ ಪಕ್ಷಕ್ಕೆ ಮತ ಹಾಕಿ ಮೊದಲು ಮತದಾನ ಕೇಂದ್ರಕ್ಕೆ ಬನ್ನಿ ಎಂದು ಹಣ ವೆಚ್ಚ ಮಾಡುತ್ತಿದೆ.
ಮತದಾನಕ್ಕಾಗಿ ಹಣ ವ್ಯಯ: ಕಳೆದ ವಿಧಾನಸಭೆ ಚುನಾವಣೆಯ ಒಂದು ಉದಾಹರಣೆ ತೆಗೆದುಕೊಂಡರೆ ವಿದ್ಯಾವಂತರು ಹೆಚ್ಚಿರುವ ಪ್ರದೇಶದ ಅನೇಕ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗಿದೆ. ಈ ಪ್ರದೇಶಗಳನ್ನು ಕೇಂದ್ರೀಕರಿಸಿ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದ ತಂಡ ಸ್ವೀಪ್ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ಬಾರಿ ಈಗಾಗಲೇ 10 ಲಕ್ಷ ಮತದಾನ ಜಾಗೃತಿಗಾಗಿ ವೆಚ್ಚ ಮಾಡಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಲಕ್ಷ ರುಪಾಯಿಯಂತೆ ವೆಚ್ಚ ಮಾಡಲು ಅವಕಾಶ ಕಲ್ಪಿಸಿತ್ತು. ಸ್ಟಿಕ್ಕರ್, ಸ್ಪರ್ಧೆಗಳು, ಸ್ಟ್ಯಾಂಪ್, ಸಂವಾದ, ಸಹಿ ಸಂಗ್ರಹ, ಹಾಲಿನ ಕವರ್ ಮೇಲೆ ಮತದಾನ ಜಾಗೃತಿ ಮೂಡಿಸುವ ಶೀರ್ಷಿಕೆ, ಬೀದಿ ನಾಟಕ, ರ್ಯಾಲಿ ಸೇರಿದಂತೆ ಹತ್ತಾರು ಕಾರ್ಯಕ್ರಮ ನಡೆಸಿ ಮತದಾನಕ್ಕೆ ಪ್ರೇರೇಪಣೆ ಮಾಡಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಹೆಚ್ಚಿನ ಓಟೌಟ್ ಆಗುವ ಆಶಾಭಾವನೆ ಇದ್ದರೂ, ಒಳಗೊಳಗೆ ಆತಂಕ ಮಾತ್ರ ಇದ್ದೇ ಇದೆ.
ಚುನಾವಣಾ ಆಯೋಗವು ಕೇವಲ ಹಣ ಬಿಡುಗಡೆ ಮಾಡಿ ಸುಮ್ಮನೆ ಕುಳಿತಿಲ್ಲ. ಸ್ವೀಪ್ ಕಾರ್ಯಕ್ರಮದ ವರದಿಯನ್ನು ಪ್ರತಿ ದಿನ ಪಡೆದುಕೊಂಡು ಮಾರ್ಗದರ್ಶನ ಮಾಡುತ್ತಿದೆ. ಮತದಾನ ಹೆಚ್ಚಳಕ್ಕಾಗಿಯೇ ವಿಶೇಷ ಮುತುವರ್ಜಿ ವಹಿಸಿ ಕ್ರಮವಹಿಸಿದೆ.
ಇಷ್ಟೇ ಅಲ್ಲದೇ ಕಳೆದ ಚುನಾವಣೆಯಿಂದ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಯ ಜೊತೆಗೆ ಕ್ಲಿಸ್ಟ ಪರಿಸ್ಥಿತಿಯ ಮತಗಟ್ಟೆಯನ್ನು ಗುರುತಿಸಿದೆ. ಮತದಾನಕ್ಕೆ ಅಡೆತಡೆ ಮಾಡುವ ವ್ಯಕ್ತಿಗಳಿದ್ದರೆ ಅಂತಹವರ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಕ್ಷಣಾ ಇಲಾಖೆಗೆ ಸೂಚನೆ ನೀಡಿದೆ. ಇಷ್ಟೆಲ್ಲಾ ಕ್ರಮ ಕೈಗೊಂಡರೂ ಮತದಾರ ಮನೆ ಬಿಟ್ಟುಹೊರಬರದೇ ಇದ್ದರೆ ಪ್ರಯತ್ನಗಳೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.