ಶಿವಮೊಗ್ಗ

ಗೀತಾ ಶಿವರಾಜ್ ಕುಮಾರ್ ಹರಕೆ ಕುರಿ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಏ.5
ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಅವರಿಗೆ ದೇವೇಗೌಡರ ಕುತಂತ್ರ ಅರ್ಥವಾಗುತ್ತಿಲ್ಲ. ಗೀತಾ ಶಿವರಾಜ್ ಕುಮಾರ್ ಈ ಚುನಾವಣೆಯ ಮೂಲಕ ಗೌಡರ ಹರಕೆ ಕುರಿ ಎಂದು ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಕಟುಶಬ್ದಗಳಲ್ಲಿ ಟೀಕಿಸಿದ್ದಾರೆ.
 ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಒಂದೇ ಕಲ್ಲಿನಲ್ಲಿ ರಾಜ್ ಕುಟುಂಬ ಹಾಗೂ ಬಂಗಾರಪ್ಪ ಕುಟುಂಬವನ್ನು ಒಡೆದಿದ್ದಾರೆ. ರಾಜಕೀಯ ತೆವಲುಗಳಿಗೆ ಈ ಎರಡೂ ಮಹಾನ್ ಚೇತನಗಳಿಗೆ ಅವಮಾನ ಮಾಡುವುದು ಬೇಡ ಎಂದು ಹೇಳಿದರು.
ಒಳ್ಳೆಯ ಉದ್ದೇಶ ಇಲ್ಲ: ಪ್ರಮೋದ್ ಮುತಾಲಿಕ್ ಮುಂದಿಟ್ಟುಕೊಂಡು ಬಿಜೆಪಿ ಹೇಗೆ ಬೇಳೆ ಬೇಯಿಸುತ್ತಿದೆಯೋ ಅದೇ ರೀತಿ ತಿಲಕ್ ಕುಮಾರ್, ಸುಜಾತ ತಿಲಕ್ ಕುಮಾರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅದೇ ಮಟ್ಟಕ್ಕೆ ಸೀಮಿತವಾದವರು. ಯಾವುದೇ ಕಾರಣಕ್ಕೂ ಒಳ್ಳೆಯದು ಮಾಡುವ ಉದ್ದೇಶ ಅವರಿಗಿಲ್ಲ ಎಂದು ಟೀಕಿಸಿದರು.
 ಈಗ ಚುನಾವಣೆಗೆ ಬಂದಿರುವ ಅವರು, 2009ರಲ್ಲಿ ಕಾಂಗ್ರೆಸ್ ಪರವಾಗಿ ಏಕೆ ಬರಲಿಲ್ಲ. ಅಂದು ಬಂಗಾರಪ್ಪನವರು ಹಣಕಾಸು ತೊಂದರೆ ಇದ್ದ ಸಂದರ್ಭದಲ್ಲಿ ನಯಾ ಪೈಸೆ ಸಹಕಾರ ಕೊಡದ ಇರುವವರು ಈಗ ಕೆಟ್ಟ ರಾಜಕೀಯ ಮಾಡಲು ಬಂದಿದ್ದಾರೆ. ಇದೀಗ ನಾವು ನಾಲ್ಕೇ ಮಕ್ಕಳು ಎಂದು ಹೇಳಿಕೊಳ್ಳುತ್ತಾ ಕುಟುಂಬಕ್ಕೆ ಕಳಂಕ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೌಡರಿಂದ ಅಂತರ ಕಾಯ್ಡುಕೊಳ್ಳಿ: ದೇವೇಗೌಡರು ಎಂತಹವರು ಎಂಬುದನ್ನು ಇತಿಹಾಸವೇ ಹೇಳುತ್ತದೆ. ಅಂತಹವರ ಕೈಗೊಂಬೆಯಾಗಿ ಇವರು (ತಮ್ಮ ಕುಟುಂಬದವರು) ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಹೇಳಿದ ಅವರು, ದೇವೇಗೌಡರಿಂದ 100 ಅಡಿ ಅಂತರ ಕಾಯ್ದುಕೊಂಡೇ ಕೆಲಸ ಮಾಡಬೇಕಾದ ಸಂದರ್ಭವಿದೆ ಸೂಚ್ಯವಾಗಿ ಗೌಡರನ್ನು ತಿವಿದರು.
 ನಾನು ಬಂಗಾರಪ್ಪ ಪುತ್ರಿ, ನಾನು ರಾಜ್ ಸೊಸೆ, ಶಿವರಾಜ್ ಪತ್ನಿ ಎಂದು ಗೀತಾ ಪ್ರಚಾರಕ್ಕೆ ಇಳಿದಿದ್ದಾರೆ.
ಇದು ದೇವೇಗೌಡರ ತಂತ್ರವಷ್ಟೆ. ದೇವೇಗೌಡರಿಗೆ ಇಂತಹದ್ದು ಹೊಸದಲ್ಲ. ಅವರು 1983ರಲ್ಲೇ ಬಂಗಾರಪ್ಪನರನ್ನು ಮುಗಿಸಿದ್ದರು. ಆದರೆ, ಇಂದು ಬಂಗಾರಪ್ಪನವರು ಇಲ್ಲದೇ ಇರುವ ಸಂದರ್ಭದಲ್ಲಿ ಇತಿಹಾಸ ಇವರಿಗೆಲ್ಲಾ (ಕುಟುಂಬದವರಿಗೆ) ತಿಳಿದಿಲ್ಲ ಎಂದು ಹೇಳಿದರು.
ಜಾತಿ ಮೂಲಕ ಸಂಘಟನೆ: ಲೋಹಿಯಾ, ಗೋಪಾಲ ಗೌಡರು, ಕಡಿದಾಳು ಮಂಜಪ್ಪ, ಜೆ.ಎಚ್. ಪಟೇಲ್, ಬಂಗಾರಪ್ಪನವರ ನೆಲದಲ್ಲಿ ಸೈದ್ಧಾಂತಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೆವು, ಆದರೆ ಇವತ್ತು ಜಾತಿ ಮೂಲಕ ಸಂಘಟನೆ ಮಾಡಲು ಬಂದಿದ್ದಾರೆ.
  ಬಂಗಾರಪ್ಪ ಕುಟುಂಬಕ್ಕೆ ದೀವ ಸಮಾಜ ಋಣಿ ಎಂಬ ಮಾತುಗಳಾಡುತ್ತಿದ್ದಾರೆ. ತಮಗೇ ಓಟು ಹಾಕಬೇಕೆಂಬ ಮಾತು ಹೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಇವರಿಗೆ ಉತ್ತರ ಕೊಡುವ ಕೆಲಸ ಕಾಂಗ್ರೆಸ್ ಮಾಡಬೇಕಾಗಿದೆ ಎಂದರು.
ಶರಾವತಿ ಡೆಂಟಲ್ ಕಾಲೇಜು ಹಗರಣ ತಾರಕಕ್ಕೆ
ಶಿವಮೊಗ್ಗ: ಈಡಿಗ ಸಮುದಾಯಕ್ಕೆ ಸೇರಿದ ಶರಾವತಿ ಡೆಂಟಲ್ ಕಾಲೇಜಿಗೆ ಸಂಬಂಧಪಟ್ಟ ಜಾಗವನ್ನು ಸೈಟು ಮಾಡಿ ಮಾರಾಟ ಮಾಡಲಾಗಿರುವ ಹಗರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಈ ವಿಷಯ ತಿಳಿಸಿದ ಅವರು, ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜ ಆಸ್ತಿ. ಪಕ್ಷಾತೀತ, ಜಾತ್ಯತೀತಾಗಿ ಜನಸಾಮಾನ್ಯರಿಂದ ದೇಣಿಗೆ ಸಂಗ್ರಹಿಸಿ ಕಟ್ಟಿದ ಸಂಸ್ಥೆ. ಅದನ್ನು ಮಧು ಬಂಗಾರಪ್ಪ ತಮ್ಮದೆಂದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಂಗಾರಪ್ಪನವರ ಕನಸು: ಶರಾವತಿ ಡೆಂಟಲ್ ಕಾಲೇಜು ಬಂಗಾರಪ್ಪನವರ ಕನಸು. ಸಮಾಜದ ಹಿರಿಯರನ್ನು ಸೇರಿಸಿ ಸಂಸ್ಥೆ ಕಟ್ಟಿದ್ದಾರೆ. ಎಲ್ಲೆಡೆ ದೇಣಿಗೆ ಸಂಗ್ರಹಿಸಲಾಗಿದೆ. ಅದರ ರಶೀದಿಯೂ ಲಭ್ಯವಿದೆ. ಆದರೆ, ಇಂದು ಅದು ತಮ್ಮದೇ ಆಸ್ತಿ ಎಂಬಂತೆ ಸಂಸ್ಥೆಯ ಸಂಸ್ಥಾಪಕ ಪದಾಧಿಕಾರಿಗಳನ್ನು ದೂರವಿಟ್ಟು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಲಾಯಕ್: ಕಳ್ಳ ಕೆಲಸ ಮಾಡಲು ಬೇರೆ ಹೆಸರು, ದಾಖಲಾತಿ ಮುಚ್ಚಿಡಲು ಮತ್ತೊಂದು ಹೆಸರು, ಕೆಟ್ಟ ರಾಜಕಾರಣ ಮಾಡಲು ತಂದೆಯವರ ಹೆಸರು ಬಳಸುವ ಈತ ರಾಜಕೀಯದಲ್ಲಿರಲು ನಾಲಾಯಕ್ ಎಂದು ಜರಿದರು.
ಜೆಡಿಎಸ್ ಬೆಂಬಲಿಸ್ತೀರಾ: ಈಡಿಗ ಸಮುದಾಯದವರೆಲ್ಲಾ ನಮ್ಮನ್ನೇ ಬೆಂಬಲಿಸಬೇಕು ಎಂದು ಹೇಳಿಕೊಂಡು ಓಡಾಡುವ ಮಧು ಬಂಗಾರಪ್ಪ, ಗೀತಾ ಶಿವರಾಜ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಕುಮಾರ್ ಬಂಗಾರಪ್ಪ, ಅಭ್ಯರ್ಥಿಯ ಜಾತಿ ನೋಡಿ ವೋಟು ಹಾಕಬೇಡಿ ಎಂದು ಈಡಿಗ ಸಮುದಾಯಕ್ಕೆ ಮನವಿ ಮಾಡಿದರು.
ಬಂಗಾರಪ್ಪ ಅವರಿಗೆ ಜೆಡಿಎಸ್ ಮುಖಂಡರು ಆಗಿನ ಕಾಲದಲ್ಲೇ ಅನ್ಯಾಯ ಮಾಡಿದ್ದರು. ಸಾಕಷ್ಟು ತೊಂದರೆ ಕೊಟ್ಟಿದ್ದರು. ಅವರ ಬೆಳವಣಿಗೆಗೆ ಅಡ್ಡಿಪಡಿಸಿದರು. ಅಂತಹ ಪಕ್ಷವನ್ನು ಬೆಂಬಲಿಸುವ ಮೊದಲು ಈಡಿಗ ಸಮುದಾಯದವರು ಯೋಚಿಸಬೇಕು ಎಂದು ಹೇಳಿದರು.
ಆ ಪಕ್ಷದವರಿಗೆ ಬಂಗಾರಪ್ಪ ಅವರ ಮೇಲೆ ಅಭಿಮಾನ ಇತ್ತೆಂದರೆ ಬಂಗಾರಪ್ಪ ವಿಚಾರಧಾರೆ ಅನುಸರಿಸುತ್ತಿದ್ದಾರೆ. ಆದರೆ, ಜೆಡಿಎಸ್ ರಾಜಕಾರಣವೇ ಬೇರೆ ರೀತಿಯದ್ದು ಎಂದು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.