ಬಿ.ಎಸ್. ಯಡಿಯೂರಪ್ಪಗೆ ತೆಂಗಿನಕಾಯೇ ತಲೆಬೇನೆ
ಶ್ರೀಕಾಂತ ಭಟ್
ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆ ನಿಂತಿದ್ದೂ ಆಗಿದೆ. ಕ್ಷೇತ್ರಾದ್ಯಂತ ಸುತ್ತಿ ತಮ್ಮ ಪರ ಅಲೆ ಸೃಷ್ಟಿಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಆದರೆ, ಅವರಿಗೆ ಸದ್ದಿಲ್ಲದೆ ತಲೆಬೇನೆಯೊಂದು ಅಂಟಿಕೊಂಟಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನಿಲ್ಕುಮಾರ್ ತೆಂಗಿನ ಕಾಯಿ ಚಿನ್ಹೆ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಯೇ ಯಡಿಯೂರಪ್ಪವರ ತಲೆಯೊಳಗೆ ಹುಳು ಹೊಕ್ಕಂತಾಗಿದೆ. ಕಾರಣವಿಷ್ಟೆ, ಕೆಜೆಪಿ ಕಟ್ಟಿದ್ದ ಯಡಿಯೂರಪ್ಪನವರಿಗೆ ಸಿಕ್ಕಿದ್ದು ಇದೇ ತೆಂಗಿನ ಕಾಯಿ ಚಿನ್ಹೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೆಂಗಿನ ಕಾಯಿಯನ್ನೇ ಹಿಡಿದು ಹಳ್ಳಿ ಹಳ್ಳಿ ಸುತ್ತಿದ್ದ ಯಡಿಯೂರಪ್ಪನವರು ತೆಂಗಿನ ಕಾಯಿ ಚಿನ್ಹೆಗೆ ಮತ ಹಾಕುವಂತೆ ಕೋರುತ್ತಿದ್ದರು. ಇನ್ನೂ ವಿಶೇಷವೆಂದರೆ ಯಡಿಯೂರಪ್ಪ ಎಂದ ಕೂಡಲೇ ನಿಮಗೆಲ್ಲಾ ಕಮಲದ ನೆನಪಾಗುತ್ತದೆ. ಆದರೆ, ಈ ಬಾರಿ ಕಮಲವಲ್ಲ ತೆಂಗಿನ ಕಾಯಿ ನೆನಪಿಟ್ಟು ಮತ ಹಾಕಿ ಎಂದು ಪದೇ ಪದೇ ಮತದಾರರಿಗೆ ಕೋರುತ್ತಿದ್ದರು. ಈ ಸಂಗತಿ ಈಗ ಮುಳುವಾಗುವ ಪರಿಸ್ಥಿತಿ ಬಂದಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಕ್ಲೋಸ್ ಫೈಟ್ ಎಂಬ ಮಾತು ಕೇಳಿ ಬರುತ್ತಿದೆ. ಯಡಿಯೂರಪ್ಪ ಅವರ ಒಂದಷ್ಟು ಪ್ರಮಾಣದ ವೋಟು ತೆಂಗಿನ ಕಾಯಿ ಚಿನ್ಹೆಗೆ ಬಿದ್ದರೆ ಏನು ಗತಿ ಎಂಬ ಚಿಂತೆ ಬಿಜೆಪಿಯವರನ್ನು ಕಾಡಲಾರಂಭಿಸಿದೆ.
ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಅನಿಲ್ ಮತ್ತವರ ಗೆಳೆಯರು ತೆಂಗಿನಕಾಯಿಗೆ ನಿಮ್ಮ ಮತ ಎಂದು ಶಿವಮೊಗ್ಗದ ಬೀದಿ- ಬೀದಿಗಳಲ್ಲಿ ಆಟೋ ಪ್ರಚಾರ ಮಾಡಿ ಸುತ್ತುತ್ತಿದ್ದಾರೆ. ಇದೀಗ ಪಕ್ಷದವರಿಗೆ ಸಾಕಷ್ಟು ಇರುಸುಮುರುಸು ತಂದಿದೆ.
ಒಟ್ಟಾರೆ ಈ ಚುನಾವಣೆ ಯಡಿಯೂರಪ್ಪನವರಿಗೆ ಅಷ್ಟು ಸುಲಭವೇನಲ್ಲ ಎಂಬ ಹೇಳಿಕೆಗಳು ಬರುತ್ತಿರುವಾಗಲೇ ಇಂತಹದ್ದೊಂದು ಸಣ್ಣ ವಿಷಯ ಕಮಲ ಪಾಳಯಕ್ಕೆ ಕಿರಿಕಿರಿ ಉಂಟುಮಾಡುತ್ತಿದೆ.
ನನ್ನ ಪರವಾಗಿ ಬಿಜೆಪಿಯವರೇ ಪ್ರಚಾರ ಮಾಡುತ್ತಾರೆ. ಅಂದು ಕಮಲವಲ್ಲ ಕಾಯಿ ಎಂದವರು ಇಂದು ಕಾಯಿಯಲ್ಲ, ಕಮಲ ಎಂದು ಹೇಳುವ ಮೂಲಕ ಪರೋಕ್ಷ ಪ್ರಚಾರ ಮಾಡುತ್ತಿದ್ದಾರೆ.
ಟಿ ಅನಿಲ್ಕುಮಾರ್, ಪಕ್ಷೇತರ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

