ಶಿವಮೊಗ್ಗ

ರಾತ್ರೋರಾತ್ರಿ ಧರೆಗುರುಳಿದ ಹಲಸಿನ ಮರ

Published On :

ಸಾಗರ: ಇತ್ತೀಚೆಗೆ ಪರಿಸರಪ್ರೇಮಿಗಳ ಪ್ರತಿಭಟನೆಯಿಂದಾಗಿ ಕಡಿಯದೆ ಬಿಟ್ಟಿದ್ದ ದೊಡ್ಡ ಮರವೊಂದನ್ನು ಶನಿವಾರ ರಾತ್ರಿ ರಹಸ್ಯವಾಗಿ ಕಡಿತಲೆ ಮಾಡಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದ ಇಕ್ಕೇರಿ ರಸ್ತೆಯಲ್ಲಿ 50ಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವ ಕಂಡುಕೊಂಡು ಜನರಿಗೆ ನೆರಳು ನೀಡುತ್ತಿದ್ದ ಬೃಹತ್ ಮರವೊಂದನ್ನು ಪೆಟ್ರೋಲ್ ಬಂಕಿಗೆ ದಾರಿ ಕಲ್ಪಿಸುವ ಉದ್ದೇಶದಿಂದ ಕಡಿತಲೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಇದೇ ಮರದ ಕಡಿತಲೆಗೆ ಪೆಟ್ರೋಲ್ ಬಂಕಿನವರು ಮುಂದಾಗಿದ್ದಾಗ ಈ ಭಾಗದ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ರಸ್ತೆಯ ಮೇಲೆ ಮಲಗಿ ಮರ ಕಡಿತಲೆಗೆ ವಿರೋಧ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ್ದ ಅರಣ್ಯ ಇಲಾಖೆ ಮರ ಕಡಿತಲೆಗೆ ನೀಡಿದ್ದ ಟೆಂಡರ್ ರದ್ದುಗೊಳಿಸಿ ಗುತ್ತಿಗೆದಾರನಿಗೆ ಹಣ ವಾಪಸ್ ನೀಡಿತ್ತು. ಅರಣ್ಯ ಇಲಾಖೆ ಕ್ರಮವನ್ನು ಪರಿಸರ ಪ್ರೇಮಿಗಳು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು.
ಹಲವು ಅನುಮಾನ: ಅರಣ್ಯ ಇಲಾಖೆ ಟೆಂಡರ್ ರದ್ದು ಮಾಡಿ 15 ದಿನಗಳು ಕಳೆದಿವೆ. ಶನಿವಾರ ರಾತ್ರಿ ಇಲಾಖೆಗೆ ಸೂಚನೆಯನ್ನೂ ನೀಡಿದೆ ಪೆಟ್ರೋಲ್ ಬಂಕ್ ಮಾಲೀಕರು ರಾತ್ರೋರಾತ್ರಿ ಬೃಹತ್ ಗಾತ್ರದ ಹಲಸಿನ ಮರವನ್ನು ಯಂತ್ರಗಳ ಸಹಾಯದಿಂದ ಕಡಿದು ಉರುಳಿಸಿದ್ದಾರೆ. ಮರ ಕಡಿತಲೆಯ ಸೂಕ್ಷ್ಮವನ್ನು ಅರಿತಿದ್ದ ಪರಿಸರಪ್ರೇಮಿಗಳು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಪೆಟ್ರೋಲ್ ಬಂಕ್ ಪಕ್ಕದಲ್ಲಿಯೇ ಶಿಕ್ಷಣ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ನಿಯಮಾವಳಿಗಳನ್ನು ಸೂಕ್ತವಾಗಿ ಪಾಲಿಸಿಲ್ಲ ಎನ್ನುವ ದೂರು ಸಹ ಇದೆ. ಪೆಟ್ರೋಲ್ ಬಂಕಿನಿಂದ ಶಾಲೆ 100 ಅಡಿ ದೂರದಲ್ಲಿ ಇರಬೇಕು.
  ಆದರೆ ಪೆಟ್ರೋಲ್ ಬಂಕ್ ಪಕ್ಕದಲ್ಲಿಯೆ ಶಾಲೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಶಿಕ್ಷಣಾಧಿಕಾರಿಗಳನ್ನು ಕೇಳಿದರೆ, ಪರವಾನಗಿ ನೀಡುವವರು ತಹಸೀಲ್ದಾರರು ಅವರನ್ನೇ ಕೇಳಿ ಎನ್ನುವ ಉತ್ತರ ನೀಡುತ್ತಿದ್ದಾರೆ.
ಒಟ್ಟಾರೆ ಕಾನೂನುಬಾಹಿರವಾಗಿ ಮರ ಕಡಿತಲೆ, ನಿಯಮಾವಳಿ ಮೀರಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಶಾಲೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಇರುವುದು ಮಾತ್ರ ವಿಪರ್ಯಾಸ.
 ಅಕ್ರಮವಾಗಿ ಮರ ಕಡಿತಲೆ ಮಾಡಿರುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ ಎದುರು ಸದ್ಯದಲ್ಲಿಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.