ಬಿಎಸ್ವೈ ಜೈಲಿಗೆ ಹೋಗಲು ಸೋನಿಯಾ ಕಾರಣ
ಶಿವಮೊಗ್ಗ: ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತದೆ ಎಂಬ ಕಾರಣದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸೋನಿಯಾ ಗಾಂಧಿ ಅವರು ಸಂಚು ರೂಪಿಸಿ ಅವರು ಜೈಲಿಗೆ ಹೋಗುವಂತೆ ಮಾಡಿದರು ಎಂದು ಬಿಜೆಪಿ ರಾಷ್ಟೀಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸಂಜೆ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಜಾಗೃತ ಮತದಾರರೊಂದಿಗೆ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ರಾಜ್ಯಪಾಲರನ್ನು ತೀವ್ರವಾಗಿ ಟೀಕಿಸಿದರು.
ಗೌರ್ನರ್ಗೆ ತಲೆ ಇಲ್ಲ: ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸೋನಿಯಾ ಗಾಂಧಿ ಆತಂಕಗೊಂಡರು. ಸಂತೋಷ್ ಹೆಗ್ಡೆ ಅವರ ಮೂಲಕ ವರದಿ ಬರುವಂತೆ ಮಾಡಿದರು. ಇತ್ತ ರಾಜ್ಯಪಾಲರು ಒಂದು ಪತ್ರವನ್ನು ನೋಡಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರು. ಈ ಗೌರ್ನರ್ಗೆ ತಲೆ ಇಲ್ಲ. ಸೋನಿಯಾ ಹೇಳಿದಂತೆ ಕೇಳಿದರು ಎಂದು ಟೀಕಿಸಿದರು.
ಶಿಕ್ಷಣ ಸಂಸ್ಥೆಗೆ ಡೊನೇಷನ್ ಪಡೆದಿದ್ದೇ ಇವರಿಗೆ ದೊಡ್ಡ ತಪ್ಪಾಗಿ ಕಾಣಿಸಿತು. ಆದರೆ ಸಂತೋಷ್ ಹೆಗ್ಡೆ ಅವರು ಅವರ ಶಿಕ್ಷಣ ಸಂಸ್ಥೆಗೆ ಡೊನೇಷನ್ ಪಡೆದಿದ್ದನ್ನು ಯಾರೂ ಕೇಳಲಿಲ್ಲ. ಯಡಿಯೂರಪ್ಪ ಅವರು ಏನೂ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಬೇಕಾಯಿತು ಎಂದರು.
ಜಂಟಲ್ ಮನ್ ಪಾಸ್: ಅಂಬೇಡ್ಕರ್ ಅವರು ಕೊಲಂಬಿಯಾದಲ್ಲಿ ಪಿಎಚ್.ಡಿ ಪದವಿ ಪಡೆದು, ಇಂಗ್ಲೇಂಡ್ ನಲ್ಲಿ ಬ್ಯಾರಿಸ್ಟರ್ ಆದರು. ಭಾರತಕ್ಕೆ ಬಂದು ಸಂವಿಧಾನ ರಚನೆ ಮಾಡಿದರು. ನೆಹರೂ ಅವರು ಇಂಗ್ಲೇಂಡ್ನಲ್ಲಿ ಬ್ಯಾರಿಸ್ಟರ್ ಪದವಿ ಮುಗಿಸಲು ಆಗದಿದ್ದಾಗ ಜಂಟಲ್ ಮನ್ ಪಾಸ್ ಮಾಡಲಾಯಿತು. ಆದರೆ ನೆಹರೂ ಅವರಿಗೆ ಪಂಡಿತ್ ಎಂದು ಕಾಂಗ್ರೆಸಿಗರು ಕರೆದರು. ಅಂಬೇಡ್ಕರ್ಗೆ ಭೀಮರಾವ್ ಎಂದು ಮಾತ್ರ ಹೇಳಿದರು ಎಂದು ಸುಬ್ರಹ್ಮಣ್ಯ ಸ್ವಾಮಿ ಟೀಕಿಸಿದರು.
ನೆಹರೂ ಕುಟುಂಬದ ಯಾರೂ ಕೂಡ ಪದವಿ ಪಡೆದಿಲ್ಲ ಎಂದ ನಾನು ಸಾಬೀತು ಮಾಡಬಲ್ಲೆ. ಸೋನಿಯಾ, ರಾಹುಲ್ ಸಹ ಎಂದ ಅವರು, ರಾಬರ್ಟ್ ವಾದ್ರಾ ಯಾರು ಎಂದು ಪ್ರಶ್ನಿಸಿದರು. ಅವರು ದುಬೈನಲ್ಲಿ ಮನೆ ಮಾಡಿದ್ದಾರೆ. ರುಪಾಯಿಯನ್ನು ಶಾರ್ಟ್ ಸೆಲ್ಲಿಂಗ್ ಮಾಡುವುದರ ಮೂಲಕ ಹಣ ಮಾಡಿದರು. ಇದೇ ಕೆಲಸವನ್ನು ಕೇಂದ್ರ ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿಕ್ ಚಿದಂಬರಂ ಸಹ ಮಾಡಿದರು. ಈ ಕಾರಣದಿಂದಲೇ 1 ಡಾಲರ್ ಮೌಲ್ಯ 40 ರು. ಆಯಿತು ಎಂದರು.
ಸಮರ್ಥ ನಾಯಕತ್ವ ಬೇಕು: ಭಾರತಕ್ಕೀಗ ಸಮರ್ಥ ನಾಯಕತ್ವ ಬೇಕಾಗಿದೆ. ನರೇಂದ್ರ ಮೋದಿ ಅದನ್ನು ಪೂರೈಸಬಲ್ಲರು ಎಂದ ಅವರು, ಮೋದಿ ಅವರು ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆ ಗುಜರಾತ್ನಲ್ಲಿ 3 ತಿಂಗಳಿಗೊಮ್ಮೆ ಕೋಮು ಗಲಭೆ ನಡೆಯುತ್ತಿತ್ತು. ಕಳೆದ 12 ವರ್ಷದಲ್ಲಿ ಒಂದು ಗಲಭೆಯೂ ನಡೆದಿಲ್ಲ ಎಂದರು.
ಗುಜರಾತ್ ನಲ್ಲಿ ಆಗಿದ್ದು ನರಮೇಧವಲ್ಲ. 1984ರಲ್ಲಿ ನಡೆದ ಸಿಖ್ಖರ ಹತ್ಯೆ ನರಮೇಧ. ಈ ಕೃತ್ಯದಲ್ಲಿ ಭಾಗಿಯಾದವರು ನಂತರ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆದರು ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಮುಖಂಡರಾದ ಕೆ.ಜಿ. ಕುಮಾರಸ್ವಾಮಿ, ಜ್ಞಾನೇಶ್ವರ್, ದತ್ತಾತ್ರಿ ಇದ್ದರು. ಎಂ. ಶಂಕರ್ ಸ್ವಾಗತಿಸಿದರು. ಡಿ.ಎಸ್. ಅರುಣ್ ನಿರೂಪಿಸಿದರು. ಭವಾನಿಶಂಕರ್ ಮೋರೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

