ಶಿವಮೊಗ್ಗ

ಬಿಎಸ್‌ವೈ ಮುಂದೆ ಜೆಡಿಎಸ್ ಆಟ ನಡೆಯದು

Published On :

ಕ.ಪ್ರ.ವಾರ್ತೆ, ಸೊರಬ, ಏ. 12
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಭಿವೃದ್ಧಿ ಮಂತ್ರದ ಎದುರು ಎಷ್ಟೇ ಕಲಾವಿದರನ್ನು ಕರೆಯಿಸಿ, ಪ್ರಚಾರ ನಡೆಸಿದರೂ ಜೆಡಿಎಸ್‌ನವರ ಆಟ ಸಾಗದು ಎಂದು ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ತಿಳಿಸಿದರು.
ಶನಿವಾರ ಪಟ್ಟಣ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮುಚ್ಚುವ ಸ್ಥಿತಿಯಲ್ಲಿದ್ದ ಕಂಠೀರವ ಸ್ಟುಡಿಯೋಕ್ಕೆ ಪುನಶ್ಚೇತನ ನೀಡಿದ್ದಾರೆ. ಡಾ.ರಾಜ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಟ್ರಸ್ಟ್‌ಗೆ ರು. 2 ಕೋಟಿ ಬಿಡುಗಡೆಗೊಳಿಸಿ, ಸ್ಮಾರಕ ನಿರ್ಮಾಣದ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿತ್ತು. ರಾಜ್ ಕುಟುಂಬದ ಎಲ್ಲಾ ಸದಸ್ಯರೂ ಹಾಜರಿದ್ದರೂ, ಕುಟುಂಬದ ಹಿರಿಯ ಸೊಸೆ ಗೀತಾ ಹಾಜರಿರಲಿಲ್ಲ. ಇಂತವರಿಂದ ಸಿನಿಮಾ ಉದ್ಯಮ ಹಾಗೂ ಕಲಾವಿದರ ಉದ್ಧಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಾತಿ ಆಧಾರ: ಜೆಡಿಎಸ್ ಜಾತಿ ಆಧಾರದ ಮೇಲೆ ರಾಜಕೀಯ ನಡೆಸುತ್ತಿದೆ. ಆದರೆ 40 ವರ್ಷದಿಂದ ಆಡಳಿತ ಹಾಗೂ ಅಧಿಕಾರ ಅನುಭವಿಸಿದವರು ತಾಲೂಕಿನ ಈಡಿಗರ ಜನಾಂಗಕ್ಕೆ ಒಂದು ಸಮುದಾಯ ಭವನವನ್ನೂ ನೀಡಿಲ್ಲ. ಚುನಾವಣೆಗಳು ಬಂದಾಗ ಜಾತಿ - ಜನರ ನೆನಪಾಗುವ ಇವರಿಗೆ ಪಪಂ ಗದ್ದುಗೆ ಹಿಡಿಯುವಾಗ ಜನಾಂಗದ ಜನಪ್ರತಿನಿಧಿಗಳ ಬಗ್ಗೆ ಏಕೆ ನೆನಪಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ತಾಲೂಕಿನ ಜನಾಂಗದವರನ್ನೇ ಬಲಿ ಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಚಿತ್ರಣ ಬದಲು: ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಸೊರಬದ ಚಿತ್ರಣವೇ ಬದಲಾಗಿದೆ. ಹರತಾಳು ಹಾಲಪ್ಪನವರು ಅಭಿವೃದ್ಧಿ ಕಾರ್ಯ ಮಾಡಿ, ಹೆಚ್ಚಿನ ಅನುದಾನ ಮಂಜೂರು ಮಾಡಿಸಿದ್ದರು. ಈಗಿನ ಶಾಸಕರು ಅವುಗಳ ಶಂಕುಸ್ಥಾಪನೆ, ಗುದ್ದಲಿ ಪೂಜೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಶಾಸಕರಾದ ಮೇಲೆ ಸ್ವಂತ ಶಕ್ತಿ ಮೇಲೆ ಅನುದಾನ ತಂದು ರಸ್ತೆಗಳ ಗುಂಡಿಗಳನ್ನು ಮುಚ್ಚಲು ಮಧು ಬಂಗಾರಪ್ಪನವರಿಂದ ಸಾಧ್ಯವಾಗಿಲ್ಲ ಎಂದರು.
ಯಡಿಯೂರಪ್ಪನವರು ನೀಡಿದ ಸವಲತ್ತುಗಳನ್ನು ಮರೆಯದೇ ತಾಂಡಾದ ಜನಗಳೇ ಪಕ್ಷಕ್ಕೆ ಬೆಂಬಲ ನೀಡಲು ಮುಂದೆ ಬಂದು ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಸ್ಪರ್ಧೆ  ಇದ್ದು, ಅತ್ಯಧಿಕ ಮತಗಳ ಅಂತರದಲ್ಲಿ ಗೆಲವು ಸಾಧಿಸಿ, ಸಂಸದರಾಗಿ ಯಡಿಯೂರಪ್ಪ ಹೊರ ಹೊಮ್ಮಲಿದ್ದಾರೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾ ಸಂಪರ್ಕ ಅಭಿಯಾನ: ಏ.13ರಂದು ಬಿಜೆಪಿ ರಾಜ್ಯಾದ್ಯಂತ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು, ಆಯಾ ಕ್ಷೇತ್ರದ ಜನ ಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ಪ್ರತಿ ಮತದಾರರ ಬಳಿಗೆ ಹೋಗಿ ಅರಿವು ಮೂಡಿಸುವುದರ ಮೂಲಕ ಪಕ್ಷಕ್ಕೆ ಮತ ನೀಡಬೇಕು. ತಾಲೂಕಿನ ಎಲ್ಲಾ ಬೂತ್‌ಗಳಿಗೆ ತಾವು ಒಳಗೊಂಡಂತೆ ಮಾಜಿ ಸಚಿವ ಹಾಲಪ್ಪ ಹಾಗೂ ಪಧಾಧಿಕಾರಿಗಳು ಮತದಾರರನ್ನು ಭೇಟಿಯಾಗಲಿದ್ದೇವೆ ಎಂದರು.
ಏ.14ರ ಸಂಜೆ 6 ಗಂಟೆಗೆ ಸೊರಬದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಹಿರಂಗ ಸಭೆ ಸಭೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ಯೋಗೀಶ್, ಶಿವಯೋಗಿ, ಮಲ್ಲಿಕಾರ್ಜುನ ಸ್ವಾಮಿ, ಕುಮಾರ್, ಕೇಶವ ಪೇಟಕರ್ ಇದ್ದರು.


ಜೈಲಿಗೆ ಹೋಗಿ ಬಂದ ಸಿಎಂ ಟೀಕೆಗೆ ಅಸಮಾಧಾನ

ಕ.ಪ್ರ.ವಾರ್ತೆ, ಶಿವಮೊಗ್ಗ, ಏ. 12
ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದ ಸಿಎಂ ಎಂದು ಪದೇ ಪದೆ ಪ್ರಸ್ತಾಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್, ಜೆಡಿಎಸ್ ಮುಖಂಡರ ವಿರುದ್ಧ ಮಾಜಿ ಸಚಿವ ಪುಟ್ಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಎಸ್‌ವೈ ಜೈಲಿಗೆ ಹೋಗಿದ್ದರ ಕುರಿತು ದಾಖಲೆಗಳನ್ನೂ ಸಹ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅದರಲ್ಲೂ ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಸತ್ಯಕ್ಕೆ ದೂರವಾದ ವಿಚಾರ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ- ಸೋನಿಯಾ ಗಾಂಧಿ ಸ್ವಂತ ಶಕ್ತಿಯಿಂದ ಮಾತನಾಡುವ ಪ್ರವೃತ್ತಿ ಈ ವರೆಗೆ ಬೆಳೆಸಿಕೊಂಡಿಲ್ಲದ ಕಾರಣ ರಾಜ್ಯದ ವಿಚಾರಗಳಲ್ಲಿ ತಪ್ಪು ಮಾಹಿತಿಯನ್ನು ಅವರ ಮೂಲಕ ಹೇಳಿಸುತ್ತಿರುವುದು ಸರಿಯಲ್ಲ ಎಂದರು.
ಸಿದ್ದುಗೆ ಸವಾಲ್: 2002ರಿಂದ 2009ರ ವರೆಗೆ ಶೇ.6ರಂತೆ ರಾಜಸ್ವ ಪಡೆದು ಯಾರು ಜೇಬು ತುಂಬಿಸಿಕೊಂಡರೆಂಬುದನ್ನು ಸಿದ್ದರಾಮಯ್ಯ ಮೊದಲು ಸ್ಪಷ್ಟಪಡಿಸಲಿ. ಇದೇ ರೀತಿ ಆಂಧ್ರ ಬಂದರಿನಿಂದ ಅದಿರು ರಫ್ತು ಮಾಡಲು ಸಹಕರಿಸಿದಾಗ ಆಂಧ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿತ್ತು, ಆ ಸರ್ಕಾರದಿಂದ ಕೇಂದ್ರದ ನಾಯಕರು ಎಷ್ಟು ಹಂಚಿಕೊಂಡರು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ರೆಡ್ಡಿ ಸಹೋದರರಿಗೆ ಯಡಿಯೂರಪ್ಪನವರು ಒಂದೇ ಒಂದು ಗಣಿ ಲೈಸೆನ್ಸ್ ನೀಡಿದ್ದು ದಾಖಲೆ ಸಲ್ಲಿಸಿದರೆ, 40 ವರ್ಷದ ರಾಜಕೀಯಕ್ಕೆ ನಿವೃತ್ತಿ ಪಡೆಯುತ್ತೇನೆ ಎಂದ ಅವರು, ಯಡಿಯೂರಪ್ಪನವರ ವಿರುದ್ಧ ಅನಾವಶ್ಯಕ ಟೀಕೆ ಮಾಡುವುದನ್ನು ನಿಲ್ಲಿಸಬೇಕೆಂದರು.
ಮೈನಾರಿಟಿ: ನಾವೆಲ್ಲರೂ ಭಾರತೀಯರು, ಒಂದೇ ದೇಶ ಎಂಬ ಸ್ಲೋಗನ್ ಬಿಜೆಪಿಯದ್ದು. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ಭೇದ ಮಾಡುತ್ತಿದೆ ಎಂದು ಟೀಕಿಸಿದರು. ಸಂವಿಧಾನದಲ್ಲಿ ಸಹ ಮೈನಾರಿಟಿ, ಮೆಜಾರಿಟಿ ಎಂದು ನಮೂದಾಗಿಲ್ಲ ಎಂದು ದಾಖಲೆಯನ್ನು ಪ್ರಸ್ತುತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ. ಶಂಕರ್, ಎಸ್. ದತ್ತಾತ್ರಿ, ಡಿ.ಎಸ್. ಅರುಣ, ಬಿ.ಆರ್. ಮಧುಸೂಧನ್, ಪವಿತ್ರಾ ರಾಮಯ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.