ಮಾಲಿನ್ಯ ನಿಯಂತ್ರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ರವಿ
ಹೊಸನಗರ: ಅಭಿವೃದ್ಧಿ ಹೆಸರಲ್ಲಿ ಪರಿಸರದ ಮೇಲೆ ಅವ್ಯಾಹತ ದಾಳಿ ನಡೆಯುತ್ತಿದ್ದು, ಇದೇ ರೀತಿ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪರಿಸರವಾದಿ, ವೃಕ್ಷ ಲಕ್ಷ ಆಂದೋಲನದ ಹನಿಯ ರವಿ ಹೇಳಿದರು.
ಪಟ್ಟಣದ ಗೋಪ್ರಧ ನರ್ಸರಿ ಆವರಣದಲ್ಲಿ ಡೈಮಂಡ್ ಜೇಸೀಸ್ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಆಧುನಿಕತೆ ಮತ್ತು ಅಭಿವೃದ್ಧಿಯ ಭ್ರಮೆಯಲ್ಲಿ ಪರಿಸರದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಅದರ ಪರಿಣಾಮವನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಪಶ್ಚಿಮ ಘಟ್ಟ ಪ್ರದೇಶ ಭೂಮಿಯ ಅತ್ಯಂತ ಸೂಕ್ಷ್ಮ ಭಾಗವಾಗಿದ್ದು, ಇಲ್ಲಿನ ಅಪರೂಪದ ನೈಸರ್ಗಿಕ ಸಂಪತ್ತನ್ನು ಬಹಳ ಜತನದಿಂದ ಉಳಿಸಿಕೊಳ್ಳಬೇಕಿದೆ.
ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಮರಳುಗಾಡು ಬಿಟ್ಟು ಬೇರೇನೂ ಉಳಿಸಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆಯನ್ನು ಈ ಬಗ್ಗೆ ಎಚ್ಚರಿಸುವ ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡೈಮಂಡ್ ಜೇಸೀಸ್ ಅಧ್ಯಕ್ಷ ನಾರಾಯಣ ಎಂ. ಕಾನುಮನೆ, ರಾಸಾಯನಿಕ ಕೃಷಿಯಿಂದ ಇಂದು ಅನೇಕ ರೀತಿಯ ಅಪಾಯಕಾರಿ ವಿಷ ಮಣ್ಣು ಮತ್ತು ನೀರಿಗೆ ಸೇರ್ಪಡೆಯಾಗುತ್ತಿದೆ. ರಾಸಾಯನಿಕ ಬಳಕೆ ಅಗತ್ಯಕ್ಕಿಂತ ಫ್ಯಾಷನ್ ಆಗಿದೆ. ಸಾವಯವ ಪದ್ಧತಿಯಲ್ಲೇ ಅಧಿಕ ಇಳುವರಿ ಪಡೆಯಲು ಸಾಧ್ಯತೆಯಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕೃಷಿ ವಿಜ್ಞಾನದ ಬಗ್ಗೆ ಅನೇಕ ಉಲ್ಲೇಖಗಳಿದ್ದು, ಈ ಮಾಹಿತಿಯನ್ನು ರೈತರಿಗೆ ನೀಡುವ ಕೆಲಸವಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಹಣ್ಣಿನ ಸಸಿ ವಿತರಿಸಲಾಯಿತು. ವಿನಾಯಕ ಅರೆಮನೆ, ಹೆಬ್ಬೈಲು ಸಂತೋಷ್, ಗಣಪತಿ ಸಾಲಗೇರಿ, ಎಲ್.ಕೆ. ಮುರಳೀಧರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

