ಶಿವಮೊಗ್ಗ

ತನಿಕೋಡು ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ   ಸಾಗರ   ಏ.25
ಶೃಂಗೇರಿಯ ಚೆಕ್‌ಪೋಸ್ಟ್ ಬಳಿ ನಕ್ಸಲ್ ನಿಗ್ರಹ ಪಡೆಯಿಂದ ನಡೆದ ಎನ್‌ಕೌಂಟರ್ ಸಂಬಂಧ ಸರ್ಕಾರ ಮತ್ತು ಪ್ರಗತಿಪರ ಸಂಘಟನೆಗಳು ತಳೆದ ನಿಲುವನ್ನು ಖಂಡಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ನಮೋ ಬ್ರಿಗೇಡ್ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಮೋ ಬ್ರಿಗೇಡ್ ತಾಲೂಕು ಘಟಕದ ಸಂಚಾಲಕ ಕೆ.ಎಲ್. ಭೋಜರಾಜ್, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಚೆಕ್‌ಪೋಸ್ಟ್ ಬಳಿ ನಕ್ಸಲ್ ನಿಗ್ರಹಪಡೆ ತಪಾಸಣೆಗಾಗಿ ಗೋವು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ಮಾಡಲು ಲಗೇಜ್ ಆಟೋವನ್ನು ನಿಲ್ಲಿಸಲು ಹೇಳಿದ್ದಾರೆ. ಆದರೆ, ಆಟೋ ನಿಲ್ಲಿಸದೆ ಇರುವುದರಿಂದ ಎನ್‌ಕೌಂಟರ್ ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಈ ಪ್ರಕರಣಕ್ಕೆ ಧಾರ್ಮಿಕ ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.
ಎನ್‌ಕೌಂಟರಿಗೆ ಬಲಿಯಾದ ಕಬೀರ್ ಎಂಬ ವ್ಯಕ್ತಿಯ ಮೇಲೆ ಸಾಕಷ್ಟು ಕ್ರಿಮಿನಲ್ ಪ್ರಕರಣಗಳಿವೆ. ಗೋವು ಸಾಗಾಣಿಕೆ ಮಾಡುವವನ ವಿರುದ್ಧ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಧಾರ್ಮಿಕ ಬಣ್ಣ ನೀಡುತ್ತಿದ್ದು, ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ವರ್ತಿಸುತ್ತಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ನಕ್ಸಲಿಸಂ ಕೃತ್ಯಕ್ಕೆ ನೂರಾರು ಯೋಧರು ಬಲಿಯಾಗುತ್ತಿದ್ದಾರೆ. ಮೃತ ಯೋಧರ ಬಗ್ಗೆ ಪ್ರಗತಿಪರ ಚಿಂತಕರು ಚಕಾರ ಎತ್ತದೆ ಗೋವು ಸಾಗಾಣಿಕೆ ಮಾಡುವ ವ್ಯಕ್ತಿಯ ಪರವಾಗಿ ವಕಾಲತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಎಎನ್‌ಎಫ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರಪತಿ ಪದಕ ವಿಜೇತ ಪೇದೆ ನವೀನ್ ನಾಯಕ್ ಎಂಬುವವರನ್ನು ಅಮಾನತು ಮಾಡಿರುವುದು ಸರಿಯಲ್ಲ. ನಕ್ಸಲ್ ನಿಗ್ರಹಕ್ಕೆ ಎಎನ್‌ಎಫ್ ಪಡೆಗೆ ಬಂದೂಕು ನೀಡಿ ಅವರಿಗೆ ಅದನ್ನು ಚಲಾಯಿಸಬೇಡಿ ಎಂದು ಹೇಳುವ, ಅವರ ನೈತಿಕತೆ ಕುಸಿಯುವಂತೆ ಮಾಡುವ ರಾಜ್ಯ ಸರ್ಕಾರದ ಈ ನೀತಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ ಎಂದು ದೂರಿದರು.
ಹಾಸ್ಯಾಸ್ಪದ: ಬಿಜೆಪಿ ಮುಖಂಡ ಕೆ.ವಿ. ಪ್ರವೀಣಕುಮಾರ್ ಮಾತನಾಡಿ, ಕಬೀರ್ ಎಂಬ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯ ವಿರುದ್ಧ ಕೆಲವು ಸಂಘಟನೆಗಳು ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಪ್ರಾಮಾಣಿಕವಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಎಎನ್‌ಎಫ್ ಪಡೆಗಳು ಆತ್ಮಸ್ಥೈರ್ಯ ಕಳೆದುಕೊಳ್ಳುವಂತೆ ಆಗಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ನಕ್ಸಲ್ ನಿಗ್ರಹ ಪಡೆ ಬಲಪಡಿಸಬೇಕು. ಸಮಾಜದ್ರೋಹಿಗಳ ಪರವಾಗಿ ವಕಾಲತ್ತು ವಹಿಸುತ್ತಿರುವ ಕೋಮು ಸೌಹಾರ್ದ ವೇದಿಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಉಲ್ಲಾಸ್, ವಿನಯಕುಮಾರ್, ಮಂಜಪ್ಪ, ಮಹೇಶ್, ನಾಗರಾಜ ಗೌಡ ಉಳ್ಳೂರು, ಪ್ರವೀಣ್, ರಾಘವೇಂದ್ರ ಆರ್., ಸುಧನ್ವ, ನವೀನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.