ಅಕಾಲಿಕ ಮಳೆ ಅವಾಂತರ: ಜಿಲ್ಲೆಯ ಹಲವೆಡೆ ಹಾನಿ
ಸಾಗರ: ತಾಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಆನಂದಪುರಂ ಹೋಬಳಿಯ ಅನೇಕ ಭಾಗಗಳಲ್ಲಿ ಶನಿವಾರ ಸಂಜೆ ಸುರಿದ ಮಳೆ ಹಾಗೂ ವಿಪರೀತ ಗಾಳಿಯಿಂದ ದೊಡ್ಡ ಪ್ರಮಾಣದ ಹಾನಿ ಉಂಟಾಗಿದ್ದು, ಸಿಡಿಲಿನ ಹೊಡೆತಕ್ಕೆ ಮೂರ್ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲ್ಯಾವಿಗೆರೆ ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಯಿಂದ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಲಸೆ ಮಂಜಪ್ಪ ಅವರ ಪತ್ನಿ ವನಜಾಕ್ಷಮ್ಮ ಹಾಗೂ ಮಗಳು ದಿವ್ಯ ಎಂಬುವವರ ಮೇಲೆ ದೊಡ್ಡಗಾತ್ರದ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ದಿವ್ಯಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ವನಜಾಕ್ಷಮ್ಮ ಅವರ ಒಂದು ಕಾಲು ಪೂರ್ಣ ಜಖಂಗೊಂಡಿದೆ. ಇಬ್ಬರನ್ನೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳರಿಗೆ ಕರೆದೊಯ್ಯಲಾಗಿದೆ.
ಸಿಡಿಲಿನಿಂದ ಗಾಯ: ಆನಂದಪುರಂ ಸಮೀಪದ ಆಚಾಪುರದಲ್ಲಿ ಸಿಡಿಲಿನ ಹೊಡೆತಕ್ಕೆ ತೈಯೂಬ್ ಹಾಗೂ ಶೇಕ್ ರಫೀಕ್ ಎಂಬುವವರು ಗಾಯಗೊಂಡಿದ್ದರೆ, ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ.
ಇದೇ ಗ್ರಾಮದಲ್ಲಿ ಹನುಮಂತಪ್ಪ ಎಂಬುವವರ ತೆಂಗಿನಮರ ಸಿಡಿಲಿನಿಂದ ಬೆಂಕಿ ಹತ್ತಿಕೊಂಡ ಪೂರ್ಣ ಸುಟ್ಟುಹೋಗಿದೆ.
ತ್ಯಾವರೆಹಳ್ಳಿಯಲ್ಲಿ ಗಾಳಿಮಳೆಗೆ ವಿದ್ಯುತ್ ತಂತಿ ತುಂಡಾಗಿದ್ದು, ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುಂಬಾಳಿನಲ್ಲಿ ಸಿಡಿಲು ಮನೆಗೆ ಬಡಿದ ಪರಿಣಾಮ ಮಂಜುಳಾ ಎಂಬುವವರ ಮನೆಯ ಗೋಡೆ ಬಿರುಕು ಬಿಟ್ಟಿದೆ. ಹೊನ್ನೆಸರದಲ್ಲಿ ವಿಠ್ಠಲ್ ಶೆಟ್ಟಿ ಎಂಬುವವರ ಮನೆಯ ಮೇಲೆ ಮರ ಮುರಿದು ಬಿದ್ದಿದ್ದು, ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಂಗಡಿಗೆ ನುಗ್ಗಿದ ನೀರು: ಆನಂದಪುರಂ ಮುಖ್ಯರಸ್ತೆ ಕೆಲವು ಅಂಗಡಿಗಳಿಗೆ ಡ್ರೈನೇಜ್ ಬ್ಲಾಕ್ ಆಗಿದ್ದರಿಂದ ಮಳೆ ನೀರು ನುಗ್ಗಿ ವಿಪರೀತ ಹಾನಿಯಾಗಿದೆ. ರಾಜೇಂದ್ರ ಗೌಡ ಎಂಬುವವರ ಕಿರಾಣಿ ಅಂಗಡಿ, ಡಾ. ಆನಂದರಾಜ್ ಅವರ ಕ್ಲಿನಿಕ್ ಹಾಗೂ ಶ್ರೀರಾಮ ಹೊಟೇಲ್ ಸೇರಿದಂತೆ ಅನೇಕ ಅಂಗಡಿ ಹಾಗೂ ಮನೆಗಳಿಗೆ ಮಳೆನೀರು ನುಗ್ಗಿದೆ. ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ, ಟೊಂಗೆಗಳು ಬಿದ್ದ ಪರಿಣಾಮ ಹತ್ತಾರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕೆಲೆವೆಡೆ ರಸ್ತೆಗಳ ಮೇಲೆ ಮರ ಬಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾದ ಬಗ್ಗೆ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

