ನಕ್ಸಲ್ ಪ್ಯಾಕೇಜ್; ಮತ್ತೆ ಮೂಗಿಗೆ ತುಪ್ಪವೇ?
ಶಿವಮೊಗ್ಗ: ನಕ್ಸಲ್ ಪ್ಯಾಕೇಜ್ ಎಂಬ ಪದ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದ ಹಳ್ಳಿಹಳ್ಳಿಗಳಲ್ಲಿ ಜನಜನಿತ. ನಕ್ಸಲ್ ಪ್ಯಾಕೇಜ್ ಬಂದಿದೆಯಂತೆ. ನಮ್ಮೂರು ಸಿಕ್ಕಾಪಟ್ಟೆ ಅಭಿವೃದ್ಧಿ ಆಗಿಬಿಡುತ್ತದಂತೆ ಎಂಬ ಮಾತುಗಳು ಆಗಿಂದಾಗ್ಗೆ ಅನುರಣಿಸುತ್ತಿರುತ್ತವೆ. ಆದರೆ, ಸದ್ಯದ ಮಾಹಿತಿ ಪ್ರಕಾರ 2012- 13ನೇ ಸಾಲಿನಲ್ಲಿ ಜಿಲ್ಲೆಗೆ ಬಿಡುಗಡೆಯಾದ 10 ಕೋಟಿ ರುಪಾಯಿ ನಕ್ಸಲ್ ಪ್ಯಾಕೇಜ್ ಸಂಪೂರ್ಣ ಖಾಲಿಯಾಗಿದೆ.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರೇ ಈ ಅಂಶವನ್ನು ಖಚಿತಪಡಿಸಿದ್ದಾರೆ. ಹಾಗೆಯೇ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಮಾತನ್ನಾಡಿದ್ದಾರೆ.
ನಕ್ಸಲ್ ಪ್ಯಾಕೇಜ್ ಕೊಡುಗೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕು ನಕ್ಸಲ್ಪೀಡಿತ ಗ್ರಾಮಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಈ ಭಾಗದಲ್ಲಿ ನಕ್ಸಲರ ಸಂಘಟನಾತ್ಮಕ ಚಟುವಟಿಕೆ ಹಾಗೂ ಸರ್ಕಾರಕ್ಕೆ ಸವಾಲೊಡ್ಡುವ ಕ್ರಿಯೆ ನಡೆದಾಗ ಸರ್ಕಾರ ನಕ್ಸಲ್ ನಿಗ್ರಹ ದಳ ರಚಿಸಿತು. ಜೊತೆಗೆ ನಕ್ಸಲ್ಪೀಡಿತ ಪ್ರದೇಶದ ಅಭಿವೃದ್ಧಿಗೂ ಸಹ ಚಿಂತನೆ ಆರಂಭವಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಖುದ್ದು ಆಸಕ್ತಿ ವಹಿಸಿ ಪ್ರತಿ ತಿಂಗಳು ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ- ಆಗುಹೋಗುಗಳನ್ನು ಗಮನಿಸಲಾರಂಭಿಸಿದರು. ಇದೇ ಸಂದರ್ಭ ನಕ್ಸಲ್ ಪ್ಯಾಕೇಜ್ ಎಂಬ ಕೊಡುಗೆ ಪ್ರಕಟವಾಯಿತು.
2012- 13ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಗೆ ನಕ್ಸಲ್ ಪ್ಯಾಕೇಜ್ ಬಾಬ್ತು 10 ಕೋಟಿ ಬಂದಿತ್ತು. ಈ ಹಣದಲ್ಲಿ ಏನೆಲ್ಲಾ ಮಾಡಬಹುದು ಎಂದು ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕ್ರಿಯಾಯೋಜನೆ ರೂಪಿಸಿತು. ಬದಲಾದ ಕಾರ್ಯಚಟುವಟಿಕೆಯಂತೆ ಪೊಲೀಸ್ ಇಲಾಖೆಯು ನಕ್ಸಲ್ಪೀಡಿತ ಪ್ರದೇಶದ ಹಳ್ಳಿಹಳ್ಳಿ ಸುತ್ತಿ ಅಲ್ಲಿನ ಜನರ ಅಗತ್ಯವನ್ನು ಪಟ್ಟಿ ಮಾಡಿ ಬಂದು ಜಿಲ್ಲಾಡಳಿತ ಮುಂದೆ ಮಂಡಿಸಿತು. ಅದರಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು.
ಅರೆಕಾಸಿನ ಮಜ್ಜಿಗೆ: ಪ್ರಮುಖವಾಗಿ ರಸ್ತೆ ಕಾಮಗಾರಿ, ಕುಡಿವ ನೀರಿನ ಸೌಲಭ್ಯ, ಉದ್ಯೋಗ ಸೃಷ್ಟಿಗಾಗಿ ಕೈಮಗ್ಗ ಘಟಕ ಸ್ಥಾಪನೆ, ಪ್ಯಾಕೇಜ್ ಹಣವನ್ನೇ ಬಳಸಿ ಸ್ಥಳೀಯ ಪದವೀಧರರಿಗೆ ಶಿಕ್ಷಕ ಹುದ್ದೆ, ಆರೋಗ್ಯ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂಬುದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ವಿವರಣೆ. ಆದರೆ, ಜನರ ನಕ್ಸಲ್ ಪ್ಯಾಕೇಜ್ ಹಣ ಖರ್ಚಾಗಿಲ್ಲ. ಹಾಗೇ ಉಳಿದಿದೆ ಎಂಬುದು ನಕ್ಸಲ್ಪೀಡಿತ ಗ್ರಾಮಗಳ ಜನರ ನಂಬಿಕೆ. ಪ್ಯಾಕೇಜ್ ಮೂಲಕ ಬಂದ ಹಣದಿಂದ ಅಭಿವೃದ್ಧಿ ಆಗುವ ಆಶಾಭಾವನೆ ಅಲ್ಲಿನ ಜನರದ್ದು. ಅಧಿಕಾರಿಗಳ ಪ್ರಕಾರ 10 ಕೋಟಿ ನಕ್ಸಲ್ಪೀಡಿತ ಪ್ರದೇಶದ ಅಭಿವೃದ್ಧಿಗೆ ಶೇ.10 ರಷ್ಟೂ ಸಾಲದು. ಈಗ ಬಂದಿರುವ ಹಣ ಅರೆಕಾಸಿನ ಮಜ್ಜಿಗೆಯಷ್ಟೇ ಎಂದು ವಿವರಿಸುತ್ತಾರೆ.
ನಕ್ಸಲ್ಪೀಡಿತ ಪ್ರದೇಶದಲ್ಲಿ ಈಗಲೂ ನಡೆಯುವ ಗ್ರಾಮ ಸಭೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಅಹವಾಲು ಬರುತ್ತಲೇ ಇದೆ. ಇಲ್ಲಿನ ಅಭಿವೃದ್ಧಿಗೆ ಸಂಪೂರ್ಣ ತೊಡಗಿಸಲು ಸಾಧ್ಯವಿಲ್ಲ. ನಕ್ಸಲ್ಪೀಡಿತ ಗ್ರಾಮಗಳಲ್ಲಿ ಇನ್ನೂ ರಸ್ತೆ ಅಭಿವೃದ್ಧಿ ಆಗಿಲ್ಲ. ನೀರಿನ ಸಮಸ್ಯೆ ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ, ಅಲ್ಲಿ ಆಗಬೇಕಾದ ಕೆಲಸ ಸಾಕಷ್ಟಿದೆ. ಹೀಗಾಗಿ, ನಕ್ಸಲ್ ಪ್ಯಾಕೇಜ್ಗೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸುವ ಅಗತ್ಯವಿದೆ. ಸದ್ಯ ನೀಡಿರುವ ಅನುದಾನ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಈವರೆಗೆ ನಕ್ಸಲ್ಪೀಡಿತ ಗ್ರಾಮಗಳ ಜನರು ನೀಡಿದ ಅಹವಾಲುಗಳ ದೊಡ್ಡ ಪಟ್ಟಿಯೇ ಇದೆ. ಅವುಗಳನ್ನು ಈಡೇರಿಸಲು 5-10 ಕೋಟಿ ಕೊಟ್ಟರೆ ಸಾಲದೆಂಬುದು ಅಧಿಕಾರಿಗಳ ಅಂಬೋಣ.
ಆಯೋಗಕ್ಕೆ ವರದಿ: ಕೋರ್ನಕೋಟೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂಬ ಕಾರಣಕ್ಕೆ ಏ.17 ರಂದು ಅಲ್ಲಿನ ಮತದಾರರು ಪೂರ್ಣ ಪ್ರಮಾಣದಲ್ಲಿ ಮತದಾನ ಬಹಿಷ್ಕರಿಸಿದ ಪ್ರಕರಣವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಪ್ರಕರಣದ ಬಗ್ಗೆ ವಿಸ್ತೃತ ವರದಿ ಸಲ್ಲಿಸಲಾಗಿದೆ ಎಂದು ಡಿಸಿ ವಿಪುಲ್ ತಿಳಿಸಿದರು.
ಅದೇ ರೀತಿ ನಕ್ಸಲ್ಪೀಡಿತ ಪ್ರದೇಶದ ಗ್ರಾಮಗಳಂತೆ ಮೂಲಭೂತ ಸೌಲಭ್ಯ ಕೊರತೆ ಇರುವ ಅನೇಕ ಗ್ರಾಮಗಳು ಜಿಲ್ಲೆಯಲ್ಲಿವೆ. ಅವುಗಳೆಲ್ಲವನ್ನೂ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮತದಾನ ಬಹಿಷ್ಕರಿಸಿದರು ಎಂಬ ಕಾರಣಕ್ಕೆ ಆದ್ಯತೆ ಏನು ಕೊಡುವುದಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

