ಚರಿತ್ರೆ, ಪುರಾಣಗಳ ಕುರುಡು ಚಿಂತನೆ ಅನಗತ್ಯ'
ಪ್ರೊ.ಜಿ.ಪ್ರಶಾಂತನಾಯಕ್ರ ಕೃತಿಗಳ ಬಿಡುಗಡೆಗೊಳಿಸಿ ಖ್ಯಾತ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ
ಶಿವಮೊಗ್ಗ: ಅಂತರ್ಜಾತಿ ವ್ಯವಸ್ಥೆಗಿಂತಲೂ ಜಾತ್ಯತೀತ ವ್ಯವಸ್ಥೆ ನೆಲೆಗೊಳಿಸಲು ಜಾತಿರಹಿತ ವಿವಾಹದ ಅನುಷ್ಠಾನ ಪೂರಕ ಆಗುತ್ತದೆ ಎಂದು ಖ್ಯಾತ ಚಿಂತಕ, ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಅಂತರ್ಜಾತಿ ವಿವಾಹವಾದವರಲ್ಲೂ ಜಾತಿಪ್ರಜ್ಞೆ ಕಾಡುತ್ತಿರುತ್ತದೆ. ಒಂದೇ ಜಾತಿಯವರು ಮದುವೆಯಾದಾಗಲೂ ಈ ಜಾತಿ ಪ್ರಜ್ಞೆ ಜಾಗೃತ ಆಗಿರುತ್ತದೆ. ಜಾತಿ ವ್ಯವಸ್ಥೆ ಮುರಿದು ಜಾತಿರಹಿತ ಸಮಾಜದ ನಿರ್ಮಾಣಕ್ಕೆ ಜಾತಿರಹಿತ ವಿವಾಹದ ಪರಿಕಲ್ಪನೆ ಪೂರಕ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಮಂಗಳವಾರ ಪ್ರೊ. ಜಿ.ಪ್ರಶಾಂತ ನಾಯಕ್ ಅವರ 'ನಾನಕ್ಕನೆನ್ ನಿನಗೆ, ತಂಗೆ!' ಮತ್ತು 'ಪ್ರೇಮ ನವೋದಯ' ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹಕ್ಕಿಂತಲೂ ಜಾತಿರಹಿತವ ಜಾತ್ಯತೀತ ವಿವಾಹ ಪರಿಕಲ್ಪನೆಗೆ ಆದ್ಯತೆ ನೀಡಿ ಸಮಾನತೆಯ ಸದಾಶಯ ಕೇಂದ್ರೀಕರಿಸಿಕೊಂಡ ಸಾಮಾಜಿಕ ಸ್ಥಿತ್ಯಂತರಕ್ಕೆ ಪೂರಕ ವೇದಿಕೆಯನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದರು.
ಬದಲಾವಣೆಗೆ ನಾಂದಿ: ಪ್ರೇಮವಿವಾಹವು ರೂಢಿಗತ ಸಾಮಾಜಿಕ ಸಾಂಪ್ರದಾಯಿಕ ವ್ಯವಸ್ಥೆಯ ಉಲ್ಲಂಘನೆಯಾಗಿಯೇ ಪರಿಗಣಿಸಲ್ಪಡುತ್ತಿದೆ. ಈ ಕಾರಣಕ್ಕಾಗಿಯೇ ಪ್ರೇಮ ವಿವಾಹವಾದವರನ್ನು ಕೊಲ್ಲುತ್ತಿರುವ ಅಮಾನವೀಯ ಪ್ರವೃತ್ತಿ ವಿಜೃಂಭಿಸುತ್ತಿದೆ. ಇಂಥ ಸಂದರ್ಭ ಜಾತಿರಹಿತ ವೈವಾಹಿಕ ವ್ಯವಸ್ಥೆಯು ಸಮಾನತೆಯ ಸದಾಶಯವನ್ನು ಎತ್ತಿಹಿಡಿದು ಮಹತ್ವದ ಬದಲಾವಣೆಗೆ ನಾಂದಿ ಹಾಡಬಲ್ಲದು ಎಂದರು.
ಕಳೆದ ಶತಮಾನವು ಹಲವು ಚಿಂತನೆಗಳ ಕ್ರಾಂತಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಆ ಕಾರಣಕ್ಕಾಗಿಯೇ ಅದು ಬಹುಮುಖಿಯಾಗಿತ್ತು. ಹೆಣ್ಣಿನ ಬಿಡುಗಡೆಗೆ ಪೂರಕವಾಗಿತ್ತು. ಆದರೆ, 21ನೇ ಶತಮಾನ ಕೇವಲ ಏಕಮುಖಿಯಾಗಿ ಬೆಳೆಯುತ್ತಿದೆ. ಇದು ಅಪಾಯಕಾರಿ. ಇಂಥ ಸಂದರ್ಭ ಪ್ರೊ. ಜಿ.ಪ್ರಶಾಂತ ನಾಯಕ್ ಅವರ 'ನಾನಕ್ಕನೆನ್ ನಿನಗೆ, ತಂಗೆ!' ಮತ್ತು 'ಪ್ರೇಮ ನವೋದಯ' ಕೃತಿಗಳು ಸ್ತ್ರೀ ಪಾತ್ರಗಳನ್ನು ವಿಭಿನ್ನವಾಗಿ ವಿಮರ್ಶೆಗೊಳಪಡಿಸಿವೆ ಎಂದರು.
ಚರಿತ್ರೆ ಮತ್ತು ಪುರಾಣಗಳ ಬಗ್ಗೆ ಕುರುಡು ಚಿಂತನೆಗಳಿರಬಾರದು. ಅದಕ್ಕೆ ಬದಲಾಗಿ ಪುರಾಣಗಳನ್ನು ಚರಿತ್ರೆಗಳನ್ನಾಗಿಸದೇ ಅವುಗಳನ್ನು ರೂಪಕವಾಗಿರಿಸಿಕೊಂಡು ಒಳನೋಟಗಳನ್ನು ಕಾಣುವ ಪ್ರಯತ್ನ ಮಾಡಬೇಕು. ಇದಕ್ಕೆ ಉತ್ತಮ ಉದಾಹರಣೆ ಎಂದರೆ 'ನಾನಕ್ಕನೆನ್ ನಿನಗೆ, ತಂಗೆ!' ಈ ಕೃತಿ ಕುವೆಂಪು ಅವರ 'ಶ್ರೀರಾಮಾಯಣದರ್ಶನಂ' ಒಂದು ಮಹಾಕಾವ್ಯ ಎಂಬುದನ್ನು ಸಾಬೀತುಪಡಿಸುತ್ತದೆ. ಕುವೆಂಪು ಅವರ ಪ್ರತಿಭೆಯನ್ನು ವರ್ತಮಾನದಲ್ಲಿ ವಿಭಿನ್ನವಾಗಿ ಬಿಂಬಿಸಿದ ವಿಮರ್ಶೆ ಈ ಕೃತಿಯಿಂದ ಲಭ್ಯವಾಗಿದೆ ಎಂದರು.
ಅಕ್ಷರ ಅಂತಃಕರಣವಾಗಲಿ: ಅಕ್ಷರ ಎನ್ನುವುದು ಅಸ್ತ್ರ ಆಗಬಾರದು. ಅಂತಃಕರಣ ಆಗಬೇಕು. ದ್ವೇಷದಿಂದ ನಡೆಯುವ ವಿಮರ್ಶೆ ಅಸಹನೀಯವಾದುದು. ಇವತ್ತು ವಿಮರ್ಶೆಯಲ್ಲಿನ ಸಾಹಿತ್ಯಕ ಸಮರ ರಾಜಕೀಯವನ್ನೂ ಮೀರಿಸುವ ಪರಿಸ್ಥಿತಿ ತಲುಪಿದೆ. ವಿಮರ್ಶೆಯನ್ನು ಅಸ್ತ್ರದ ಹಾಗೆ ಬಳಸಿದರೆ ಎಷ್ಟೋ ಪ್ರತಿಭೆಯ ಭ್ರೂಣಹತ್ಯೆಗಳಾಗುತ್ತವೆ. ಭ್ರೂಣಾವಸ್ಥೆಯಲ್ಲಿಯೇ ಪ್ರತಿಭೆ ಎನ್ನುವುದು ಸಾವಿಗೀಡಾಗುತ್ತದೆ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ಅಧ್ಯಕ್ಷತೆ ವಹಿಸಿದ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಎಸ್.ಎ. ಬಾರಿ, ಕುಲಸಚಿವರಾದ ಪ್ರೊ. ಮಲ್ಲಿಕಾ ಎಸ್. ಘಂಟಿ, ಕೃತಿಯ ಪ್ರಕಾಶಕ ಜಿ.ಬಿ.ಟಿ. ಮೋಹನ್ ಮಾತನಾಡಿದರು.
ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿ, ವಿವಿ ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಆರ್ತೋಬನಾಯಕ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

