ಕುವೆಂಪು ವಿವಿ ಹಗರಣದ ತನಿಖಾ ವರದಿ ಸಲ್ಲಿಕೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ನಕಲಿ ಅಂಕಪಟ್ಟಿ ಮತ್ತು ಉತ್ತರ ಪತ್ರಿಕೆ ಅದಲು ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ರಚಿಸಿದ್ದ ತನಿಖಾ ಸಮಿತಿ ಅಂತಿಮ ವರದಿಯನ್ನು ಸಲ್ಲಿಸಿದೆ.
ನಿವೃತ್ತ ನ್ಯಾಯಮೂರ್ತಿ ಬಸವರಾಜ ತಡಾಲ್ ನೇತೃತ್ವದ ತನಿಖಾ ತಂಡ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಯನ್ನು ಪಟ್ಟಿ ಮಾಡಿದ್ದು, ಕ್ರಮಕ್ಕೆ ಶಿಫಾರ್ಸು ಮಾಡಿ ವರದಿ ಸಲ್ಲಿಸಿದೆ.
ಪ್ರಕರಣ ದಾಖಲು: ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿರಬೇಕಾದ ಉತ್ತರ ಪತ್ರಿಕೆಗಳು, ಖಾಲಿ ಅಂಕಪಟ್ಟಿ, ಹಾಲೋಗ್ರಾಮುಗಳು ವಿಶ್ವವಿದ್ಯಾಲಯದ ಸಿಬ್ಬಂದಿಯ ಮನೆಯಲ್ಲಿದ್ದಿದ್ದು, ಅಲ್ಲಿಂದಲೇ ನಕಲಿ ಅಂಕಪಟ್ಟಿ ಜಾಲ ಕಾರ್ಯನಿರ್ವಹಿಸುತ್ತಿದ್ದ ಪ್ರಕರಣವನ್ನು ಭದ್ರಾವತಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಶ್ರೀಧರ್ ನೇತೃತ್ವದ ತಂಡ ಭೇದಿಸಿ ಪ್ರಕರಣ ದಾಖಲಿಸಿತ್ತು. ಈ ಮಧ್ಯೆ ಆಂತರಿಕ ತನಿಖೆಗೆ ಆಸಕ್ತಿ ತೋರಿಸಿದ್ದ ವಿಶ್ವವಿದ್ಯಾಲಯ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿತ್ತು.
9 ಮಂದಿ ಅಮಾನತು: ತನಿಖಾ ಸಮಿತಿ ನೀಡಿದ ಮಧ್ಯಂತರ ವರದಿ ಆಧಾರದ ಮೇಲೆ ಈಗಾಗಲೇ ವಿಶ್ವವಿದ್ಯಾಲಯ 9 ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ತನಿಖಾ ಸಮಿತಿಯು ವಿಶ್ವವಿದ್ಯಾಲಯ ಅಂಕಪಟ್ಟಿ ಹಗರಣದ ಮೂಲವನ್ನು ತಡಕಾಡಿ, ಯಾವ ಹಂತದಲ್ಲಿ ವಂಚನೆ ನಡೆದಿದೆ, ಎಷ್ಟು ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂಬ ಅಂಶವನ್ನು ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದಾರೆ. ಇದೀಗ ಈ ವರದಿಯನ್ನು ಸ್ವೀಕರಿಸಿರುವ ಕುಲಪತಿ ಪ್ರೊ.ಎಸ್.ಎ.ಬಾರಿಯವರು ಮುಂಬರುವ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಸದ್ಯ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಿಂಡಿಕೇಟ್ ಸಭೆ ಕರೆಯುವಂತಿಲ್ಲ ಎಂಬ ಕಾರಣಕ್ಕೆ ಚುನಾವಣೆ ಫಲಿತಾಂಶ ಬಂದ ನಂತರ ಮೇ ಉತ್ತರಾರ್ಧದಲ್ಲಿ ಸಿಂಡಿಕೇಟ್ ಸಭೆ ನಡೆಯಲಿದೆ. ಸಭೆಯಲ್ಲಿ ವರದಿ ಮಂಡನೆಯಾಗಲಿದ್ದು, ಸಿಂಡಿಕೇಟ್ ಸದಸ್ಯರು ವರದಿಯ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

