ಡಿಸಿಸಿಬಿ ಅಧ್ಯಕ್ಷ ಮಂಜುನಾಥ ಗೌಡ ಬಂಧನ
ಶಿವಮೊಗ್ಗ: ಬಹುಕೋಟಿ ರುಪಾಯಿ ಅಡಮಾನ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ 18 ಮಂದಿಯನ್ನು ಬಂಧಿಸಿದಂತಾಗಿದೆ.
ಗುರುವಾರ ಸಂಜೆ ವಿಚಾರಣೆಗೆ ಕರೆಸಿದ್ದ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ರಾತ್ರಿ 11.30ರ ನಂತರ ಮಂಜುನಾಥ ಗೌಡರನ್ನು ವಶಕ್ಕೆ ಪಡೆದುಕೊಂಡರು. ಶುಕ್ರವಾರ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿದ ತನಿಖಾ ತಂಡ, ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಇಲ್ಲಿನ 2ನೇ ಜೆಎಂಎಫ್ಸಿ ನ್ಯಾಯಾಧೀಶ ವಿಜಯಕುಮಾರ್ ರೈ ಅವರ ಎದುರು ಹಾಜರುಪಡಿಸಿದಾಗ ಪರ- ವಿರೋಧ ವಾದ ನಡೆಯಿತು. ವಾದ- ವಿವಾದ ಆಲಿಸಿದ ನ್ಯಾಯಾಧೀಶರು ಮಂಜುನಾಥ ಗೌಡರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಈ ಅವಧಿಯಲ್ಲಿ ಅವರ ಪತ್ನಿ ಹಾಗೂ ಮಕ್ಕಳ ಭೇಟಿಗೆ ತಡೆ ಇಲ್ಲ ಎಂದರು.
ಅವ್ಯವಹಾರ: ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆಯಲ್ಲಿ ನಕಲಿ ಆಭರಣವಿಟ್ಟು ಹಾಗೂ ಆಭರಣವಿಡದೆ ಸುಮಾರು 62 ಕೋಟಿ ಅವ್ಯವಹಾರ ನಡೆದಿರುವುದು ಎರಡು ವಾರಗಳ ಹಿಂದಷ್ಟೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಖಾ ವ್ಯವಸ್ಥಾಪಕಿ ಶೋಭಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಕಾರು ಚಾಲಕ ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಹಂತ- ಹಂತವಾಗಿ 15 ಮಂದಿಯನ್ನು ಬಂಧಿಸಿದ್ದರು.
ಬಂಧಿತರು ನೀಡಿದ ಮಾಹಿತಿಯನುಸಾರ ಡಿಸಿಸಿಬಿ ಅಧ್ಯಕ್ಷ ಮಂಜುನಾಥ ಗೌಡರೂ ಈ ಪ್ರಕರಣದಲ್ಲಿ ಪಾಲುದಾರರೆಂದು ಕಂಡುಬಂದ ಹಿನ್ನೆಲೆಯಲ್ಲಿ ಗುರುವಾರ ತಡ ರಾತ್ರಿ ವಶಕ್ಕೆ ಪಡೆಯಲಾಯಿತು. ಅವರೊಂದಿಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗಭೂಷಣ ಸೇರಿದಂತೆ ಶಾಖಾ ವ್ಯವಸ್ಥಾಪಕಿ ಶೋಭಾರ ತಂದೆ ಬಸಪ್ಪ ಅವರನ್ನು ವಶಕ್ಕೆ ಪಡೆಯಲಾಯಿತು. ಎಲ್ಲರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ತೀವ್ರ ವಿಚಾರಣೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಆರ್.ಎಂ. ಮಂಜುನಾಥಗೌಡ, ನಾಗಭೂಷಣ್ ಸೇರಿದಂತೆ ಡಿಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಹಾಗೂ ಕೆಲ ಮಾಜಿ ವ್ಯವಸ್ಥಾಪಕರು ಸೇರಿದಂತೆ ಸರಿಸುಮಾರು 26ಕ್ಕೂ ಹೆಚ್ಚು ಜನರನ್ನು ವಿಶೇಷ ಪೊಲೀಸ್ ತಂಡ ವಿಚಾರಣೆಗೊಳಪಡಿಸಿತ್ತು. ರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಿತ್ತು.
ನಗರದ ಮಹಿಳಾ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ವಿಚಾರಣೆಯ ನೇತೃತ್ವವನ್ನು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರೇ ವಹಿಸಿದ್ದರು. ಜತೆಗೆ ಹೆಚ್ಚುವರಿ ಎಸ್ಪಿ ದಯಾಳ್, ಡಿಸಿಐಬಿ ಇನ್ಸ್ಪೆಕ್ಟರ್ ಜೈರಾಜ್, ಸಬ್ಇನ್ಸ್ಪೆಕ್ಟರ್ ವಿಚಾರಣೆ ಕಾರ್ಯ ನಡೆಸಿದರು.
ಘಟನೆಯ ಪ್ರಧಾನ ಆರೋಪಿ ಶೋಭಾ ಅವರನ್ನೂ ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸಲಾಗಿ ಅವರಿಂದಲೂ ಮಹತ್ವದ ಮಾಹಿತಿ ಲಭ್ಯವಾಗಿತ್ತು. ಅಂತಿಮವಾಗಿ ಮಂಜುನಾಥ ಗೌಡರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಪುಷ್ಟಿ ನೀಡುವ ಸಂಗತಿಗಳು ವಿಚಾರಣೆ ವೇಳೆ ತಿಳಿದುಬಂದಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆಗೆ ಕರೆಸಿದ್ದ ಉಳಿದವರನ್ನು ಬಿಟ್ಟು ಕಳಿಸಲಾಯಿತು.ಹಲವು ವರ್ಷಗಳಿಂದ ಡಿಸಿಸಿಬಿಯಲ್ಲಿ ಕೋಟಿ ಕೋಟಿ ಅಕ್ರಮ ನಡೆದಿದ್ದರೂ, ಪ್ರಕರಣ ತಮ್ಮ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿ ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಡಿಸಿಸಿಬಿ ಪ್ರಧಾನ ವ್ಯವಸ್ಥಾಪಕ ನಾಗಭೂಷಣ್ರನ್ನು ಪೊಲೀಸರು ಬಂಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

