ಒತ್ತಡಕ್ಕೆ ಮಣಿದು ನಿಲುವು ಬದಲಾವಣೆ: ಬಿಎಸ್ವೈ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.4
ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಸಿಲುಕಿ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ.
ಮಂಗಳವಾರ ರಾತ್ರಿ 10ಗಂಟೆಗೆ ಶಿವಮೊಗ್ಗದಲ್ಲಿ ದಿಢೀರ್ ಆಗಿ ಆಯೋಜನೆಗೊಂಡ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಚುನಾವಣೆ ಬಿಸಿ ಪ್ರಾರಂಭವಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿಯಿಂದ ಹೆಚ್ಚು ಜನರನ್ನು ಆಯ್ಕೆ ಮಾಡಬೇಕೆಂಬುದು ಸಂಕಲ್ಪತೊಟ್ಟು ಹೊರಟಿದ್ದೆ. ಆದರೆ, ದಿಢೀರ್ ಎಂದು ನನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ ಎಂದು ಹೇಳಿದರು.
ಮತ್ತೆ ತಪ್ಪಾಗಬಾರದು: ಕಾರ್ಯಕರ್ತರಲ್ಲಿ ಗೊಂದಲ ಇರಬಾರದು, ಸ್ಪಷ್ಟತೆ ಇರಬೇಕು. ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ರಾಜ್ಯದ ಉದ್ದಗಲಕ್ಕೂ ಓಡಾಡಬೇಕೆಂದು ಬಯಸಿದ್ದೆ. ನಮ್ಮ ತಪ್ಪಿನಿಂದಾಗಿ ಬಿಜೆಪಿ-ಕೆಜೆಪಿ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮತ್ತೆ ಈ ತಪ್ಪಾಗಾರದೆಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಪಕ್ಷದ ಮುಖಂಡರು ಇಡೀ ರಾಜ್ಯಕ್ಕೆ ಸಂದೇಶ ಹೋಗಬೇಕೆಂದರೆ ನೀವು ಸ್ಪರ್ಧಿಸಬೇಕೆಂದಿದ್ದಾರೆ. ಅವರಿಗೆ ನನ್ನ ನಿರ್ಧಾರ ತಿಳಿಸುವ ಉದ್ದೇಶದಿಂದ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ತಿಳಿಸಲು ಉದ್ದೇಶಿಸಿದ್ದೇನೆ ಎಂದರು.
ರಾಜ್ಯದ ಬೇರೆ ಸಂಸದರಿಗೆ ಹೋಲಿಸಿದರೆ ಹೆಚ್ಚು ಸಮಯ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಂಸದ ಬಿ.ವೈ. ರಾಘವೇಂದ್ರ. ಈ ಮಾತನ್ನು ನನ್ನ ಮಗ ಎಂದು ಹೇಳುತ್ತಿಲ್ಲ. ಹಾಗೆಯೇ ಸಂಸದರಾಗಿ ಮತ್ತೆ ಚುನಾವಣೆ ಗಿಳಿಯಲು ಯಾವುದೇ ಮೈನಸ್ ಪಾಯಿಂಟ್ ಇಲ್ಲ. ಆದರೆ ಬೇರೆ ಬೇರೆ ಕಾರಣಕ್ಕಾಗಿ ಕೆಲವು ಸಲಹೆಗಳು ಬಂದಿವೆ.
ಹೀಗಾಗಿ ಶಿಕಾರಿಪುರ ರಾಜಕೀಯ ಜನ್ಮಕೊಟ್ಟಕಾರಣ ಕಾರ್ಯಕರ್ತರ ಸಲಹೆ ಕೇಳಿದ್ದೇನೆಂದರು.
ಬದಲಾದ ಸನ್ನಿವೇಶ: ಇದೀಗ ಸನ್ನಿವೇಶ ಬದಲಾಗಿದೆ. ಹೀಗಾಗಿ ಫೆ.10-11 ರಂದು ಜಿಲ್ಲೆಯಲ್ಲೇ ಇದ್ದು ವಿವಿಧ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದೇನೆಂದರು.
ಒಂದು ರೀತಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಫೆ.27 ಅಥವಾ 1ನೇ ತಾರೀಖಿನಿಂದ ಚುನಾವಣೆ ನೀತಿ ಸಂಹಿತೆ ಅಥವಾ ದಿನಾಂಕ ಘೋಷಣೆಯಾಗಬಹುದು. ಆಮೇಲೆ ಯಾವುದೇ ಯಾವುದೇ ಕಾರ್ಯಕ್ರಮ ನಡೆಸಲು ಸಾದ್ಯವಿಲ್ಲ. ಕಾರ್ಯಕರ್ತರನ್ನು ಸೇರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಈ ರೀತಿಯ ಸಭೆಗಳನ್ನು ಹೆಚ್ಚು ಹೆಚ್ಚು ಈಗಲೇ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಜನ ಬೆಂಬಲ ಮುಖ್ಯ: ನಾಳೆ ಬರುವ ಚುನಾವಣೆಯಲ್ಲಿ ನಾವು ಮಾಡಿದ ಅಭಿವೃದ್ಧಿ ಯೋಜನೆಗಳು ಮತ ಬ್ಯಾಂಕ್ ಆಗಿ ಪರಿವರ್ತನೆ ಆಗಬೇಕು. ಕಾಡಿಗೆ ರಾಜ ಎಂದು ಮಲಗಿದ್ದರೆ ಪ್ರಾಣಿ ಬಂದು ಬಾಯಿಗೆಬಂದು ಬೀಳುವುದಿಲ್ಲ. ಎಷ್ಟೇ ಒಳ್ಳೆ ಕೆಲಸ ಮಾಡಿದ್ದರೂ ಚುನಾವಣೆ ವೇಳೆ ಜನ ಬೆಂಬಲ ಪಡೆಯುವುದು ಮುಖ್ಯ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕರ್ತರು ನಾಳೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರ, ಮೊಹಲ್ಲಾಗಳಿಗೆ ತೆರಳಿ ಅಲ್ಲಿನ ಪ್ರಮುಖರೊಂದಿಗೆ ಮಾತುಕತೆ ಮಾಡಬೇಕು, ದೇಶದ ಹಿತದೃಷ್ಟಿಯಿಂದ ಸಮರ್ಥ ಪ್ರಧಾನಿ ಆಯ್ಕೆಯಾಗಿ ಬಿಜೆಪಿ ಬೆಂಬಲಿಸುವಂತೆ ಕೋರಿ ಮನವೊಲಿಸಬೇಕು. ಹಾಗೂ ಯುವಕರನ್ನು ಗುರುತಿಸಿ ಚುನಾವಣೆ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಮತದಾರರ ಮನವೊಲಿಕೆಗೆ ಈಗಿನಿಂದಲೇ ಪ್ರಯತ್ನಿಸಿ ಎಂದು ಕರೆ ನೀಡಿದರು.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ರುದ್ರೇಗೌಡ, ಜ್ಯೋತಿಪ್ರಕಾಶ್, ಮಂಜುಳಾ, ಗುರುಮೂರ್ತಿ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಹಾಜರಿದ್ದರು.
ಅಭಿಮಾನಿಗಳ ಅನುಮೋದನೆ..
ಶಿಕಾರಿಪುರ ಕಾರ್ಯಕರ್ತರ ಸಭೆಯಲ್ಲಿ ಬಿಎಸ್ವೈ ಅವರೇ ಅಭ್ಯರ್ಥಿಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಭೆಯಲ್ಲಿ ಮುಖಂಡ ಗುರುಮೂರ್ತಿ ಹೇಳುತ್ತಿದ್ದಂತೆ ಶಿವಮೊಗ್ಗ ಸಭೆಯಲ್ಲಿದ್ದ ಬಿಎಸ್ವೈ ಅಭಿಮಾನಿಗಳು ಚಪ್ಪಾಳೆ ಹೊಡೆದು ಶಿಕಾರಿಪುರ ಕಾರ್ಯಕರ್ತರ ಭಾವನೆಗೆ ಅನುಮೋದನೆ ಸಲ್ಲಿಸಿದರು. ನಂತರ ಮಾತನಾಡಿದ ಯಡಿಯೂರಪ್ಪ, ನಾನು ಚುನಾವಣೆಗೆ ನಿಲ್ಲುತ್ತೇನೆಂದು ಈ ವರೆಗೆ ಘೋಷಿಸಿಲ್ಲ ಎಂದರು. ಆದರೆ, ಪಕ್ಷದ ವರಿಷ್ಠರು, ಕಾರ್ಯಕರ್ತರು ಏನು ಅಪೇಕ್ಷೆ ಪಡುತ್ತಾರೋ ಆ ರೀತಿ ನಡೆಯುತ್ತೇನೆಂದು ಹೇಳುವ ಮೂಲಕ ಪರೋಕ್ಷವಾಗಿ ಚುನಾವಣೆಗೆ ಧುಮುಕಿರುವ ಸೂಚನೆಯನ್ನು ರವಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

