ಶಿವಮೊಗ್ಗ

ಪಟಗುಪ್ಪ ಸೇತುವೆಗೆ ಹೆಚ್ಚುವರಿ 3 ಕೋಟಿ

Published On :

ಕ.ಪ್ರ.ವಾರ್ತೆ ಹೊಸನಗರ  ಫೆ. 4
ಮುಂಬರುವ 3 ತಿಂಗಳಲ್ಲಿ ಪಟಗುಪ್ಪ ಸೇತುವೆಯ ಬಹುತೇಕ ಕಾಮಗಾರಿ ಮುಗಿಸಬೇಕು. ಹೆಚ್ಚುವರಿ 3 ಕೋಟಿ ಹಣ ಅಗತ್ಯವಿದ್ದು, ಅದನ್ನು ಒದಗಿಸುತ್ತೇನೆ. ಅಗತ್ಯವಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿ. ಒಟ್ಟಿನಲ್ಲಿ ವರ್ಷದೊಳಗೆ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯ ಶಾಸಕ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದ್ದಾರೆ.
'ಕನ್ನಡಪ್ರಭ'ದಲ್ಲಿ ಫೆ.3ರಂದು ಪ್ರಕಟಗೊಂಡ 'ಪಟಗುಪ್ಪ ಸೇತುವೆ ಕಾಮಗಾರಿಗೆ ಮುಕ್ತಿ ಎಂದು?' ವರದಿಗೆ ಸ್ಪಂದಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಪಟಗುಪ್ಪದ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದ ಕಾಗೋಡು, ಕಾಮಗಾರಿಯಲ್ಲಿ ವಿಳಂಬ ಧೋರಣೆ ಸಲ್ಲ. ಕಾಮಗಾರಿ ಚುರುಕುಗೊಳಿಸಲು ನಿಮಗೇನಾದರು ಸಮಸ್ಯೆ ಇದ್ದರೆ ಸರಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸುತ್ತೇನೆ. ವರ್ಷದೊಳಗೆ ಕಾಮಗಾರಿ ಮುಗಿಯಬೇಕು ಹೆಚ್ಚಿನ ವಿಳಂಬ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷರೊಂದಿಗೆ ಚರ್ಚೆ: ಪಟಗುಪ್ಪ ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿರುವ ಕೆಎಸ್‌ಆರ್‌ಡಿಸಿಎಲ್ ಸಂಸ್ಥೆ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರಿಗೆ ಖುದ್ದು ಭೇಟಿ ಮಾಡಿ ಪರಿಶೀಲಿಸಿ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸದ್ಯದಲ್ಲೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದರು.
ಹಿನ್ನೀರು ಇರುವಾಗ ಮತ್ತು ಮಳೆ ಬರುವ ಸಂದರ್ಭದಲ್ಲೂ ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಲು ಸಾಧ್ಯವಿದ್ದರೆ ಕೂಡಲೇ ಅದನ್ನು ಕೂಡ ಅಳವಡಿಸಿಕೊಳ್ಳಿ. ಹಿನ್ನೀರು ತೀರದ ದಂಡೆಗೆ ಪಿಚ್ಚಿಂಗ್ ಬದಲಿಗೆ ಕಾಂಕ್ರೀಟ್ ವಾಲ್ ನಿರ್ಮಿಸುವ ಬಗ್ಗೆ ಯೋಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯ 3 ತಿಂಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಅವಕಾಶ ಇದ್ದರೂ ಕಾಮಗಾರಿ ನಿರ್ವಹಿಸುತ್ತಿಲ್ಲ ಎಂಬ ಸಾರ್ವಜನಿಕರ ಅಸಮಧಾನಕ್ಕೆ, ಸರಿ ಬಿಡಿ ಇವತ್ತಿಂದ ಲೆಕ್ಕ ಇನ್ಮುಂದೆ ಕಾಮಗಾರಿ ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ಕಾಗೋಡು ವಿಶ್ವಾಸ ವ್ಯಕ್ತಪಡಿಸಿದರು.
ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಈಗಾಗಲೇ 29.3 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು 3 ಕೋಟಿ ಹೆಚ್ಚುವರಿ ಬೇಕಾಗಲಿದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು. ವರ್ಷದೊಳಗೆ ಕಾಮಗಾರಿ ಮುಗಿಸುವ ಸಂಬಂಧ ತುರ್ತು ಕ್ರಮ ಕೈಗೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆ ಮಾಡಲಿ: ಪಟಗುಪ್ಪ ಸೇತುವೆ ಮತ್ತು ರಸ್ತೆ ಕಾಮಗಾರಿ ಸಂಬಂಧ ನಡೆಸಿದ ಪ್ರತಿಭಟನೆಯಲ್ಲಿ ಸೊರಬದ ಮಾಜಿ ಶಾಸಕರು ಭಾಗವಹಿಸಿದ್ದರಲ್ಲ ಎಂಬ ಪ್ರಶ್ನೆಗೆ ಪ್ರತಿಭಟನೆಗೆ ನಾನಾಕಾರಣಗಳಿವೆ ಎಂದು ಚುಟುಕಾಗಿ ಉತ್ತರಿಸಿ, ಸೊರಬದಿಂದ ಇಲ್ಲಿಗೆ ಬರುವುದು ಹಳೇ ಬೇರುಗಳ ಹುಡುಕಾಟಕ್ಕೆ ಇರಬಹುದು ಎಂದು ವ್ಯಂಗ್ಯವಾಡಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ಗುಬ್ಬಿಗಾ ಅನಂತರಾವ್, ಸದಸ್ಯ ಎಚ್.ಬಿ. ಕಲ್ಯಾಣಪ್ಪಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಏರಗಿ ಉಮೇಶ್, ತಾಲೂಕು ಪ್ರಮುಖರು, ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹೊಸನಗರ-ಪಟಗುಪ್ಪ ಸರ್ಕಾರಿ ಬಸ್ಸಿಗೆ ಚಾಲನೆ
ಹೊಸನಗರ: ಪಟ್ಟಣದ ಪ್ರಮುಖ ಬಸ್ ನಿಲ್ದಾಣದ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪಟಗುಪ್ಪ-ಹೊಸನಗರ ಕೆಎಸ್‌ಆರ್‌ಟಿಸಿ ಬಸ್ಸು ಸಂಚಾರಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಚಾಲನೆ ನೀಡಿದರು.
ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಸ್ಸಿನ ಸೌಲಭ್ಯ ಇರದಿರುವುದು ನನ್ನ ಗಮನದಲ್ಲಿದ್ದು ಹೆಚ್ಚಿನ ಬಸ್ಸನ್ನು ಒದಗಿಸುವ ಬಗ್ಗೆ ಗಮನಹರಿಸುತ್ತೇನೆ.
ಸರ್ಕಾರಿ ಬಸ್ಸನ್ನು ಒದಗಿಸಿದರೂ ಟೈಮಿಂಗ್ಸ್ ಪರ್ಮಿಟ್ ದೊಡ್ಡ ಸಮಸ್ಯೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದು, ಯಾವುದೇ ಲಾಬಿಗೆ ಮಣಿಯದೆ ಕೆಎಸ್‌ಆರ್‌ಟಿಸಿ ಬಸ್ಸಿನ ಸಂಚಾರಕ್ಕೆ ಸಹಕರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎಪಿಎಂಸಿ ಅಧ್ಯಕ್ಷ ಅನಂತರಾವ್, ಸದಸ್ಯ ಕಲ್ಯಾಣಪ್ಪಗೌಡ, ಪಪಂ ಸದಸ್ಯರಾದ ರತ್ನಾಕರಶೆಟ್ಟಿ, ಚಂದ್ರಶೇಖರ್ ಶೇಟ್, ಪ್ರಮುಖರಾದ ಪಟೇಲ್ ಗರುಡಪ್ಪಗೌಡ, ಬಾಬುಕಾಮತ್, ಜಯನಗರ ಗುರು, ಪಟ್ಟಣದ ಪ್ರಮುಖರು ಮತ್ತು ಪಟಗುಪ್ಪದ ನಿವಾಸಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.